ಪ್ರತಿ ಪಕ್ಷಕ್ಕೂ ಅವರದೇ ಆದ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ; ಸೋಲಿನ ಬಗ್ಗೆ ಪರಾಮರ್ಶನೆ ಮಾಡ್ತೇವೆ; ಕನಿಮೋಳಿ | Kanimozhi

ಸಂಸದೆ ಕನಿಮೋಳಿ
ಸಂಸದೆ ಕನಿಮೋಳಿ
Published on
ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ದಳಪತಿ ವಿಜಯ್ ನೇತೃತ್ವದ ಟಿವಿಕೆಗೆ ಬೆಂಬಲ ನೀಡಿದ ಕಾಂಗ್ರೆಸ್ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಡಿಎಂಕೆ ನಾಯಕಿ ಮತ್ತು ಸಂಸದೆ ಕನಿಮೋಳಿ(Kanimozhi), ಯಾವುದೂ ಸರಿ ಎಂದು ಭಾವಿಸುವ ಮತ್ತು ನಿರ್ಧರಿಸುವ ಹಕ್ಕು ಅವರಿಗಿದೆ ಎಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಮೊದಲ ಭಾರಿಗೆ ಸ್ಪರ್ಧಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಈ ಹಿನ್ನಲೆ ಭಾರತದ ಸಂವಿಧಾನವನ್ನು ನಂಬದ ಕೋಮು ಶಕ್ತಿಗಳನ್ನು ದೂರವಿಡಲು ಟಿವಿಕೆ ಬೆಂಬಲ ನೀಡುವುದಾಗಿ ಕಾಂಗ್ರೆಸ್​ ಘೋಷಣೆ ಮಾಡಿದೆ.
ಈ ಕುರಿತು ಚೆನ್ನೈನಲ್ಲಿ ಮಾತನಾಡಿರುವ ಸಂಸದೆ ಕನಿಮೋಳಿ, ನಾವು ಒಟ್ಟಿಗೆ ಹಲವು ಚುನಾವಣೆಗಳನ್ನು ಗೆದ್ದಿದ್ದೇವೆ. ಇಂದು ಒಟ್ಟಿಗೆ ಸೋತಿದ್ದೇವೆ. ಮತ್ತು ಪ್ರತಿಯೊಂದು ಪಕ್ಷಕ್ಕೂ ಅವರು ಸರಿ ಎಂದು ಭಾವಿಸುವದನ್ನು ನಿರ್ಧರಿಸುವ ಹಕ್ಕಿದೆ. ಇತರರ ಬಗ್ಗೆ ನನಗೆ ಹೇಳಲು ಏನೂ ಇಲ್ಲ.ಆದರೆ ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
ನಮ್ಮದು ಸೈದ್ದಾಂತಿಕ ಮೈತ್ರಿಯಾಗಿತ್ತು. ಮಿತ್ರಪಕ್ಷಗಳನ್ನು ಒಟ್ಟಿಗೆ ಇಟ್ಟುಕೊಳ್ಳುವುದು ಬಹಳ ಮುಖ್ಯ ಎಂದು ನಾಯಕ ಎಂಕೆ ಸ್ಟಾಲಿನ್ ಯಾವಾಗಲೂ ಸ್ಪಷ್ಟವಾಗಿ ಹೇಳಿದ್ದಾರೆ. ತಮಿಳುನಾಡಿನಲ್ಲಿ ಮತ್ತೊಂದು ಜಾತ್ಯತೀತ ಪಕ್ಷ ರಾಜಕೀಯಕ್ಕೆ ಬರುವ ಬಗ್ಗೆ ನಮಗೆ ಯಾವುದೇ ಭಯವಿಲ್ಲ. ಅಂತಹ ಪಕ್ಷಗಳು ನಮ್ಮ ರಾಜ್ಯದಲ್ಲಿ ಹೆಚ್ಚಿರುವುದು ತುಂಬಾ ಸಂತೋಷದ ಸಂಗತಿ ಎಂದಿದ್ದಾರೆ.
ಡಿಎಂಕೆ ತನ್ನ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತದೆ. ಡಿಎಂಕೆ ಹಲವು ಸೋಲು, ಗೆಲುವುಗಳನ್ನು ಕಂಡಿದೆ. ಹೇಗೆ ಮುನ್ನಡೆಯಬೇಕು ಎಂಬುದು ತಿಳಿದಿದೆ. ತಮಿಳುನಾಡಿನ ಜನ ಬದಲಾವಣೆ ಬಯಸಿದ್ದರು. ವಿಭಿನ್ನವಾಗಿದ್ದನ್ನು ಹುಡುಕುತ್ತಿದ್ದರು ಎಂಬುದನ್ನು ಈ ಫಲಿತಾಂಶ ತೋರಿಸಿದೆ. ವಿಜಯ್ ಜನರು ಭಯಸುವ ಆಡಳಿತವನ್ನು ನೀಡಲಿ ಎಂದು ಬಯಸುತ್ತೇನೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net