ಛತ್ತೀಸ್​ಗಡದಲ್ಲಿ ಎನ್​ಕೌಂಟರ್; ಬಸ್ತಾರ್​ನ ತೆಲುಗು ಮೂಲದ ಕೊನೆಯ ಮತ್ತು ಮಹಿಳಾ ನಕ್ಸಲ್ ಕಮಾಂಡರ್ ರೂಪಿ ಹತ್ಯೆ | Naxal commander Rupi

ಮಹಿಳಾ ನಕ್ಸಲ್ ಕಮಾಂಡರ್ ರೂಪಿ
ಮಹಿಳಾ ನಕ್ಸಲ್ ಕಮಾಂಡರ್ ರೂಪಿ
Published on
ರಾಯ್​ಪುರ: ಛತ್ತೀಸ್​ಗಡದ ಕಾಂಕೇರ್ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಇಂದು(ಏ. 13) ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಬಸ್ತಾರ್ ಪ್ರದೇಶದ ತೆಲುಗು ಮೂಲದ ಕೊನೆಯ ಮತ್ತು ಮಹಿಳಾ ನಕ್ಸಲ್ ಕಮಾಂಡರ್ ಆಗಿದ್ದ ರೂಪಿ ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕಂಕೇರ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ನಿಖಿಲ್ ರಾಖೇಚಾ, ಚೋಟೆಬೆಥಿಯಾ ಮತ್ತು ಪಾರ್ತಾಪುರ ಪೊಲೀಸ್ ಠಾಣೆಗಳ ಗಡಿಯಲ್ಲಿರುವ ಮಚ್ಪಲ್ಲಿ-ಅರಾಮ್‌ಜೋರಾ-ಹಿದೂರ್ ಅರಣ್ಯ ಪ್ರದೇಶಗಳಲ್ಲಿ ಮಾವೋವಾದಿಗಳ ಉಪಸ್ಥಿತಿಯ ಬಗ್ಗೆ ನಿಖರವಾದ ಗುಪ್ತಚರ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಶೋಧ ಕಾರ್ಯಾಚರಣೆಯ ಸಮಯದಲ್ಲಿ ಮಚ್ಪಲ್ಲಿ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಭೀಕರ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಸ್ಥಳದಲ್ಲಿ ಮಹಿಳಾ ಕಮಾಂಡರ್ ಆಗಿದ್ದ ರೂಪಿ ಎನ್ನುವವರ ಶವ, ಪಿಸ್ತೂಲ್, ಮದ್ದುಗುಂಡುಗಳು ಹಾಗೂ ದಿನನಿತ್ಯ ಬಳಸುವ ವಿವಿಧ ಮಾವೋವಾದಿ ಸಾಮಗ್ರಿಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.
ಮಚ್ಪಲ್ಲಿ-ಅರಾಮ್‌ಜೋರಾ-ಹಿದೂರ್ ಅರಣ್ಯ ಪ್ರದೇಶಗಳಲ್ಲಿ ಉಳಿದಿರುವ ಮಾವೋವಾದಿ ಕಾರ್ಯಕರ್ತರಿಗಾಗಿ ಪೊಲೀಸರು ಮತ್ತು ಹೆಚ್ಚುವರಿ ಭದ್ರತಾ ಪಡೆಗಳ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎನ್ನಲಾಗಿದೆ.
ಇನ್ನೂ ಶವವಾಗಿ ಪತ್ತೆಯಾಗಿರುವ ರೂಪಿ ಏರಿಯಾ ಕಮಿಟಿ ಸದಸ್ಯೆ (ACM) ಆಗಿದ್ದರು ಎನ್ನಲಾಗಿದೆ. ಈಗ ಅವರ ಸಾವಿನೊಂದಿಗೆ ಛತ್ತೀಸ್‌ಗಢದಲ್ಲಿ ಮಾವೋವಾದಿ ಚಳವಳಿಯ ತಿರುಳಾಗಿದ್ದ ತೆಲುಗು ಮೂಲದ ನಾಯಕತ್ವ ಕೊನೆಗೊಂಡಿದೆ ಎಂದು ನಂಬಲಾಗಿದೆ. ರೂಪಿ ದಂಡಕಾರಣ್ಯ ವಿಶೇಷ ವಲಯ ಸಮಿತಿ ಸದಸ್ಯ ವಿಜಯ್ ರೆಡ್ಡಿಯನ್ನು ವಿವಾಹವಾಗಿದ್ದರು. 2025ರಲ್ಲಿ ಮನ್ಪುರ್-ಮೊಹ್ಲಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್​ನಲ್ಲಿ ರೆಡ್ಡಿ ಹತ್ಯೆಯಾಗಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net