ಗಾನ ಸರಸ್ವತಿ

ಎಸ್. ಜಾನಕಿ
ಎಸ್. ಜಾನಕಿ
Published on

ಭಾರತೀಯ ಚಿತ್ರರಂಗದ ಅದ್ಭುತ ಗಾಯಕಿಯರಲ್ಲಿ ಒಬ್ಬರಾದ ಎಸ್. ಜಾನಕಿ (ಶಿಷ್ಟಾಲ ಜಾನಕಿ) ಅವರು ತಮ್ಮ ಸುಮಧುರ ಧ್ವನಿ ಹಾಗೂ ಅಪ್ರತಿಮ ಗಾಯನ ಶೈಲಿಯಿಂದ ‘ದಕ್ಷಿಣ ಭಾರತದ ಕೋಗಿಲೆ’ ಎಂದೇ ಪ್ರಸಿದ್ಧರಾದವರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ 17ಕ್ಕೂ ಹೆಚ್ಚು ಭಾಷೆಗಳಲ್ಲಿ 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಇವರ ಸಾಧನೆ ಅನನ್ಯವಾದುದು. ಕಳೆದ ಕೆಲ ವರ್ಷದಿಂದ ಮೈಸೂರಿನಲ್ಲಿ ನೆಲೆಸಿದ್ದ ಅವರು, ಶನಿವಾರ ಹೃದಯಾಘಾತದಿಂದಾಗಿ ನಿಧನ ಹೊಂದಿದರು. ಎಸ್.ಜಾನಕಿ ಭೌತಿಕವಾಗಿ ನಮ್ಮನ್ನು ಅಗಲಿದ್ದರೂ ಅವರ ಗಾನಗಳ ಮಾಧುರ್ಯ ಎಂದೆಂದಿಗೂ ಶಾಶ್ವತ.

ಚಲನಚಿತ್ರ ಸಂಗೀತ ಕ್ಷೇತ್ರದಲ್ಲಿ ಎಸ್. ಜಾನಕಿ ಅವರದು ಸುದೀರ್ಘ ಪಯಣ. 60 ವರ್ಷಗಳಿಗಿಂತ ಹೆಚ್ಚು ಕಾಲ ಅವರು ಹಲವು ಪೀಳಿಗೆಗಳ ಸಂಗೀತ ನಿರ್ದೇಶಕರ ಜತೆ ಕೆಲಸ ಮಾಡಿದರು. 1957ರಲ್ಲಿ ತಮಿಳು ಚಿತ್ರದ ಮೂಲಕ ಹಿನ್ನೆಲೆ ಗಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ದಕ್ಷಿಣ ಭಾರತದ ನಾಲ್ಕು ಭಾಷೆಗಳ ಪ್ರಮುಖ ಸಂಗೀತ ಸಂಯೋಜಕರಿಗಂತೂ ಜಾನಕಿ ಅವರೇ ಪ್ರಥಮ ಆಯ್ಕೆಯಾಗಿದ್ದರು.

ಅರವತ್ತರ ದಶಕದ ಆರಂಭದಲ್ಲಿ ಕನ್ನಡ ಸಿನಿಮಾ ಸಂಗೀತ ಕ್ಷೇತ್ರವನ್ನು ಆಳುತ್ತಿದ್ದ ಜಿ.ಕೆ.ವೆಂಕಟೇಶ್ ತಮ್ಮ ಬಹುತೇಕ ಗೀತೆಗಳನ್ನು ಎಸ್. ಜಾನಕಿ ಮತ್ತು ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಂದ ಹಾಡಿಸಿದರು. ಈ ಮೂವರದು ಆ ಕಾಲದಲ್ಲಿ ಒಂದು ಹಿಟ್ ಕಾಂಬಿನೇಷನ್. ಸಂಧ್ಯಾರಾಗ ಚಿತ್ರದ ‘ನಂಬಿದೆ ನಿನ್ನ ನಾದದೇವತೆಯೇ’, ಸನಾದಿ ಅಪ್ಪಣ್ಣ ಚಿತ್ರದ ‘ಕರೆದರೂ ಕೇಳದೆ’ ಮುಂತಾದ ಹಾಡುಗಳು ಈ ಜೋಡಿಯವೇ.

ಜಿ.ಕೆ. ವೆಂಕಟೇಶ್ ಜತೆ ಕೆಲಸ ಮಾಡುವಾಗಲೇ ಇಳಯರಾಜಾ ಅವರು ಜಾನಕಿ ಅವರ ಪ್ರತಿಭೆಯನ್ನು ಗುರುತಿಸಿದ್ದರು. 1976ರಲ್ಲಿ ತಮಿಳು ಚಿತ್ರರಂಗದಲ್ಲಿ ಸ್ವತಂತ್ರ ಸಂಗೀತ ಸಂಯೋಜಕರಾಗಿ ಕಾರ್ಯ ಆರಂಭಿಸಿದ ಇಳಯರಾಜಾ ತಮ್ಮ ಮೊದಲ ಚಿತ್ರದಲ್ಲೇ ಜಾನಕಿ ಅವರಿಗೆ 3 ಹಾಡುಗಳನ್ನು ಹಾಡಲು ಅವಕಾಶ ಕೊಟ್ಟರು. ಇವರಿಬ್ಬರ ಕಾಂಬಿನೇಷನ್​ನಲ್ಲಿ ನಂತರ ಬಂದ ಹಾಡುಗಳೆಲ್ಲ ಹಿಟ್ ಮೇಲೆ ಹಿಟ್. ತಮಿಳಿನಲ್ಲಿ ನಾಲ್ಕು ಸಲ ರಾಜ್ಯ ಪ್ರಶಸ್ತಿ ಬಂತು. ಜಾನಕಿ ನಂಬರ್ ಒನ್ ಗಾಯಕಿಯಾಗಲು ಇಷ್ಟು ಸಾಕಾಯಿತು. ಬಾಲಸುಬ್ರಹ್ಮಣ್ಯಂ, ಮಲೇಷಿಯಾ ವಾಸುದೇವನ್, ಮನೋ, ಯೇಸುದಾಸ್, ಜಯಚಂದ್ರನ್ ಮುಂತಾದವರ ಜತೆ ಅತಿ ಹೆಚ್ಚು ಡ್ಯುಯೆಟ್​ಗಳನ್ನು ಹಾಡಿದರು ಜಾನಕಿ. ಇಳಯರಾಜ ಅವರೊಂದಿಗೇ 200ಕ್ಕೂ ಅಧಿಕ ಡ್ಯುಯೆಟ್ ಹಾಡಿದರು. ಇಳಯರಾಜ ಪ್ರಸಿದ್ಧರಾಗುತ್ತಿದ್ದಂತೆ ಅವರ ಸಂಗೀತ ಸಂಯೋಜನೆಯ ವ್ಯಾಪ್ತಿ ದಕ್ಷಿಣದ ಎಲ್ಲ ಭಾಷೆಗಳಿಗೂ ವಿಸ್ತರಿಸಿತು. ಜತೆಗೆ ಜಾನಕಿಯವರ ಗಾನಯಾನ ಕೂಡ.

ರಾಜನ್-ನಾಗೇಂದ್ರ ಜೋಡಿಯ ಬಹುತೇಕ ಎಲ್ಲ ಸಂಯೋಜನೆಗಳಿಗೂ ಜಾನಕಿಯವರದೇ ಧ್ವನಿ. ಆರಂಭದ ದಿನಗಳಲ್ಲಿ ಪಿ.ಬಿ.ಶ್ರೀನಿವಾಸ್-ಜಾನಕಿ ಜೋಡಿಗೆ ಹಲವು ಡ್ಯುಯೆಟ್ ಹಾಡುವ ಅವಕಾಶವನ್ನು ರಾಜನ್ ನಾಗೇಂದ್ರ ನೀಡಿದರು. ನಂತರ ಎಸ್ಪಿಬಿ-ಜಾನಕಿ ಜೋಡಿ ಅವರ ಫೇವರಿಟ್ ಆಯಿತು. ಅವೆಲ್ಲವೂ ಎವರ್​ಗ್ರೀನ್ ಹಾಡುಗಳು. ‘ಎರಡು ಕನಸು’, ‘ಹೊಂಬಿಸಿಲು’, ‘ಗಾಳಿಮಾತು’, ‘ಪಾವನಗಂಗಾ’, ‘ಅವಳ ಹೆಜ್ಜೆ’, ‘ಚಂದನದ ಗೊಂಬೆ’, ‘ನಾ ನಿನ್ನ ಬಿಡಲಾರೆ...’ ಹೀಗೆ ಹಲವು ಹಿಟ್ ಚಿತ್ರಗಳ ಸೂಪರ್ ಹಿಟ್ ಹಾಡುಗಳನ್ನು ನೀಡಿದ ಜೋಡಿ ಇದು.

ವಿಜಯಭಾಸ್ಕರ್ ಮೊದಮೊದಲು ಪಿ.ಸುಶೀಲಾ, ವಾಣಿ ಜಯರಾಂ, ಚಿತ್ರಾ ಅವರಿಗೆ ಅವಕಾಶ ನೀಡಿದರೂ ನಂತರ ‘ಗೆಜ್ಜೆಪೂಜೆ’, ‘ಬೆಳ್ಳಿಮೋಡ’, ‘ಉಪಾಸನೆ’ ಮುಂತಾದ ಚಿತ್ರಗಳಲ್ಲಿ ಜಾನಕಿ ಅವರಿಂದ ಸಾಕಷ್ಟು ಹಾಡುಗಳನ್ನು ಹಾಡಿಸಿದರು. ‘ಗಗನವು ಎಲ್ಲೋ... ಭೂಮಿಯು ಎಲ್ಲೋ...’ ಕೂಡ ಅಂಥ ಹಾಡುಗಳಲ್ಲೊಂದು.

ಎಂಬತ್ತರ ದಶಕದಲ್ಲಿ ಹಂಸಲೇಖಾ ಹವಾ ಶುರುವಾದಾಗಲೂ ಜಾನಕಿಯವರೇ ಅವರ ಮೊದಲ ಆಯ್ಕೆಯಾಗಿದ್ದರು. ‘ಪ್ರೇಮಲೋಕ’, ‘ರಣಧೀರ’ ಮುಂತಾದವು ಸೇರಿದಂತೆ ಹಂಸಲೇಖರ ಒಟ್ಟು ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಜಾನಕಿ ಹಾಡಿದ್ದಾರೆ. ಮಲಯಾಳಂ ಚಿತ್ರಗಳ ಸಂಗೀತ ಸಂಯೋಜಕ ಎಂ.ಎಸ್. ಬಾಬುರಾಜ್ ಅವರೊಂದಿಗೂ ಜಾನಕಿ ಕೆಲಸ ಮಾಡಿದರು. ಅರವತ್ತು, ಎಪ್ಪತ್ತರ ದಶಕಗಳಲ್ಲಿ ಅವರು ಹಾಡಿದ ಹಾಡುಗಳನ್ನು ಈಗಲೂ ಕೇರಳದ ಜನ ಗುನುಗುನಿಸುತ್ತಿರುತ್ತಾರೆ.

ಕರ್ಚೀಫು ಇದ್ರೆನೇ ಹಾಡು...

ಜಾನಕಿ ಮೈಕ್ ಮುಂದೆ ನಿಂತು ಹಾಡುವಾಗ ಅವರ ಕೈಯಲ್ಲಿ ಒಂದು ಕರ್ಚೀಫ್ ಇದ್ದೇ ಇರುತ್ತಿತ್ತು. ಅದಿಲ್ಲದಿದ್ದರೆ ಅವರಿಗೆ ಹಾಡಲು ಸಾಧ್ಯವಾಗುತ್ತಿರಲಿಲ್ಲ. ರೆಕಾರ್ಡಿಂಗ್ ಸಮಯದಲ್ಲೂ ಕರ್ಚೀಫ್ ಕಡ್ಡಾಯ! ಈ ಸಂಗತಿ ಗೊತ್ತಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಒಮ್ಮೆ ಅವರನ್ನು ಕಿಚಾಯಿಸಲೆಂದೇ ಕರ್ಚೀಫ್ ಬಚ್ಚಿಟ್ಟಿದ್ದರು. ರಿಹರ್ಸಲ್ ಮುಗಿದ ನಂತರ ಇನ್ನೇನು ಹಾಡಲು ಶುರು ಮಾಡಬೇಕು- ಆದರೆ ಜಾನಕಿಯವರ ಗಂಟಲಿನಿಂದ ಸ್ವರವೇ ಹೊರಡುತ್ತಿಲ್ಲ. ಗಾಬರಿಯಾದ ಸಂಗೀತ ನಿರ್ದೇಶಕರು ‘ಏನಾಯಿತು, ಏನಾಯಿತು’ ಎಂದು ಕೇಳತೊಡಗಿದರು. ಆಗ ಜಾನಕಿ ಟೆನ್ಷನ್​ನಲ್ಲಿ ಕರ್ಚೀಫ್ ಹುಡುಕುತ್ತಿದ್ದರಂತೆ. ಅವರ ಸ್ಥಿತಿ ನೋಡಿ ಕೊನೆಗೆ ಎಸ್​ಪಿಬಿ ತಾವು ಮುಚ್ಚಿಟ್ಟಿದ್ದ ಕರ್ಚೀಫ್ ತಂದುಕೊಟ್ಟರು. ಆನಂತರವೇ ಜಾನಕಿ ಸರಾಗವಾಗಿ ಹಾಡು ಹಾಡಿದರು.

ಪ್ರಶಸ್ತಿ ಪುರಸ್ಕಾರ ಗೌರವ

ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ, ಮೂವತ್ತು ರಾಜ್ಯ ಪ್ರಶಸ್ತಿಗಳು, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇತ್ಯಾದಿ. (ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿದರೂ ಎಸ್. ಜಾನಕಿ ಅದನ್ನು ಸ್ವೀಕರಿಸಲಿಲ್ಲ. ಪದ್ಮ ಪ್ರಶಸ್ತಿಗಳ ಆಯ್ಕೆಯಲ್ಲಿ ದಕ್ಷಿಣ ಭಾರತೀಯರನ್ನು ಕಡೆಗಣಿಸಲಾಗುತ್ತಿದೆ ಎಂಬ ಕೂಗಿನ ಹಿನ್ನೆಲೆಯಲ್ಲಿ ಅವರು ಈ ಪ್ರಶಸ್ತಿಯನ್ನು ತಿರಸ್ಕರಿಸಿದರು.)

ಜನನ: 1938ರ ಏಪ್ರಿಲ್ 23

ಹುಟ್ಟಿದ ಸ್ಥಳ: ಪಲ್ಲಪಟ್ಲ-ರೇಪಲ್ಲಿ ಗ್ರಾಮ, ಗುಂಟೂರು ಜಿಲ್ಲೆ, ಆಂಧ್ರಪ್ರದೇಶ

ಪತಿ: ವಿ. ರಾಮಪ್ರಸಾದ್

ಪುತ್ರ: ಮುರಳೀಕೃಷ್ಣ (2026ರ ಜನವರಿ 22ರಂದು ಹೃದಯಾಘಾತದಿಂದ ಮೈಸೂರಿನಲ್ಲಿ ನಿಧನ ಹೊಂದಿದರು)

ವಾದ್ಯ ನಾದದೊಡನೆ ಗಾನ ಸಮ್ಮಿಲನ

ಕನ್ನಡದಲ್ಲಿ ಬಿಸ್ಮಿಲ್ಲಾ ಖಾನ್ ಅವರ ಶಹನಾಯ್ ಜತೆ ತಮ್ಮ ಗಾನವನ್ನು ಮೇಳೈಸಿ ಹೊರತಂದ ‘ಕರೆದರೂ ಕೇಳದೆ...’ ಗೀತೆ ಒಂದು ಅಪೂರ್ವ ಗಾಯನವೇ ಸರಿ. ಇಂತಹದ್ದೇ ರೀತಿಯಲ್ಲಿ ಜಾನಕಿ ಅವರು ಎಂ.ಎಸ್. ಗೋಪಾಲಕೃಷ್ಣನ್ ಅವರ ಪಿಟೀಲು ವಾದನ, ನಾಮಗಿರಿಪೇಟೆ ಕೃಷ್ಣನ್ ನಾದಸ್ವರ ಮತ್ತು ಹರಿಪ್ರಸಾದ್ ಚೌರಾಸಿಯಾ ಅವರ ವೇಣುವಾದನದ ಜತೆ ಕೂಡ ತಮ್ಮ ಗಾನ ಮಾಧುರ್ಯವನ್ನು ಮೇಳೈಸಿದ್ದಾರೆ. ತಮಿಳಿನಲ್ಲಿ ಕರೈಕುರುಚ್ಚಿ ಅರುಣಾಚಲಂ ಅವರ ನಾದಸ್ವರದೊಂದಿಗೆ ತಮ್ಮ ಸ್ವರ ಮೇಳೈಸಿ ಅದ್ಭುತವಾಗಿ ಮೂಡಿಸಿದ ‘ಸಿಂಗಾರವೇಲನೆ ದೇವ...’ ಹಾಡು ಕೂಡ ಬಹು ಜನಪ್ರಿಯ.

ಕೃಷ್ಣನ ಫೋಟೊ

ಜಾನಕಿಯವರು ಶ್ರೀಕೃಷ್ಣನ ಆರಾಧಕಿ. ಅವರ ಹಾಡುಗಳ ಪುಸ್ತಕದಲ್ಲಿ ಕೃಷ್ಣನ ಫೋಟೋ ಯಾವಾಗಲೂ ಇರುತ್ತಿತ್ತು. 1997ರಲ್ಲಿ ಪತಿ ವಿಧಿವಶರಾದ ಬಳಿಕ ಅವರು ಹೆಚ್ಚಾಗಿ ಬಣ್ಣದ ಸೀರೆ, ಪ್ರಿಂಟೆಡ್ ಹಾಗೂ ಚಿನ್ನ ಬಣ್ಣದ ಝುರಿ ಇರುವ ಸೀರೆ ಉಡುವುದನ್ನು ನಿಲ್ಲಿಸಿದರು.

ಜಾನಕಿ ಅಮ್ಮನ ಭಾವಪೂರ್ಣ ಮಾತುಗಳು

ಎಸ್.ಜಾನಕಿ ಅವರ ಸಂಗೀತ ಪಯಣಕ್ಕೂ ಮೈಸೂರಿಗೂ ಒಂದು ವಿಶೇಷ ನಂಟಿತ್ತು. 14 ವರ್ಷದ ಬಾಲಕಿಯಾಗಿದ್ದಾಗ ಮೈಸೂರಿನಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಹಾಡಿದ್ದ ಜಾನಕಿ, ಆರು ದಶಕಗಳ ನಂತರವೂ ಗಾಯನಕ್ಕೆ ಇದೇ ಸಾಂಸ್ಕೃತಿಕ ನಗರಿಯನ್ನು ಆಯ್ಕೆ ಮಾಡಿಕೊಂಡಿದ್ದರು. 2017ರ ಅಕ್ಟೋಬರ್ 28ರಂದು ಎಸ್.ಜಾನಕಿ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮಾನಸಗಂಗೋತ್ರಿಯ ಬಯಲು ರಂಗಮಂದಿರ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.

‘ಸಾವಿರಾರು ಅಭಿಮಾನಿಗಳ ಎದುರು ನಿಂತು, ಈವರೆಗೆ ಅನೇಕ ವೈವಿಧ್ಯಮಯ ಹಾಡುಗಳನ್ನು ಹಾಡಿದ್ದೇನೆ. ಈ ಗಾಯನ ಪಯಣ ನನಗೆ ಅಪಾರ ತೃಪ್ತಿ ನೀಡಿದೆ. ಇನ್ನು ಸಾಕು... ಇನ್ಮುಂದೆ ನಾನು ಹಾಡುವುದಿಲ್ಲ. ಇದೇ ನನ್ನ ಕೊನೆಯ ಸಂಗೀತ ಕಾರ್ಯಕ್ರಮ’ ಎಂದು ಅವರು ಘೊಷಿಸಿದಾಗ ಇಡೀ ಸಭಾಂಗಣ ಕೆಲ ಕ್ಷಣ ಮೌನಕ್ಕೆ ಜಾರಿತ್ತು.

ಆ ವೇಳೆ ಮೊದಲ ಗಾಯನದ ನೆನಪುಗಳನ್ನು ಹಂಚಿಕೊಂಡಿದ್ದ ಅವರು, ‘14 ವರ್ಷದ ಬಾಲಕಿಯಾಗಿದ್ದಾಗ 1952ರಲ್ಲಿ ಮೈಸೂರಿನಲ್ಲೇ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಅವರ ಸಾರಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿ.ಬಿ.ಶ್ರೀನಿವಾಸ್ ಅವರೊಂದಿಗೆ ಹಾಡಿದ್ದೆ. ಆಗ ಜಿ.ಕೆ. ವೆಂಕಟೇಶ್ ಅವರ ಮಹತ್ವವೇ ನನಗೆ ಗೊತ್ತಿರಲಿಲ್ಲ. ಆರು ದಶಕಗಳ ಈ ಸಂಗೀತಯಾನ ಈಗ ಪೂರ್ಣಗೊಂಡಿದೆ’ ಎಂದಿದ್ದರು. ಮೈಸೂರಿನ ಅನೇಕ ಸಾಹಿತಿಗಳ ಗೀತೆಗಳಿಗೆ ಧ್ವನಿಯಾಗಿದ್ದ ಹೆಮ್ಮೆಯನ್ನು ವ್ಯಕ್ತಪಡಿಸಿದ್ದರು. ‘ಮೈಸೂರಿನ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಕ್ಷಣಗಳು ನನ್ನ ಜೀವನದ ಅಮೂಲ್ಯ ನೆನಪುಗಳು’ ಎಂದು ಹೇಳಿ ನಗರದೊಂದಿಗೆ ತಮ್ಮ ನಂಟನ್ನು ಸ್ಮರಿಸಿದ್ದರು.

ದನಿ ಬದಲಾಯಿಸುವ ಅದ್ಭುತ ಕಲೆ

ಜಾನಕಿಯವರ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಪರಿಸ್ಥಿತಿಗೆ ತಕ್ಕಂತೆ ಧ್ವನಿಯನ್ನು ಬದಲಾಯಿಸುವುದು. ಅವರು ಕೇವಲ ಒಂದು ವರ್ಷದ ಮಗುವಿನ ಅಳು/ನಗುವಿನ ಧ್ವನಿಯಿಂದ ಹಿಡಿದು, ಹದಿಹರೆಯದ ಹುಡುಗಿ, ಪ್ರೌಢ ಮಹಿಳೆ ಹಾಗೂ ವೃದ್ಧೆಯ ಧ್ವನಿಯವರೆಗೂ ಅತ್ಯಂತ ಸಹಜವಾಗಿ ಹಾಡಬಲ್ಲವರಾಗಿದ್ದರು.

ಭಾವಪೂರ್ಣ ಗಾಯನ: ಹಾಡಿನ ಸಾಹಿತ್ಯದ ಹಿಂದಿರುವ ಭಾವನೆಯನ್ನು (ಪ್ರೇಮ, ವಿರಹ, ಭಕ್ತಿ, ಕರುಣೆ, ಹಾಸ್ಯ) ಶ್ರೋತೃಗಳ ಮನ ಮುಟ್ಟುವಂತೆ ತನ್ಮಯತೆಯಿಂದ ಹಾಡುತ್ತಿದ್ದರು.

ಕನ್ನಡ ಭಾಷೆಯ ಮೇಲಿನ ಹಿಡಿತ: ಆಂಧ್ರಪ್ರದೇಶದವರಾಗಿದ್ದರೂ, ಕನ್ನಡದಲ್ಲಿ ಅವರು ಉಚ್ಚರಿಸುತ್ತಿದ್ದ ಪ್ರತಿ ಪದವೂ ಅಚ್ಚಕನ್ನಡದವರೇ ನಾಚುವಂತಿರುತ್ತಿತ್ತು. ಸ್ಪಷ್ಟ ಉಚ್ಚಾರಣೆ ಅವರ ಗಾಯನದ ಹೆಗ್ಗುರುತಾಗಿತ್ತು.

ಶಾಸ್ತ್ರೀಯ ಮತ್ತು ಪಾಪ್ ಶೈಲಿಯ ಸಮ್ಮಿಶ್ರಣ: ಶಾಸ್ತ್ರೀಯ ಸಂಗೀತ ಆಧಾರಿತ ಕಠಿಣ ಹಾಡುಗಳನ್ನು ಎಷ್ಟು ಸುಲಭವಾಗಿ ಹಾಡುತ್ತಿದ್ದರೋ, ಅಷ್ಟೇ ಲೀಲಾಜಾಲವಾಗಿ ವೆಸ್ಟರ್ನ್ ಮತ್ತು ಬಿರುಸಿನ ಹಾಡುಗಳಿಗೂ ಧ್ವನಿಯಾಗುತ್ತಿದ್ದರು.

ವಿವಿಧ ರೀತಿಯ ಧ್ವನಿ

ಎಪ್ಪತ್ತರ ದಶಕದಲ್ಲಿ ಕನ್ನಡದ ‘ಮಧುರ ಸಂಗಮ’ ಚಿತ್ರಕ್ಕಾಗಿ ‘ತಾಯಿಯ ತಂದೆಯ’ ಎಂಬ ಹಾಡನ್ನು ಜಾನಕಿ ಅವರು ಮಗುವಿನ ಧ್ವನಿಯಲ್ಲಿ ಹಾಡಿದ್ದರು. ಅದು ಅತ್ಯಂತ ಜನಪ್ರಿಯವಾಗಿತ್ತು. ಹಾಗೆಯೇ 3 ವರ್ಷದ ಮಗು, ಬಾಲಕ-ಬಾಲಕಿ, ಗಂಡಸರು, ವಯಸ್ಸಾದವರು ಹೀಗೆ ವಿವಿಧ ರೀತಿಯ ಧ್ವನಿಗಳಲ್ಲಿಯೂ ಹಾಡಿ ಸೈ ಎನಿಸಿಕೊಂಡಿದ್ದರು ಜಾನಕಿ. ಎಲ್ಲ ಭಾಷೆಗಳದ್ದೂ ಸೇರಿಸಿದರೆ ಅವರ ಅಂತಹ ಹಾಡುಗಳ ಸಂಖ್ಯೆಯೇ ನೂರಕ್ಕೂ ಅಧಿಕ!

ಕಲಿತದ್ದಲ್ಲ, ದೇವರ ಕೊಡುಗೆ

ಎಸ್.ಜಾನಕಿ ಅವರು ಕೇವಲ 10 ತಿಂಗಳಷ್ಟೆ ಸಂಗೀತ ಕಲಿಯಲು ಹೋಗಿದ್ದರು. ಹಾಗಾಗಿ ಗಾಯನ ಕಲೆ ಅವರಿಗೆ ದೈವದತ್ತವಾಗಿ ಬಂದ ಕೊಡುಗೆ. ಯಾವುದೇ ಶೈಲಿಯ ಹಾಡುಗಳನ್ನು ಕೊಟ್ಟರೂ ಸರಾಗವಾಗಿ ಹಾಡುತ್ತಿದ್ದರು. ಕೆಲವರಿಗೆ ಬಾಲ್ಯದಿಂದಲೇ ಉತ್ತಮ ಧ್ವನಿ ಇರುತ್ತದೆ. ಅವರು ಸರಾಗವಾಗಿ ಹಾಡುತ್ತಾರೆ. ಅಂಥ ಅನನ್ಯ ಗಾಯಕರಲ್ಲಿ ಜಾನಕಿ ಕೂಡ ಒಬ್ಬರಾಗಿದ್ದರು.

ಹೇಮಾವತಿ ಚಿತ್ರದ ‘ಶಿವ ಶಿವ ಎನ್ನದ ನಾಲಿಗೆಯೇಕೆ...’ ಎಂಬ ಹಾಡು ತಮ್ಮ ಜೀವನದಲ್ಲೇ ಅತಿ ಕಷ್ಟದ ಹಾಡಾಗಿತ್ತು ಎನ್ನುತ್ತಿದ್ದರು ಜಾನಕಿ. ಯಾಕೆಂದರೆ ಸಂಗೀತ ಸಂಯೋಜಕ ಎಲ್. ವೈದ್ಯನಾಥನ್ ಆ ಹಾಡಿನಲ್ಲಿ ಎರಡು ರಾಗಗಳನ್ನು (ತೋಡಿ ಮತ್ತು ಆಭೋಗಿ) ಬಳಸಿದ್ದರು.

ನಿಮ್ಮವಳೇ ಆದ ಮೇಲೆ ಇನ್ನೇನು’!

ಎಸ್.ಜಾನಕಿ ಅವರು ಸಾಂಸ್ಕೃತಿಕ ನಗರಿ ಮೈಸೂರಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದರು. 2014ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸಾವಿರಾರು ಅಭಿಮಾನಿಗಳ ಎದುರು ಮಾತನಾಡಿದ್ದ ಜಾನಕಿ ಅವರು, ‘ಎಲ್ಲಿಂದ ಬಂದರೇನು ನಾನು?, ನಿಮ್ಮವಳೇ ಆದ ಮೇಲೆ ಇನ್ನೇನು’... ಎಂದು ಹಾಡುವ ಮೂಲಕ ಸಭಿಕರ ಮನ ಗೆದ್ದಿದ್ದರು. ಆ ವೇಳೆ ಮಾತನಾಡಿದ್ದ ಅವರು, ನಾನು ಅತಿ ಹೆಚ್ಚು ಹಾಡುಗಳನ್ನು ಹಾಡಿದ್ದು ಕನ್ನಡದಲ್ಲೇ ಎಂದು ಹೆಮ್ಮೆಯಿಂದ ಹೇಳಿದ್ದರು. ‘ಕನ್ನಡದ ನಂತರವೇ ಉಳಿದ ಎಲ್ಲ ಭಾಷೆಗಳು’ ಎಂದು ಹೇಳುವ ಮೂಲಕ ಕನ್ನಡದ ಮೇಲಿನ ಅಪಾರ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.

ಮೈಸೂರಿನ ಅಭಿಮಾನಿಯೊಬ್ಬರ ಮನೆಗೆ 2019ರಲ್ಲಿ ಬಂದಿದ್ದ ವೇಳೆ ಕಾಲು ಜಾರಿ ಬಿದ್ದು ಗಾಯಗೊಂಡ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರವೂ ಕನ್ನಡಿಗರ ಮೇಲಿನ ಪ್ರೀತಿಯನ್ನೇ ನೆನಪಿಸಿಕೊಂಡ ಅವರು, ‘ಕನ್ನಡದ ಮಕ್ಕಳು ನನ್ನನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅವರ ಪ್ರೀತಿಯಿಂದಲೇ ನಾನು ಗುಣಮುಖಳಾಗಿದ್ದೇನೆ. ನನಗೆ ಮೈಸೂರೆಂದರೆ ಅಚ್ಚುಮೆಚ್ಚು. ನನಗೂ ಮೈಸೂರಿಗೆ ಪೂರ್ವಜನ್ಮದ ಸಂಬಂಧ’ ಇರಬಹುದು ಎಂದು ಭಾವುಕರಾಗಿ ಹೇಳಿದ್ದರು.

ಪುತ್ರಶೋಕದಲ್ಲಿದ್ದ ತಾಯಿ

ಗಾಯಕಿ ಎಸ್.ಜಾನಕಿ ಅವರ ಪುತ್ರ ಮುರಳಿಕೃಷ್ಣ 2026ರ ಜನವರಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಮಗನ ಸಾವಿನಿಂದಾಗಿ ಎಸ್. ಜಾನಕಿ ಅವರು ಆತಂಕಕ್ಕೀಡಾಗಿದ್ದರು. ಮುರಳಿಕೃಷ್ಣ ಭರತನಾಟ್ಯ ಕಲಾವಿದರಾಗಿದ್ದರು. ಜತೆಗೆ ಹಲವು ಸಿನಿಮಾಗಳಿಗೆ ನೃತ್ಯ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದರು.

ಕನ್ನಡ ಚಿತ್ರರಂಗದ ಒಡನಾಟ

1957ರಲ್ಲಿ ‘ರಾಯರ ಸೊಸೆ’ ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದರು. ಅಲ್ಲಿಂದ ಮುಂದೆ ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಸೇರಿದಂತೆ ಅನೇಕ ದಿಗ್ಗಜ ನಟರ ಚಿತ್ರಗಳಿಗೆ ಹಾಡಿದರು. ಡಾ.ರಾಜಕುಮಾರ್ ಅವರೊಂದಿಗೆ ಜಾನಕಿಯವರು ಹಾಡಿದ ಯುಗಳ ಗೀತೆಗಳು ಇಂದಿಗೂ ಅಮರ. ಹಾಗೆಯೇ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ ಅವರ ಕಾಂಬಿನೇಷನ್ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸುವರ್ಣ ಯುಗವನ್ನು ಸೃಷ್ಟಿಸಿತು.

ಮೈಸೂರಿನಲ್ಲಿ ಕೊನೆಯ ಕಾರ್ಯಕ್ರಮ

ಮೈಸೂರಿನಲ್ಲಿ 1952ರಲ್ಲಿ ಜಿ.ಕೆ.ವೆಂಕಟೇಶ್ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಿ.ಬಿ.ಶ್ರೀನಿವಾಸ್ ಅವರೊಂದಿಗೆ ಜಾನಕಿ ಹಾಡಿದ್ದರು. ಆ ಕಾರ್ಯಕ್ರಮ ವೀಕ್ಷಿಸಲು ಭಾರಿ ಸಂಖ್ಯೆಯಲ್ಲಿ ಸಂಗೀತಪ್ರಿಯರು ಸೇರಿದ್ದರು. ಆ ಬಳಿಕ ಜಾನಕಿ ಮೈಸೂರಿನಲ್ಲಿ ಹಾಡಿರಲಿಲ್ಲ. ಮತ್ತೆ ಅವರು ಮೈಸೂರಿನಲ್ಲಿ ಹಾಡಿದ್ದು 2017ರ ಅ.28ರ ಸಂಜೆ. ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆದ ಆ ಕಾರ್ಯಕ್ರಮವೇ ಅವರ ಹಾಡುಗಾರಿಕೆಯ ಕೊನೆಯ ಕಾರ್ಯಕ್ರಮವಾಯಿತು. ಅನೇಕ ಗಣ್ಯ ಅತಿಥಿಗಳು, ಚಲನಚಿತ್ರ ರಂಗದ ನಟ/ನಟಿಯರು, ಸಂಗೀತ ನಿರ್ದೇಶಕರು, ಎಸ್.ಜಾನಕಿಯವರ ಸಾವಿರಾರು ಅಭಿಮಾನಿಗಳು ಸೇರಿದ್ದ ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಅದೊಂದು ಭಾವುಕ ಕಾರ್ಯಕ್ರಮ. ಜಾನಕಿಯವರ ಕಂಠಸಿರಿಯಿಂದ ‘ಪೂಜಿಸಲೆಂದೇ ಹೂಗಳ ತಂದೆ’, ‘ಇಂದು ಎನಗೆ ಗೋವಿಂದ’, ‘ನೀ ನಡೆವ ಹಾದಿಯಲ್ಲಿ’, ‘ಮಗುವೆ ನಿನ್ನ ಹೂನಗೆ’, ‘ಬಾನಲ್ಲು ನೀನೆ ಭುವಿಯಲ್ಲೂ ನೀನೆ’, ‘ನಗುನಗುತಾ ನೀ ಬರುವೆ’... ಹೀಗೆ ಹಲವಾರು ಕನ್ನಡದ ಹಾಡುಗಳ ಜತೆಗೆ ತಮಿಳು, ತೆಲುಗು, ಹಿಂದಿಯ ಕೆಲವು ಹಾಡುಗಳೂ ಮೂಡಿಬಂದವು. ಬಯಲುಮಂದಿರ ಕಿಕ್ಕಿರಿದು ತುಂಬಿದ್ದು ಜಾನಕಿಯವರ ಬಗ್ಗೆ ಜನರಿಗಿರುವ ಅಭಿಮಾನಕ್ಕೆ ಸಾಕ್ಷಿಯಾಯಿತು. ಈ ಮಧ್ಯೆಯೂ ಅವರು ಆಗಾಗ ಮೈಸೂರಿಗೆ ಬರುತ್ತಿದ್ದರು. ಬಳಿಕ ಮೈಸೂರಿನಲ್ಲೇ ನೆಲೆಸಿದರು. ಮೆಟ್ಟಿಲುಗಳ ಮೂಲಕ ಬೆಟ್ಟವನ್ನು ಹತ್ತಿ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯುತ್ತಿದ್ದರು. ಅರಮನೆ, ಕೆಆರ್​ಎಸ್​ಗೂ ಭೇಟಿ ನೀಡುತ್ತಿದ್ದರು.

ಇಂದು ಅಂತ್ಯಕ್ರಿಯೆ

ಮೈಸೂರಿನ ಬೋಗಾದಿ ರಸ್ತೆ ಕಣಿಯ್ಯನಹುಂಡಿಯ ಅನಿಲ್ ಅವರ ಫಾಮ್ರ್ ಹೌಸ್​ನಲ್ಲಿ ಭಾನುವಾರ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಜಾನಕಿ ಅವರ ಅಕ್ಕನ ಮಗ ಅಂತ್ಯಕ್ರಿಯೆ ನೆರವೆರಿಸಲಿದ್ದಾರೆ. ‘ಭಾನುವಾರ ಬೆಳಗ್ಗೆ 8 ಗಂಟೆಯಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಅಂತಿಮ ನಮನಕ್ಕೆ ವ್ಯವಸ್ಥೆ ಮಾಡಲಾಗುವುದು. ಸಂಜೆ ವೇಳೆಗೆ ಮೈಸೂರು ತಾಲೂಕಿನ ಕಣಿಯ್ಯನ ಹುಂಡಿಯ ಅನಿಲ್ ಅವರ ಫಾಮರ್್​ಹೌಸ್​ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಸಲಾ ಗುವುದು’ ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net