ವಿದೇಶಿ ಪಾಸ್​ಪೋರ್ಟ್ ಆರೋಪ; ಗುವಾಹಟಿ ಹೈಕೋರ್ಟ್​​ನಲ್ಲೂ ಪವನ್ ಖೇರಾಗೆ ಹಿನ್ನಡೆ; ಬೆಂಬಲಕ್ಕೆ ನಿಂತ ಕಾಂಗ್ರೆಸ್​ | Pawan Khera

ಪವನ್ ಖೇರಾ
ಪವನ್ ಖೇರಾ
Published on
ಗುವಾಹಟಿ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಪತ್ನಿ ವಿರುದ್ಧ ಮೂರು ವಿದೇಶಿ ಪಾಸ್​​ಪೋರ್ಟ್ ಹೊಂದಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪವನ್​ ಖೇರಾಗೆ ಗುವಾಹಟಿ ಹೈಕೋರ್ಟ್​ನಲ್ಲೂ ಹಿನ್ನಡೆಯಾಗಿದ್ದು, ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಶುಕ್ರವಾರ(ಏ. 24) ವಜಾಗೊಂಡಿದ್ದು, ಬಂಧನ ಬೀತಿ ಎದುರಿಸುತ್ತಿದ್ದಾರೆ.
ಪವನ್ ಖೇರಾ ಬೆಂಬಲಕ್ಕೆ ನಿಂತಿರುವ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಗುವಾಹಟಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಹೇಳಿದೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಖೇರಾ ಅವರ ಬೆಂಬಲಕ್ಕೆ ಇಡೀ ಪಕ್ಷವು ಒಗ್ಗಟ್ಟಿನಿಂದ ದೃಢವಾಗಿ ನಿಲ್ಲುತ್ತದೆ. ಬೆದರಿಕೆ ಮತ್ತು ಕಿರಕುಳ ರಾಜಕೀಯದ ಮೇಲೆ ನ್ಯಾಯವು ಮೇಲುಗೈ ಸಾಧಿಸುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಅಸ್ಸಾಂ ಚುನಾವಣೆಗೂ ಮುನ್ನ ಸಿಎಂ ಹಿಮಂತ ಬಿಸ್ವಾ ಶರ್ಮಾ ಪತ್ನಿ ರಿನಿಕಿ ಭೂಯಾನ್ ಶರ್ಮಾ ಅವರು ದುಬೈ ಸೇರಿ ಮೂರು ವಿದೇಶಗಳ ಪಾಸ್​ಪೋರ್ಟ್​ ಹೊಂದಿದ್ದಾರೆ. ಮತ್ತು ವಿದೇಶದಲ್ಲಿ ಆಸ್ತಿ ಮಾಡಿದ್ದಾರೆ. ಹಾಗೂ ಅಮೆರಿಕ ಹಲವು ಕಂಪನಿಗಳಲ್ಲಿ ಕೋಟ್ಯಂತರ ರೂ. ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಆರೋಪ ಮಾಡಿದ ತಕ್ಷಣ ಅಂದು ರಾತ್ರಿಯೇ ರಿನಿಕಿ ಭುಯಾನ್ ಶರ್ಮಾ ಅವರು ಖೇರಾ ವಿರುದ್ಧ ಗುವಾಹಟಿ ಅಪರಾಧ ಶಾಖೆಯ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ವಿವಿಧ ವಿಭಾಗಗಳ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ದೆಹಲಿಯ ಖೇರಾ ಮನೆ ಮೇಲೆ ದಾಳಿ ಮಾಡಿದ್ದ ಪೊಲೀಸರು, ಶೋಧ ನಡೆಸಿದ್ದರು. ಈ ವೇಳೆ ಬಂಧನ ಭೀತಿಯಿಂದ ಖೇರಾ ತೆಲಂಗಾಣ ಹೈಕೋರ್ಟ್​ನಿಂದ ಒಂದು ವಾರಗಳ ಕಾಲ ನಿರೀಕ್ಷಣಾ ಜಾಮೀನು ಪಡೆದಿದ್ದರು. ಆದರೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅಸ್ಸಾಂ ಪೊಲೀಸರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆಗ ಹೈಕೋರ್ಟ್ ಆದೇಶವನ್ನು ರದ್ದು ಮಾಡಿದ್ದ ಸುಪ್ರೀಂ, ಜಾಮೀನಿಗೆ ಗುವಾಹಟಿ ಹೈಕೋರ್ಟ್ ಸಂಪರ್ಕಿಸುವಂತೆ ಸೂಚನೆ ನೀಡಿತ್ತು.
ಈ ಹಿನ್ನೆಲೆ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ನೀಡುವಂತೆ ಖೇರಾ ಗುವಾಹಟಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪಾರ್ಥಿವ್ ಜ್ಯೋತಿ ಸೈಕಿಯಾ ಅವರ ಏಕಸದಸ್ಯ ಪೀಠವು, ಪ್ರಕರಣವನ್ನು ಸರಳ ಮಾನನಷ್ಟ ಪ್ರಕರಣ ಎಂದು ಪರಿಗಣಿಸುವುದಿಲ್ಲ, ಇದು ಅದನ್ನು ಮೀರಿದ ಹೆಚ್ಚುವರಿ ಆರೋಪಗಳನ್ನು ಒಳಗೊಂಡಿದೆ ಎಂದು ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಪೊಲೀಸರು ಖೇರಾ ಅವರನ್ನು ವಿಚಾರಣೆಗೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net