Poll body | ಬಿಎಲ್​ಒಗಳಿಗೆ ಬೆದರಿಕೆಯೊಡ್ಡಬೇಡಿ..ನಿಮ್ಮ ಆರೋಪಗಳು ಆಧಾರರಹಿತವಾಗಿವೆ: ಟಿಎಂಸಿಗೆ ತಿರುಗೇಟು ನೀಡಿದ ಚುನಾವಣಾ ಆಯೋಗ

Poll body | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್
Poll body | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್
Published on
ದೆಹಲಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗ ಶುಕ್ರವಾರ ಕಿಡಿಕಾರಿದ್ದು. ಪಕ್ಷದ ಆರೋಪಗಳನ್ನು ಆಧಾರರಹಿತ ಎಂದು ತಿರಸ್ಕರಿಸಿ, ಬೂತ್ ಮಟ್ಟದ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಮತ್ತು ಬೆದರಿಕೆಯೊಡ್ಡುವ ಕಾರ್ಯಕ್ಕೆ ಕೈ ಹಾಕಬಾರದು ಎಂದು ಎಚ್ಚರಿಕೆ ನೀಡಿದೆ.
ಬೂತ್​ ಮಟ್ಟದ ಅಧಿಕಾರಿಗಳು ಯಾವುದೇ ಒತ್ತಡವಿಲ್ಲದೆ ಕೆಲಸ ಮಾಡಲು ಅವಕಾಶ ನೀಡಬೇಕು, ವಿಶೇಷವಾಗಿ ಮೃತರಾಗಿರುವವರ, ವಿಳಾಸ ಬದಲಿಸಿರುವವರ ಮತ್ತ ನಕಲಿ ಮತದಾರರಿಗೆ ಸಂಬಂಧಿಸಿದಂತೆ ಜಾಗೃತಿ ವಹಿಸುವುದು ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ. ಟಿಎಂಸಿ ಎತ್ತಿದ ಆರೋಪಗಳಿಗೆ ಪಕ್ಷದ 10 ಸದಸ್ಯರ ನಿಯೋಗಕ್ಕೆ ಚುನಾವಣಾ ಆಯೋಗವು ಒಂದೊಂದೇ ಅಂಶಗಳ ಮೂಲಕ ಸ್ಪಷ್ಟನೆ ನೀಡಿತು ಮತ್ತು ರಾಜ್ಯಕ್ಕೆ ರೋಲ್ ಅಬ್ಸರ್ವರ್ ನೇಮಕಕ್ಕೆ ಆದೇಶ ನೀಡಿತು ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್ 9 ರ ಬಳಿಕವ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಆಯೋಗವು ತಿಳಿಸಿದ್ದು, ಆವಾಗ ಕರಡು ಮತದಾರರ ಪಟ್ಟಿಯನ್ನು ಅವರೊಂದಿಗೆ ಹಂಚಿಕೊಳ್ಳಲಾಗುತ್ತದೆ. ಅಲ್ಲಿಯವರೆಗೆ, ಚುನಾವಣಾ ಸಂಬಂಧಿತ ಕೆಲಸಕ್ಕಾಗಿ ನಿಯೋಜನೆಗೊಂಡಿರುವ ರಾಜ್ಯ ಸರ್ಕಾರಿ ನೌಕರರಾದ ಬಿಎಲ್‌ಒಗಳು, ಚುನಾವಣಾ ನೋಂದಣಿ ಅಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳ ಸ್ವತಂತ್ರ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡದಂತೆ ಪಕ್ಷಗಳಿಗೆ ನಿರ್ದೇಶನ ನೀಡಿದೆ.
ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಭದ್ರತಾ ಲೋಪವನ್ನು ಉಲ್ಲೇಖಿಸಿರುವ ಆಯೋಗ, ಕಚೇರಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಆದೇಶಿಸಿದ್ದು. ಪ್ರಸ್ತುತ ಅಸ್ತಿತ್ವದಲ್ಲಿರುವ ಕಚೇರಿ ಮತ್ತು ಹೊಸ ಆವರಣದಲ್ಲಿ ಸಂಪೂರ್ಣ ಭದ್ರತೆಯನ್ನು ಖಚಿತಪಡಿಸಿಕೊಳ್ಳುವಂತೆ ಕೋಲ್ಕತ್ತಾ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರಿಂದ ಬಿಎಲ್‌ಒಗಳ ಮೇಲೆ ಯಾವುದೇ ಒತ್ತಡ ಅಥವಾ ಬೆದರಿಕೆ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕರು ಮತ್ತು ಕೋಲ್ಕತ್ತಾ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ.

ಟಿಎಂಸಿ ಆರೋಪವೇನು..?

ರಾಜ್ಯಸಭಾ ಸದಸ್ಯ ಡೆರೆಕ್ ಒ'ಬ್ರೇನ್ ನೇತೃತ್ವದ 10 ಸದಸ್ಯರ ಟಿಎಂಸಿ ನಿಯೋಗವು, ಅಶೋಕ ರಸ್ತೆಯ ನಿರ್ವಚನ ಸದನದಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಮತ್ತು ಅವರ ತಂಡದೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದ್ದು, ಈ ಸಭೆಯು ಏಕಪಕ್ಷೀಯವಾಗಿತ್ತು, ಸಿಇಸಿ ಒಂದು ಗಂಟೆ ನಿರಂತರವಾಗಿ ಮಾತನಾಡಿದರು. ನಾವು ಮಾತನಾಡುವಾಗ ಅವರು ನಮಗೆ ಅಡ್ಡಿಪಡಿಸಲಿಲ್ಲ ಎಂದು ಟಿಎಂಸಿ ನಾಯಕರು ಹೇಳಿಕೊಂಡಿದ್ದು. ಈ ಸಂದರ್ಭದಲ್ಲಿ ನಾವು ಐದು ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದು, ಇದರಲ್ಲಿ ಚುನಾವಣಾ ಆಯುಕ್ತರು ಯಾವುದಕ್ಕೂ ಉತ್ತರಿಸಲಿಲ್ಲ ಎಂದು ತಿಳಿಸಿದರು.
ಸಭೆಯ ಬಳಿಕ ಚುನಾವಣಾ ಆಯೋಗದ ಕೇಂದ್ರ ಕಚೇರಿಯ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಡೆರೆಕ್ ಒ'ಬ್ರೇನ್, ಈ ಕ್ರೂರ ಎಸ್‌ಐಆರ್ ಪ್ರಕ್ರಿಯೆಯ ಸಮಯದಲ್ಲಿ ಸಾವನ್ನಪ್ಪಿದ 38 ಬಿಎಲ್‌ಒಗಳು ಮತ್ತು ಇತರ ಅಧಿಕಾರಿಗಳ ಪಟ್ಟಿಯನ್ನು ನಾವು ಹಸ್ತಾಂತರಿಸಿದ್ದೇವೆ. ಆಯೋಗವು ನಮ್ಮ ಪ್ರಶ್ನೆಗಳಿಗೆ ಯಾವುದೇ ಉತ್ತರವನ್ನು ನೀಡಲಿಲ್ಲ ಎಂದು ತಿಳಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net