ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ರಕ್ಷಣೆಯಿಲ್ಲ ಎಂದ ಡಚ್ ಪ್ರಧಾನಿ; ತಿಳುವಳಿಕೆ ಇಲ್ಲ ಎಂದು ಭಾರತ ತಿರುಗೇಟು | India

ಪ್ರಧಾನಿ ಮೋದಿ ಮತ್ತು ನೆದರ್ಲ್ಯಾಂಡ್ಸ್ ಪ್ರಧಾನಿ ರಾಬ್ ಜೆಟ್ಟನ್
ಪ್ರಧಾನಿ ಮೋದಿ ಮತ್ತು ನೆದರ್ಲ್ಯಾಂಡ್ಸ್ ಪ್ರಧಾನಿ ರಾಬ್ ಜೆಟ್ಟನ್
Published on
ನವದೆಹಲಿ: ಭಾರತದಲ್ಲಿ(India) ಪತ್ರಿಕಾ ಸ್ವಾತಂತ್ರ್ಯ ಕುಸಿದಿದ್ದು, ಅಲ್ಪಸಂಖ್ಯಾತರ ರಕ್ಷಣೆಯ ಹಕ್ಕುಗಳು ಕುಸಿತ ಕಂಡಿವೆ ಎಂದು ಡಚ್ ಪ್ರಧಾನಿ ರಾಬ್ ಜೆಟ್ಟಿನ್ ಅವರ ಹೇಳಿಕೆಯನ್ನು ತಿರಸ್ಕರಿಸಿರುವ ಭಾರತ, ಭಾರತದಲ್ಲಿನ ವೈವಿಧ್ಯತೆಯ ತಿಳುವಳಿಕೆಯ ಕೊರತೆಯೇ ಇಂತಹ ಕಾಮೆಂಟ್‌ಗಳಿಗೆ ಕಾರಣ ಎಂದು ತಿರುಗೇಟು ನೀಡಿದೆ.
ಪ್ರಧಾನಿ ನರೇಂದ್ರ ಮೋದಿಯವರ ನೆದರ್ಲ್ಯಾಂಡ್ಸ್ ಭೇಟಿಯ ಸಂದರ್ಭದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿರುವ ವಿದೇಶಾಂಗ ಕಾರ್ಯದರ್ಶಿ ಸಿ.ಬಿ. ಜಾರ್ಜ್, ಭಾರತದ ಪ್ರಜಾಪ್ರಭುತ್ವವು ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒದಗಿಸುತ್ತದೆ. ನಮ್ಮ ಸಂಸ್ಕೃತಿ ಆಳವಾಗಿದೆ. ಇಂತಹ ಪ್ರಶ್ನೆಗಳು ಹೆಚ್ಚಾಗಿ ಉದ್ಭವಿಸಲು ಕಾರಣವೆನೆಂದರೆ ಪ್ರಶ್ನೆಗಳನ್ನು ಕೇಳುವವರಿಗೆ ಭಾರತದ ಬಗ್ಗೆ ತಿಳುವಳಿಕೆ ಇಲ್ಲದಿರುವುದು ಎಂದಿದ್ದಾರೆ.
ಭಾರತೀಯ ನಾಗರಿಕತೆಯು 5,000 ವರ್ಷಗಳಷ್ಟು ಹಳೆಯದು. ಸಂಸ್ಕೃತಿ, ಧರ್ಮ ಮತ್ತು ಭಾಷೆಯ ವಿಷಯದಲ್ಲಿ ಭಾರತವು ಬಹಳ ವೈವಿಧ್ಯಮಯ ದೇಶವಾಗಿದೆ. ಹಿಂದೂ ಧರ್ಮ, ಬೌದ್ಧಧರ್ಮ, ಜೈನ ಮತ್ತು ಸಿಖ್ ಧರ್ಮ ಎಂಬ ನಾಲ್ಕು ಧರ್ಮಗಳು ಹೊರಹೊಮ್ಮಿದ್ದು ಭಾರತವನ್ನು ಹೊರತುಪಡಿಸಿದ್ರೆ, ಜಗತ್ತಿನಲ್ಲಿ ಬೇರೆ ಯಾವುದೇ ದೇಶವಿಲ್ಲ. ಆ ಧರ್ಮಗಳು ಇನ್ನೂ ಭಾರತದಲ್ಲಿ ಮುಂದುವರೆದಿವೆ ಎಂದು ಹೇಳಿದ್ದಾರೆ.
ಯಹೂದಿ ಧರ್ಮವು 2500 ವರ್ಷಗಳಿಂದ ಭಾರತದಲ್ಲಿದೆ. ಮತ್ತು ಇನ್ನೂ ನಿರಂತರವಾಗಿ ಮುಂದುವರೆದಿದೆ. ಯಹೂದಿಗಳು ತಾರತಮ್ಯವನ್ನು ಎದುರಿಸದ ಕೆಲವೇ ದೇಶಗಳಲ್ಲಿ ಭಾರತವೂ ಒಂದು. ಕ್ರಿಸ್ತನ ಪುನರುತ್ಥಾನದ ಸ್ವಲ್ಪ ಸಮಯದ ನಂತರ ಕ್ರಿಶ್ಚಿಯನ್ ಧರ್ಮ ಭಾರತವನ್ನು ಪ್ರವೇಶಿಸಿತು. ಪ್ರವಾದಿ ಮುಹಮ್ಮದ್ ಅವರ ಕಾಲದಲ್ಲಿ ಭಾರತವನ್ನು ತಲುಪಿದ ಇಸ್ಲಾಂ ಇನ್ನೂ ಅಭಿವೃದ್ಧಿ ಹೊಂದುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ಶೇ. 11 ರಷ್ಟಿತ್ತು. ಈಗ ಅದು ಶೇ. 20 ಕ್ಕೆ ತಲುಪಿದೆ. ಭಾರತವನ್ನು ಹೊರತುಪಡಿಸಿ ಜಗತ್ತಿನಲ್ಲಿ ಬೇರೆ ಯಾವುದೇ ದೇಶದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಿಲ್ಲ ಬಡತನ ನಿರ್ಮೂಲನೆಗೆ ಯಾವುದೇ ಹಿಂಸಾತ್ಮಕ ಕ್ರಮಗಳನ್ನು ತೆಗೆದುಕೊಂಡಿಲ್ಲ. ಪ್ರಜಾಪ್ರಭುತ್ವ ವಿಧಾನಗಳ ಮೂಲಕ ಬಡತನವನ್ನು ನಿರ್ಮೂಲನೆ ಮಾಡಲಾಗುತ್ತಿದೆ ಎಂದಿದ್ದಾರೆ.

ಡಚ್ ಪ್ರಧಾನಿ ರಾಬ್ ಜೆಟ್ಟನ್ ಹೇಳಿದ್ದೇನು?

ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಮೊದಲು ಡಚ್ ಪ್ರಧಾನಿ ವರದಿಗಾರರೊಂದಿಗೆ ಮಾಧ್ಯಮ ಸ್ವಾತಂತ್ರ್ಯ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಮಾತನಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನಾವು ಭಾರತ ಸರ್ಕಾರದೊಂದಿಗೆ ಪತ್ರಿಕಾ ಸ್ವಾತಂತ್ರ್ಯ ಮಾತ್ರವಲ್ಲದೆ, ಅಲ್ಪಸಂಖ್ಯಾತರ ಹಕ್ಕುಗಳು ಬಗ್ಗೆ ಮಾತನಾಡ್ತೇವೆ. ಈ ವೇಳೆ ಪರಿಸ್ಥಿತಿ ಸ್ವಲ್ಪ ಚಿಂತಜನಕವಾಗಿದೆ ಎಂದು ಹೇಳಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net