ಕರಾಳ ಕಾನೂನು... ನರೇಗಾ ಮೇಲೆ ಮೋದಿ ಸರ್ಕಾರ ಬುಲ್ಡೋಜರ್ ಹತ್ತಿಸಿದೆ: ಸೋನಿಯಾ ಗಾಂಧಿ ಆರೋಪ | Sonia Gandhi

Sonia Gandhi |  ಕಾಂಗ್ರೆಸ್​ ಹಿರಿಯ ನಾಯಕ ಸೋನಿಯಾ ಗಾಂಧಿ
Sonia Gandhi | ಕಾಂಗ್ರೆಸ್​ ಹಿರಿಯ ನಾಯಕ ಸೋನಿಯಾ ಗಾಂಧಿ
Published on
Sonia Gandhi: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಮಸೂದೆಯನ್ನು (MGNREGA) ಬದಲಿಸುವ ಮೂಲಕ ಕೇಂದ್ರ ಸರ್ಕಾರ ಮನರೇಗಾ ಯೋಜನೆಯ ಮೇಲೆ ಬುಲ್ಡೋಜರ್ ಹತ್ತಿಸಿದೆ ಎಂದು ಕಾಂಗ್ರೆಸ್​ ಹಿರಿಯ ನಾಯಕ ಸೋನಿಯಾ ಗಾಂಧಿ ಆರೋಪಿಸಿದರು.
ಕಾಂಗ್ರೆಸ್​ ಪಕ್ಷದ ಅಧಿಕೃತ ಎಕ್ಸ್ ಖಾತೆಯಲ್ಲಿ ಸೋನಿಯಾ ಗಾಂಧಿಯವರ ಭಾಷಣದ ವಿಡಿಯೋವನ್ನು ಅದರಲ್ಲಿ ಹಂಚಿಕೊಳ್ಳಲಾಗಿದ್ದು, ಮಸೂದೆ ಬದಲಾವಣೆಯ ಕ್ರಮವು ಕೇವಲ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕುವುದಕ್ಕಿಂತ ಹೆಚ್ಚಿನದಾಗಿದ್ದು, ಸರ್ಕಾರವು ಉದ್ಯೋಗ ಖಾತರಿ ಯೋಜನೆಯ ರೂಪ ಮತ್ತು ರಚನೆಯನ್ನು ಅನಿಯಂತ್ರಿತವಾಗಿ ಬದಲಾಯಿಸಿದೆ, ಯಾವುದೇ ಚರ್ಚೆಯಿಲ್ಲದೆ, ಪಾಲುದಾರರೊಂದಿಗೂ ಸಹ ಸಮಾಲೋಚಿಸದೆ ಮತ್ತು ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೇಂದ್ರ ಸರ್ಕಾರ ಬದಲಾವಣೆಗಳನ್ನು ಮಾಡಿದೆ ಎಂದು ಸೋನಿಯಾ ಆರೋಪಿಸಿದ್ದಾರೆ.

ನರೇಗಾ ಮೇಲೆ ಬುಲ್ಡೋಜರ್ : ಸೋನಿಯಾ ಗಾಂಧಿ

20 ವರ್ಷಗಳ ಹಿಂದೆ, ಡಾ. ಮನಮೋಹನ್ ಸಿಂಗ್ ಜಿ ಪ್ರಧಾನಿಯಾಗಿದ್ದರು, ಆ ಸಮಯದಲ್ಲಿ, ಮನರೇಗಾ ಯೋಜನೆಯನ್ನು ಸಂಸತ್ತಿನಲ್ಲಿ ಒಮ್ಮತದಿಂದ ಅಂಗೀಕರಿಸಲಾಯಿತು. ಇದು ಬಡವರಿಗೆ ಉದ್ಯೋಗದ ಕಾನೂನುಬದ್ಧ ಹಕ್ಕನ್ನು ನೀಡಿತು ಮತ್ತು ಅದರ ಮೂಲಕ ಗ್ರಾಮ ಪಂಚಾಯತ್‌ಗಳನ್ನು ಬಲಪಡಿಸಿತು. ಈ ಮಸೂದೆಯ ಮೂಲಕ ಮಹಾತ್ಮ ಗಾಂಧಿಯವರ ಕನಸುಗಳ ಕಡೆಗೆ ನಿರ್ದಿಷ್ಟ ಹೆಜ್ಜೆ ಇಡಲಾಯಿತು.
ಇತ್ತೀಚೆಗೆ ಕೇಂದ್ರ ಸರ್ಕಾರವು ನರೇಗಾ ಮೇಲೆ ಬುಲ್ಡೋಜರ್ ಚಲಾಯಿಸಿದ್ದು ವಿಷಾದಕರ. ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿದ್ದಲ್ಲದೆ, MGNREGA ದ ರೂಪ ಮತ್ತು ರಚನೆಯನ್ನು ಯಾವುದೇ ಚರ್ಚೆಯಿಲ್ಲದೆ, ಯಾರನ್ನೂ ಸಂಪರ್ಕಿಸದೆ, ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರಂಕುಶವಾಗಿ ಬದಲಾಯಿಸಲಾಗಿದೆ ಎಂದಿರುವ ಸೋನಿಯಾ ಗಾಂಧಿ, ಮೋದಿ ಸರ್ಕಾರ ದೇಶಾದ್ಯಂತ ಕೋಟ್ಯಂತರ ರೈತರು, ಕಾರ್ಮಿಕರು ಮತ್ತು ಭೂಹೀನರ ಹಿತಾಸಕ್ತಿಗಳ ಮೇಲೆ ದಾಳಿ ಮಾಡಿದೆ, ಕಳೆದ 11 ವರ್ಷಗಳಿಂದ ಕೇಂದ್ರವು ಗ್ರಾಮೀಣ ಭಾಗದ ಬಡವರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿದೆ ಎಂದು ಹೇಳಿದ್ದಾರೆ.

ಕರಾಳ ಕಾನೂನಿನ ವಿರುದ್ಧ ಹೋರಾಡಲು ಸಿದ್ಧ

ಈ ಕರಾಳ ಕಾನೂನನ್ನು ದೇಶಾದ್ಯಂತ ಪಕ್ಷದ ಲಕ್ಷಾಂತರ ಕಾರ್ಯಕರ್ತರು ಧಿಕ್ಕರಿಸುತ್ತಾರೆ ಎಂದಿರುವ ಸೋನಿಯಾ, ನರೇಗಾ ಯೋಜನೆಯನ್ನು ತರುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿತ್ತು, ಆದರೆ ಅದು ಎಂದಿಗೂ ಪಕ್ಷಕ್ಕೆ ಸೀಮಿತವಾದ ವಿಷಯವಾಗಿರಲಿಲ್ಲ. ಇದು ರಾಷ್ಟ್ರೀಯ ಹಿತಾಸಕ್ತಿ ಮತ್ತು ಜನರ ಹಿತಾಸಕ್ತಿಗೆ ಸಂಬಂಧಿಸಿದ ಯೋಜನೆಯಾಗಿತ್ತು ಎಂದರು. ಕೇಂದ್ರ ಸರ್ಕಾರ ಬಡವರ ಮೇಲೆ ಮಾಡಿರುವ ಈ ದಾಳಿಯನ್ನು ಎದುರಿಸಲು ನಾವೆಲ್ಲರೂ ಸಿದ್ಧರಿದ್ದೇವೆ. ಇಪ್ಪತ್ತು ವರ್ಷಗಳ ಹಿಂದೆ, ನಾನು ಕೂಡ ನಮ್ಮ ಬಡ ಸಹೋದರ ಸಹೋದರಿಯರಿಗೆ ಉದ್ಯೋಗದ ಹಕ್ಕನ್ನು ಪಡೆಯಲು ಹೋರಾಡಿದೆ, ಇಂದು ಈ ಕರಾಳ ಕಾನೂನಿನ ವಿರುದ್ಧ ಹೋರಾಡಲು ನಾನು ಬದ್ಧನಾಗಿದ್ದೇನೆ. ನನ್ನಂತಹ ಎಲ್ಲಾ ಕಾಂಗ್ರೆಸ್ ನಾಯಕರು ಮತ್ತು ಲಕ್ಷಾಂತರ ಕಾರ್ಮಿಕರು ನಿಮ್ಮೊಂದಿಗೆ ಇದ್ದಾರೆ ಎಂದು ಹೇಳಿದರು.

ಏನಿದು ಹೊಸ ಬಿಲ್​..?

ಈ ಮಸೂದೆಯು ಪ್ರತಿ ಹಣಕಾಸು ವರ್ಷದಲ್ಲಿ 125 ದಿನಗಳ ಕೂಲಿ ಉದ್ಯೋಗದ ಶಾಸನಬದ್ಧ ಖಾತರಿಯನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತಿದ್ದು, ಅಲ್ಲಿ ವಯಸ್ಕ ಸದಸ್ಯರು ಕೌಶಲ್ಯರಹಿತ ದೈಹಿಕ ಕೆಲಸವನ್ನು ಕೈಗೊಳ್ಳಲು ಸ್ವಯಂಸೇವಕರಾಗುತ್ತಾರೆ. ಕಾಯ್ದೆ ಪ್ರಾರಂಭವಾದ ದಿನಾಂಕದಿಂದ ಆರು ತಿಂಗಳೊಳಗೆ, ರಾಜ್ಯಗಳು ಹೊಸ ಕಾನೂನಿನ ನಿಬಂಧನೆಗಳಿಗೆ ಅನುಗುಣವಾಗಿ ಒಂದು ಯೋಜನೆಯನ್ನು ರೂಪಿಸಬೇಕಾಗುತ್ತದೆ. ಇದರ ಹಣಕಾಸಿನ ಹೊಣೆಗಾರಿಕೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಿಕೊಳ್ಳಲಾಗುವುದು. ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯನ್ ರಾಜ್ಯಗಳಿಗೆ ಇದು 90:10 ರಷ್ಟಿದ್ದರೆ, ಇತರ ಎಲ್ಲಾ ರಾಜ್ಯಗಳು ಮತ್ತು ಶಾಸಕಾಂಗ ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳಿಗೆ 60:40 ರಷ್ಟಿರುತ್ತದೆ. ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶಗಳಿಗೆ, ಸಂಪೂರ್ಣ ವೆಚ್ಚವನ್ನು ಕೇಂದ್ರವೇ ಭರಿಸುತ್ತದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net