ಹಿಂದೂ ರಾಷ್ಟ್ರಕ್ಕೆ ಹೆದರಬೇಡಿ, ನಮ್ಮೆಲ್ಲರ DNA ಒಂದೇ!: ಮುಸ್ಲಿಮರಿಗೆ ಬಾಬಾ ರಾಮದೇವ್ ಕೊಟ್ಟ ಶಾಕಿಂಗ್ ಸಂದೇಶ ವೈರಲ್! Baba Ramdev on Hindu Rashtra
ಧರ್ಮ ಬದಲಾದರೂ ಪೂರ್ವಜರು ಬದಲಾಗಲ್ಲ ಎಂದ ಯೋಗ ಗುರು ಬಾಬಾ ರಾಮದೇವ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹಿಂದೂ ರಾಷ್ಟ್ರಕ್ಕೆ ಮುಸ್ಲಿಮರು ಹೆದರಬೇಡಿ, ನಮ್ಮೆಲ್ಲರ DNA ಒಂದೇ!
ಧರ್ಮ ಬದಲಾದರೂ ಪೂರ್ವಜರು ಬದಲಾಗಲ್ಲ ಎಂದ ಯೋಗ ಗುರು ಬಾಬಾ ರಾಮದೇವ್
99% ಮುಸ್ಲಿಮರು ಒಳ್ಳೆಯವರು ಎಂದ ಯೋಗ ಗುರು
ನವದೆಹಲಿ: ದೇಶದಲ್ಲಿ 'ಹಿಂದೂ ರಾಷ್ಟ್ರ'ದ ಕಲ್ಪನೆಯ ಕುರಿತು ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಯೋಗ ಗುರು ಬಾಬಾ ರಾಮದೇವ್ (Baba Ramdev on Hindu Rashtra) ನೀಡಿರುವ ಹೇಳಿಕೆಯೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.
ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ಯಾರೂ ಹೆದರುವ ಅಗತ್ಯವಿಲ್ಲ, ನಾವೆಲ್ಲರೂ ಒಂದೇ ಪೂರ್ವಜರ ಮಕ್ಕಳು ಎಂದು ರಾಮದೇವ್ ಮುಸ್ಲಿಂ ಸಮುದಾಯಕ್ಕೆ ಸಂದೇಶ ನೀಡಿದ್ದಾರೆ. ಖಾಸಗಿ ಚಾನೆಲ್ವೊಂದರ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಧರ್ಮಗಳು ಬೇರೆಯಾಗಿರಬಹುದು ಆದರೆ ನಮ್ಮ ರಕ್ತ ಮತ್ತು ಪರಂಪರೆ ಒಂದೇ ಎಂದು ಪ್ರತಿಪಾದಿಸಿದ್ದಾರೆ.
ಹಿಂದೂ ರಾಷ್ಟ್ರದ ಕಲ್ಪನೆಯಿಂದ ಮುಸ್ಲಿಮರು ಆತಂಕಗೊಂಡಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಮದೇವ್, ನಾವು ಯಾವಾಗ ಯಾರನ್ನು ದೂರ ಇಟ್ಟಿದ್ದೇವೆ? ನಾವು ಜಾತಿ, ಧರ್ಮ, ವರ್ಗ ನೋಡದೆ ಎಲ್ಲರನ್ನೂ ಗೌರವಿಸುತ್ತೇವೆ. ನಮ್ಮ ವಿರೋಧ ಏನಿದ್ದರೂ ಪಾಪ, ಅನ್ಯಾಯ ಮತ್ತು ತಪ್ಪುಗಳ ವಿರುದ್ಧ ಮಾತ್ರ.
ನಾವೆಲ್ಲರೂ ನಮ್ಮ ಪ್ರಾಚೀನ ಋಷಿಮುನಿಗಳ ವಂಶಸ್ಥರು. ಆಳವಾಗಿ ನೋಡಿದರೆ ನಮ್ಮೆಲ್ಲರ ಡಿಎನ್ಎ (DNA) ಒಂದೇ ಆಗಿದೆ. ಇದನ್ನು ಕೇವಲ ಭಾರತದವರಷ್ಟೇ ಅಲ್ಲ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇಂಡೋನೇಷ್ಯಾದ ಮುಸ್ಲಿಮರು ಕೂಡ ಒಪ್ಪಿಕೊಳ್ಳುತ್ತಾರೆ ಎಂದಿದ್ದಾರೆ.
99% ಮುಸ್ಲಿಮರು ಒಳ್ಳೆಯವರೇ ಇದ್ದಾರೆ!
ಕೇವಲ ಶೇಕಡಾ 1 ರಷ್ಟು ಮುಸ್ಲಿಮರು ಮಾತ್ರ ಇದನ್ನು ಒಪ್ಪಲ್ಲ. ಅವರು ದೇಶದಲ್ಲಿ ದ್ವೇಷ ಹರಡಲು ಬಯಸುವವರು. ಆದರೆ ಉಳಿದ 99 ಪ್ರತಿಶತ ಮುಸ್ಲಿಮರು ತುಂಬಾ ಒಳ್ಳೆಯವರು. ಅವರು ತಮ್ಮನ್ನು ದೇಶದ ಮೇಲೆ ದಾಳಿ ಮಾಡಿದ ಆಕ್ರಮಣಕಾರರೊಂದಿಗೆ ಗುರುತಿಸಿಕೊಳ್ಳುವುದಿಲ್ಲ.
ಸಾಮಾಜಿಕ ಅಥವಾ ರಾಜಕೀಯ ಕಾರಣಗಳಿಂದ ಅವರ ಧರ್ಮ ಬದಲಾಗಿರಬಹುದು, ಆದರೆ ತಮ್ಮ ಪೂರ್ವಜರು ಹಿಂದೂಗಳೇ ಎಂಬುದನ್ನು ಭಾರತದ ಬಹುತೇಕ ಮುಸ್ಲಿಮರು ಅರ್ಥ ಮಾಡಿಕೊಂಡಿದ್ದಾರೆ ಎಂದು ಬಾಬಾ ರಾಮದೇವ್ ಹೇಳಿದ್ದಾರೆ.
ಭಾರತಕ್ಕೆ ಸಂವಿಧಾನವೇ ಸರ್ವೋಚ್ಚ
ನಮಗೆ ದೇಶದ ಸಂವಿಧಾನ ಮತ್ತು ರಾಷ್ಟ್ರದ ಏಕತೆಯೇ ಎಲ್ಲದಕ್ಕಿಂತ ಮಿಗಿಲು ಎಂದು ಸ್ಪಷ್ಟಪಡಿಸಿದ ರಾಮದೇವ್, ಭಾರತವು ಜಾಗತಿಕವಾಗಿ ದೊಡ್ಡ ಆರ್ಥಿಕ ಮತ್ತು ರಾಜಕೀಯ ಶಕ್ತಿಯಾಗಬೇಕು. ನಮ್ಮ ದೇಶದ ರೂಪಾಯಿ ಮತ್ತು ಪಾಸ್ಪೋರ್ಟ್ಗೆ ಪ್ರಪಂಚದಾದ್ಯಂತ ಭಾರಿ ಗೌರವ ಸಿಗಬೇಕು ಎಂಬುದು ನಮ್ಮ ಕನಸು ಎಂದಿದ್ದಾರೆ.
ದುಬೈ ಮತ್ತು ದಿಯೋಬಂದ್ನಲ್ಲೂ ನಾನು ಯೋಗ ಕ್ಲಾಸ್ ಮಾಡಿದ್ದೇನೆ. ಬಿಪಿ, ಶುಗರ್, ದಪ್ಪಗಾಗುವ ಸಮಸ್ಯೆ ಹಾಗೂ ನಿದ್ದೆಯಿಲ್ಲದ ಕಾಯಿಲೆಗಳಿಗೆ ಯೋಗವೇ ಮದ್ದು ಎಂದು ಮುಸ್ಲಿಮರಿಗೂ ಗೊತ್ತಾಗಿದೆ. ಹಾಗಾಗಿ ಇವತ್ತು ಇಡೀ ಜಗತ್ತೇ ಯೋಗವನ್ನು ಒಪ್ಪಿಕೊಂಡಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ಶ್ರೀರಾಮ, ಶ್ರೀಕೃಷ್ಣ, ಶಿವ ಮತ್ತು ನಮ್ಮ ದೇಶದ ಪ್ರಾಚೀನ ಋಷಿಮುನಿಗಳ ಮೌಲ್ಯಗಳೇ ಭಾರತದ ನಿಜವಾದ ಸಂಸ್ಕೃತಿ. ಧರ್ಮದ ಹೆಸರಿನಲ್ಲಿ ದ್ವೇಷ ಹರಡುವವರನ್ನು ದೇಶದ ಕಾನೂನು ಮತ್ತು ಸಂವಿಧಾನದ ಅಡಿಯಲ್ಲಿ ಮಟ್ಟ ಹಾಕಲಾಗುವುದು ಎಂದು ರಾಮದೇವ್ ಎಚ್ಚರಿಸಿದ್ದಾರೆ, (ಏಜನ್ಸೀಸ್).