ಮತ್ತೆ ಇಂಧನ ಬೆಲೆ ಏರಿಕೆ; ಮುಂದೆ ಇನ್ನೂ ಆರ್ಥಿಕ ಬಿರುಗಾಳಿ ಬರಲಿದೆ; ಎಚ್ಚರಿಕೆ ನೀಡಿ ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ಕಿಡಿ | Rahul Gandhi

ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ
ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ
Published on
ನವದೆಹಲಿ: ದೇಶಾದ್ಯಂತ ಇಂಧನ ಬೆಲೆಯಲ್ಲಿ ಇಂದು(ಮೇ 19) ಮತ್ತೆ 90 ಪೈಸೆಯಷ್ಟು ಬೆಲೆ ಹೆಚ್ಚಳವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi), ಮುಂದೆ ಇನ್ನೂ ಆರ್ಥಿಕ ಬಿರುಗಾಳಿ ಬರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಯ್ ಬರೇಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಂದೆ ನಮ್ಮ ದೇಶದ ಆರ್ಥಿಕತೆಗೆ ಕಠಿಣ ಸಮಯಗಳು ಬರಲಿವೆ. ಅದರ ಕುರಿತು ಕ್ರಮ ಕೈಗೊಳ್ಳುವ ಬದಲು ಪ್ರಧಾನಿ ಮೋದಿ ಜನರು ವಿದೇಶ ಪ್ರವಾಸಗಳನ್ನು ಕೈಗೊಳ್ಳದಂತೆ ಕೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮೋದಿಯವರು ದೇಶದ ಆರ್ಥಿಕ ರಚನೆಯನ್ನು ಬದಲಾಯಿಸಿದ್ದಾರೆ ಎಂದು ನಾನು ಕೆಲವು ದಿನಗಳಿಂದ ಹೇಳುತ್ತಿದ್ದೇನೆ. ಆರ್ಥಿಕ ಬಿರುಗಾಳಿ ಬೀಸುತ್ತಿದೆ. ಅವರ ಅದಾನಿ-ಅಂಬಾನಿ ರಚನೆ ಹೆಚ್ಚು ಕಾಲ ಉಳಿಯುವುದಿಲ್ಲ, ಅದು ಕುಸಿಯುತ್ತದೆ. ದುರದೃಷ್ಟಕರವೆಂದರೆ ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಾರೆ ಎಂದು ಹೇಳಿದ್ದಾರೆ.
ಆರ್ಥಿಕ ಆಘಾತವು ಅದಾನಿ, ಅಂಬಾನಿ ಮತ್ತು ಮೋದಿ ಮೇಲೆ ಪರಿಣಾಮ ಬೀರುವುದಿಲ್ಲ. ಇದು ಸಾಮಾನ್ಯ ಜನರ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದು ಕಷ್ಟಕರವಾಗಿರುತ್ತದೆ. ಕಠಿಣ ಸಮಯಗಳು ಬರಲಿವೆ. ಕ್ರಮ ಕೈಗೊಳ್ಳುವ ಬದಲು, ನರೇಂದ್ರ ಮೋದಿ ಅವರು ಸ್ವತಃ ವಿಶ್ವ ಪ್ರವಾಸದಲ್ಲಿರುವಾಗ ಜನರು ವಿದೇಶ ಪ್ರವಾಸಗಳನ್ನು ಕೈಗೊಳ್ಳದಂತೆ ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರದಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ ಸುಮಾರು 90 ಪೈಸೆ ಹೆಚ್ಚಿಸಲಾಗಿದೆ. ಕಳೆದ ಎರಡ್ಮೂರು ದಿನಗಳ ಹಿಂದೆ ಪೆಟ್ರೋಲ್​ ಮತ್ತು ಡೀಸೆಲ್​ಗೆ ತಲಾ 3 ರೂ. ಹೆಚ್ಚಿಸಲಾಗಿತ್ತು. ಇಂದು ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 98.64 ರೂ.ಗೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 91.58 ರೂ.ಗೆ ಏರಿಕೆಯಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net