ಕೇಂದ್ರದಲ್ಲಿ ಅಧಿಕಾರದಲ್ಲಿದ್ರೂ ಪುದುಚೇರಿಗೆ ರಾಜ್ಯ ಸ್ಥಾನಮಾನ ನೀಡಲಿಲ್ಲ; ಬಿಜೆಪಿ-ಕಾಂಗ್ರೆಸ್ ವಿರುದ್ಧ ದಳಪತಿ ವಿಜಯ್ ಕಿಡಿ | Thalapathy Vijay

ದಳಪತಿ ವಿಜಯ್
ದಳಪತಿ ವಿಜಯ್
Published on
Thalapathy Vijay: ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಚುನಾವಣೆ ಪ್ರಚಾರ ರಂಗೇರಿದ್ದು, ಕೇಂದ್ರದಲ್ಲಿ ಹಲವು ವರ್ಷಗಳಿಂದ ಆಡಳಿತ ನಡೆಸುತ್ತಿದ್ದರೂ ಪುದುಚೇರಿಗೆ ರಾಜ್ಯ ಸ್ಥಾನಮಾನ ನೀಡುವಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ವಿಫಲವಾಗಿವೆ ಎಂದು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ದಳಪತಿ ವಿಜಯ್ ವಾಗ್ದಾಳಿ ನಡೆಸಿದ್ದಾರೆ.
ಪುದುಚೇರಿಯಲ್ಲಿ ಶನಿವಾರ(ಏ. 04) ನಡೆದ ಟಿವಿಕೆ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಟಿವಿಕೆ ಸರ್ಕಾರವು ಲೆಫ್ಟಿನೆಂಟ್ ಗವರ್ನರ್ ಹಸ್ತಕ್ಷೇಪವಿಲ್ಲದೆ ಕಾನೂನುಬದ್ಧವಾಗಿ ಪೂರ್ಣ ರಾಜ್ಯ ಸ್ಥಾನಮಾನವನ್ನು ಪಡೆಯಲು 100% ಪ್ರಯತ್ನ ಮಾಡುತ್ತದೆ. ಚುನಾವಣೆಯಲ್ಲಿ ಚಿಹ್ನೆಯನ್ನು ಬೆಂಬಲಿಸುವಂತೆ ಎಂದು ಮನವಿ ಮಾಡಿದ್ದಾರೆ.
ಪುದುಚೇರಿಯಲ್ಲಿ ಆಡಳಿತ ನಡೆಸುತ್ತಿರುವ ಅಖಿಲ ಭಾರತ ಎನ್ಆರ್ ಕಾಂಗ್ರೆಸ್-ಬಿಜೆಪಿ ಮೈತ್ರಿಕೂಟವು ದಣಿದ ಮೈತ್ರಿಕೂಟವಾಗಿದೆ ಎಂದು ಕಿಡಿಕಾರಿದ ಅವರು, ತಮಿಳುನಾಡಿನಂತೆಯೇ, ಪುದುಚೇರಿಯಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟವು ಗೊಂದಲಮಯವಾಗಿದೆ. ಜನರೊಂದಿಗೆ ನಿಲ್ಲುವ ನಮ್ಮ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಒತ್ತಾಯಿಸಿದ್ದಾರೆ.
ಫ್ರೆಂಚ್ ವಸಾಹತು ಆಗಿದ್ದ ಪುದುಚೇರಿ, 1962ರಲ್ಲಿ ಅಧಿಕೃತವಾಗಿ ಭಾರತದೊಂದಿಗೆ ವಿಲೀನಗೊಂಡಿತು. ಬಳಿಕ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನವನ್ನು ಪಡೆಯಿತು. ಕೇಂದ್ರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ನೇಮಿಸಿದ ಲೆಫ್ಟಿನೆಂಟ್ ಗವರ್ನರ್ ಇಲ್ಲಿ ಆಡಳಿತ ನಡೆಸುತ್ತಿದ್ದು, ಚುನಾಯಿತ ಪ್ರಾದೇಶಿಕ ಸರ್ಕಾರವು ಸೀಮಿತ ಅಧಿಕಾರವನ್ನು ಹೊಂದಿದೆ. ಬಹಳ ವರ್ಷಗಳಿಂದ ಪುದುಚೇರಿಗೆ ರಾಜ್ಯ ಸ್ಥಾನಮಾನ ನೀಡುವಂತೆ ಒತ್ತಾಯಿಸಲಾಗುತ್ತಿದೆ.
ಪ್ರಸ್ತುತ ಪುದುಚೇರಿ ವಿಧಾನಸಭೆಯಲ್ಲಿ 33 ಸದಸ್ಯರಿದ್ದು, ಅದರಲ್ಲಿ 30 ಮಂದಿ ಚುನಾಯಿತ ಪ್ರತಿನಿಧಿಗಳಾಗಿದ್ರೆ, ಮೂವರನ್ನು ಕೇಂದ್ರ ಸರ್ಕಾರ ನಾಮನಿರ್ದೇಶನ ಮಾಡುತ್ತಿದೆ. ಏ. 9ರಂದು ಚುನಾವಣೆ ನಡೆಯಲಿದೆ. ಮೇ. 04ರಂದು ಫಲಿತಾಂಶ ಪ್ರಕಟವಾಗಲಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net