ವಿದೇಶದಲ್ಲಿ ಹೂಡಿಕೆ ಆರೋಪ ಸುಳ್ಳು; ಪವನ್ ಖೇರಾ ವಿರುದ್ಧ ಮಾನನಷ್ಟ ಕೇಸ್ ಹಾಕ್ತೇನೆ: ಸಿಎಂ ಹಿಮಂತ ಬಿಸ್ವಾ ಶರ್ಮಾ | CM Himanta Biswa Sharma

ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಪವನ್ ಖೇರಾ
ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಪವನ್ ಖೇರಾ
Published on
ಗುವಾಹಟಿ: ಪತ್ನಿ ಮೂರು ವಿದೇಶಿ ಪಾಸ್​ಪೋರ್ಟ್ ಮತ್ತು ದುಬೈನಲ್ಲಿ ಆಸ್ತಿ ಹೊಂದಿದ್ದು, ಅಮೆರಿಕದಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಿದ್ದಾರೆ ಎಂಬ ಆರೋಪವನ್ನು ತಳ್ಳಿ ಹಾಕಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ(CM Himanta Biswa Sharma), ಅದು ರಾಜಕೀಯ ಪ್ರೇರಿತ ಆರೋಪ, ಪವನ್ ಖೇರಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಖೇರಾ ಅವರ ಪತ್ರಿಕಾಗೋಷ್ಠಿಯು ಕಾಂಗ್ರೆಸ್ಸಿನೊಳಗಿನ ತೀವ್ರ ಹತಾಶೆ ಮತ್ತು ಭೀತಿಯನ್ನು ಪ್ರತಿಬಿಂಬಿಸುತ್ತದೆ. ಅಸ್ಸಾಂ ಐತಿಹಾಸಿಕ ಜನಾದೇಶದತ್ತ ನಿರ್ಣಾಯಕವಾಗಿ ಸಾಗುತ್ತಿರುವಾಗ, ಇಂತಹ ಹತಾಶ ಮತ್ತು ಆಧಾರರಹಿತ ದಾಳಿಗಳು ಅವರ ಮುಳುಗುತ್ತಿರುವ ಹಡಗನ್ನು ತೋರಿಸುತ್ತಿದೆ. ಅವರ ಪ್ರತಿಯೊಂದು ಆರೋಪವನ್ನು ತಿರಸ್ಕರಿಸುತ್ತೇನೆ. ಇದು ಅಸ್ಸಾಂ ಜನರ ದಿಕ್ಕು ತಪ್ಪಿಸುವ ದುರುದ್ದೇಶಪೂರ್ವಕ ಹರಡುವ ಸುಳ್ಳು ಎಂದು ಹೇಳಿದ್ದಾರೆ.
ಮುಂದಿನ 48 ಗಂಟೆಗಳಲ್ಲಿ ನಾನು ಮತ್ತು ನನ್ನ ಪತ್ನಿ ಕಾಂಗ್ರೆಸ್ ನಾಯಕ ಪವನ್ ಖೇರಾ ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸ್ತೇವೆ. ಅಜಾಗರೂಕ ಮತ್ತು ಮಾನನಷ್ಟಕರ ಹೇಳಿಕೆಗೆ ಅವರೇ ಹೊಣೆಗಾರರಾಗುತ್ತಾರೆ. ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ. ಖೇರಾ ನ್ಯಾಯಾಲಯದಲ್ಲಿ ತಮ್ಮ ಕೃತ್ಯಗಳ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಪವನ್ ಖೇರಾ ಆರೋಪವೇನು?

ಭಾನುವಾರ ಬೆಳಗ್ಗೆ ಸುದ್ದಿಗೊಷ್ಠಿ ನಡೆಸಿದ್ದ ಕಾಂಗ್ರೆಸ್ ನಾಯಕ ಪವನ್ ಖೇರಾ, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಎರಡು ಇಸ್ಲಾಮಿಕ್ ರಾಷ್ಟ್ರಗಳು ಸೇರಿದಂತೆ ಮೂರು ದೇಶಗಳ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದು, ದುಬೈನಲ್ಲಿ ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ. ಅಮೆರಿಕದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ವಿದೇಶದಲ್ಲಿರುವ ವಿಶ್ವಾಸಾರ್ಹ ಮೂಲಗಳಿಂದ ಪಡೆದ ದಾಖಲೆಗಳನ್ನು ಆಧರಿಸಿ ಸಿಎಂ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಆರೋಪಗಳನ್ನು ಮಾಡಲಾಗಿದೆ ಎಂದು ಹೇಳಿರುವ ಖೇರಾ, ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ ಹಾಲಿ ಸಿಎಂ ಮತ್ತು ಅವರ ಕುಟುಂಬದ ವಿರುದ್ಧ ಇಷ್ಟೊಂದು ದೊಡ್ಡ ಆರೋಪ ಎಂದಿಗೂ ಬಂದಿರಲಿಲ್ಲ ಎಂದು ಹೇಳಿದ್ದಾರೆ.
ಪವನ್ ಖೇರಾ ಪ್ರಕಾರ, ಸಿಎಂ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಮೂರು ಪಾಸ್‌ಪೋರ್ಟ್‌ಗಳಲ್ಲಿ ಒಂದು 2022 ಮಾರ್ಚ್ 14ರಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿಯಲ್ಲಿ ನೀಡಲಾದ "ಗೋಲ್ಡನ್ ಕಾರ್ಡ್" ಆಗಿದ್ದು, ಇದು 2027 ಮಾರ್ಚ್ 13ರವರೆಗೆ ಮಾನ್ಯವಾಗಿರುತ್ತದೆ.
ಎರಡನೆಯದು, ಆಂಟಿಗುವಾ ಮತ್ತು ಬಾರ್ಬುಡಾದ ಪಾಸ್‌ಪೋರ್ಟ್ ಆಗಿದ್ದು, ಇದನ್ನು 2021 ಆಗಸ್ಟ್ 26ರಂದು ನೀಡಲಾಗಿದ್ದು, 2031 ಆಗಸ್ಟ್ 25ರವರೆಗೆ ಮಾನ್ಯವಾಗಿರುತ್ತದೆ. ಮೂರನೇಯದು ಈಜಿಪ್ಟ್‌ನ ಪಾಸ್‌ಪೋರ್ಟ್ ಆಗಿದ್ದು, 2022 ಫೆಬ್ರವರಿ 13ರಂದು ಪಡೆದುಕೊಂಡಿದ್ದು, ಅದು 2029 ಫೆಬ್ರವರಿ 12ರವರೆಗೆ ಮಾನ್ಯವಾಗಿರುತ್ತದೆ ಎಂದು ಆರೋಪಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net