ನೇತಾಜಿ ಕುರಿತು ಅವಹೇಳನಕಾರಿ ಮಾತು: ಬಿಜೆಪಿ ಸಂಸದನಿಗೆ ಮಮತಾ ಸರ್ಕಾರ ನೀಡಿದ್ದ ಪ್ರತಿಷ್ಠಿತ ಬಂಗಾಳ ಪ್ರಶಸ್ತಿ ಹಿಂಪಡೆದ ಬಿಜೆಪಿ ಸರ್ಕಾರ | BJP government

ಸಿಎಂ ಸುವೇಂದು ಅಧಿಕಾರಿ
ಸಿಎಂ ಸುವೇಂದು ಅಧಿಕಾರಿ
Published on
ಕೋಲ್ಕತ್ತಾ: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಅನಂತ ಮಹಾರಾಜ್ ಎಂದೇ ಖ್ಯಾತಿ ಪಡೆದಿರುವ ಬಿಜೆಪಿ ಸಂಸದ ನಾಗೇಂದ್ರ ರೇ ಅವರಿಗೆ ಈ ಹಿಂದೆ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದಲ್ಲಿ ನೀಡಲಾಗಿದ್ದ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಬಂಗಾ ಬಿಭೂಷಣ ಪ್ರಶಸ್ತಿಯನ್ನು ಗುರುವಾರ(ಆ. 13) ಪಶ್ಚಿಮ ಬಂಗಾಳ ಬಿಜೆಪಿ ಸರ್ಕಾರ(BJP government) ಹಿಂತೆಗೆದುಕೊಂಡಿದೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಗಲಿ ಅಥವಾ ಬಹಿರಂಗ ವೇದಿಕೆಗಳಲ್ಲಾಗಲಿ, ಶಾಸಕರು, ಸಂಸದರು ಯಾರೇ ಅವಹೇಳನಕಾರಿ ಹೇಳಿಕೆ ನೀಡಿದ್ರೂ ಕ್ರಮಕೈಗೊಳ್ಳುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿಕೆ ನೀಡಿದ 24 ಗಂಟೆಯಲ್ಲಿ ಈ ಪ್ರಶಸ್ತಿಯನ್ನು ಹಿಂಪಡೆಯಲಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಸರ್ಕಾರ, ನಾಗೇಂದ್ರ ರೇ ಅವರು 'ಬಂಗಾ ವಿಭೂಷಣ' ಪ್ರಶಸ್ತಿಯನ್ನು ತಮ್ಮ ಬಳಿಯೇ ಮುಂದುವರಿಸಿಕೊಂಡಿರುವುದು, ಆ ಗೌರವದ ಘನತೆ, ಪ್ರತಿಷ್ಠೆ ಮತ್ತು ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಸಮರ್ಥ ಪ್ರಾಧಿಕಾರವು ಅಭಿಪ್ರಾಯಪಟ್ಟಿದೆ. ಆದ್ದರಿಂದ, ಪಶ್ಚಿಮ ಬಂಗಾಳ ಸರ್ಕಾರವು ನಾಗೇಂದ್ರ ರೇ ಅವರಿಗೆ 2026 ಫೆಬ್ರವರಿ 21ರಂದು ನೀಡಲಾಗಿದ್ದ 'ಬಂಗಾ ವಿಭೂಷಣ' ಪ್ರಶಸ್ತಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂಪಡೆಯುತ್ತದೆ ಮತ್ತು ರದ್ದುಗೊಳಿಸುತ್ತದೆ ಎಂದು ತಿಳಿಸಿದೆ.

ನೇತಾಜಿ ಯುದ್ಧ ಅಪರಾಧಿ ಎಂದು ಹೇಳಿಕೆ

ಇತ್ತೀಚಿಗೆ ಬಿಜೆಪಿ ಸಂಸದ ನಾಗೇಂದ್ರ ರೇ ಅವರು, ನೇತಾಜಿಯನ್ನು "ಯುದ್ಧ ಅಪರಾಧಿ" ಎಂದು ಬಣ್ಣಿಸಿ, ಅವರ ನಾಯಕತ್ವ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆಜಾದ್ ಹಿಂದ್ ಫೌಜ್‌ನ ಪಾತ್ರವನ್ನು ಪ್ರಶ್ನಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಆಡಳಿತರೂಢ ಬಿಜೆಪಿ ಮತ್ತು ವಿಪಕ್ಷ ಟಿಎಂಸಿ ನಡುವಿನ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿತ್ತು. 

ಯಾರು ಈ ನಾಗೇಂದ್ರ ರೇ? 

ಬಿಜೆಪಿ ಸಂಸದರಾಗಿರುವ ನಾಗೇಂದ್ರ ರೇ ಅವರು, ಪಶ್ಚಿಮ ಬಂಗಾಳದ ಉತ್ತರ ಭಾಗದ ಕೂಚ್ ಬೆಹಾರ್‌ನವರಾಗಿದ್ದು, ರಾಜ್‌ಬನ್ಶಿ ಸಮುದಾಯದ ನಾಯಕರಾಗಿದ್ದಾರೆ. ಫೆಬ್ರವರಿಯಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಅಧಿಕಾರದಲ್ಲಿದ್ದಾಗ ಅವರಿಗೆ ಬಂಗಾ ಬಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net