ಮಾಲಿನ್ಯ ಸಮಸ್ಯೆ 15 ದಿನಗಳ ಗದ್ದಲ ಎನ್ನುತ್ತಿದ್ದರಂತೆ ಕೇಜ್ರಿವಾಲ್​...ಆಪ್​ ಸರ್ಕಾರದ ಗುಟ್ಟುಗಳನ್ನು ರಟ್ಟು ಮಾಡಿದ ಲೆಫ್ಟಿನೆಂಟ್ ಗವರ್ನರ್ | Delhi LG Saxena

Delhi LG Saxena
Delhi LG Saxena
Published on
ದೆಹಲಿ: ಒಂದು ದಶಕಕ್ಕೂ ಹೆಚ್ಚು ಕಾಲ ದೆಹಲಿಯಲ್ಲಿ ಆಡಳಿತ ನಡೆಸಿ, ಇಲ್ಲಿನ ಜನರ ಅಭಿವೃದ್ದಿಗೆ ಏನು ಕೊಡುಗೆ ನೀಡದೆ, ಈಗ ಕೇವಲ 10 ತಿಂಗಳ ಸರ್ಕಾರದ ಪ್ರಯತ್ನಗಳನ್ನು ಗೇಲಿ ಮಾಡುತ್ತಿದ್ದೀರಿ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅರವಿಂದ್ ಕೇಜ್ರಿವಾಲ್​​ಗೆ ಪತ್ರ ಬರೆದಿದ್ದಾರೆ.
ಸ್ವತಃ ನೀವೇ ಹೋಗಿ ಪಂಜಾಬ್‌ನಲ್ಲಿ ನೆಲೆಸಿದ್ದೀರಿ, ಇತ್ತೀಚಿನ ದಿನಗಳಲ್ಲಿ ಯಾವುದಕ್ಕೂ ಮುಂದೆ ಬರದೆ, ಪಕ್ಷದ ನಾಯಕರಿಗೆ ಆ ಜವಾಬ್ದಾರಿ ನೀಡಿದ್ದೀರಿ ಎಂದು ಆರೋಪಿಸಿದ್ದಾರೆ.

ದೆಹಲಿ ಮಾಲಿನ್ಯಕ್ಕೆ ಕೇಜ್ರಿವಾಲ್ ಕಾರಣ: ಸಕ್ಸೇನಾ

ದೆಹಲಿಯ ಮಾಲಿನ್ಯಕ್ಕೆ ಕೇಜ್ರಿವಾಲ್ ಅವರೇ ಕಾರಣ ಎಂದು ನೇರವಾಗಿಯೇ ಟೀಕಿಸಿರುವ ಸಕ್ಸೇನಾ, ಕಳೆದ 11 ವರ್ಷಗಳಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಏನಾದರೂ ಮಾಡಿದ್ದರೆ ಪರಿಸ್ಥಿತಿ ಇಷ್ಟೊಂದು ಹದಗೆಡುತ್ತಿರಲಿಲ್ಲ, ನೀವು ಮುಖ್ಯಮಂತ್ರಿಯಾಗಿದ್ದಾಗ ನಾನು ನಿಮ್ಮೊಂದಿಗೆ ಮಾಲಿನ್ಯದ ಬಗ್ಗೆ ಮಾತನಾಡಿದರೆ, ಇದು 15-20 ದಿನಗಳ ಗದ್ದಲ, ಅದರ ಬಳಿಕ ಮಾಧ್ಯಮಗಳಾಗಲಿ, ಎನ್‌ಜಿಒಗಳಾಗಿ ಇದನ್ನು ಮರೆತುಬಿಡುತ್ತವೆ ಎಂದು ಹೇಳುತ್ತಿದ್ದಿರಿ ಎಂದು ಉಲ್ಲೇಸಿದ್ದಾರೆ.
ನೀವು ಕೇವಲ ದೊಡ್ಡ ಘೋಷಣೆಗಳನ್ನು ಮಾತ್ರ ಮಾಡುತ್ತೀರಿ, ಯಾವುದೇ ಕೆಲಸ ಮಾಡಲಿಲ್ಲ. ಎಲ್ಲರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದು ಸಕ್ಸೇನಾ ತಿಳಿಸಿದ್ದಾರೆ.

ಸಕ್ಸೇನಾ ನಂಬರ್​ ಬ್ಲಾಕ್​ ಮಾಡಿದ್ದಾರಂತೆ ಕೇಜ್ರಿವಾಲ್​..

ಚುನಾವಣೆಯಲ್ಲಿ ಸೋತ ಬಳಿಕ ಅರವಿಂದ್ ಕೇಜ್ರಿವಾಲ್ ತಮ್ಮ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಾರೆ ಎಂದು ಆರೋಪಿಸಿರುವ ಸಕ್ಸೇನಾ, ದೀಪಾವಳಿಗೆ ಶುಭ ಹಾರೈಸಲು ಕರೆ ಮಾಡಿದರೆ ನನ್ನ ನಂಬರ್​ ಬ್ಲಾಕ್ ಮಾಡಿರುವುದು ಗೊತ್ತಾಯಿತು ಎಂದರು.

ಫಲಿತಾಂಶಗಳಿಂದ ಪಾಠ ಕಲಿಯದ ಕೇಜ್ರಿವಾಲ್: ಸಕ್ಸೇನಾ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕವೂ ಕೇಜ್ರಿವಾಲ್ ಪಾಠ ಕಲಿಯಲಿಲ್ಲ, ದೆಹಲಿಯ ಜನರಿಗೆ ಸಂಬಂಧಿಸಿದ ನಿರ್ಣಾಯಕ ವಿಷಯಗಳನ್ನು ಪಕ್ಕಕ್ಕಿಟ್ಟಿರುವ ಆಪ್,​ ಕ್ಷುಲ್ಲಕ ರಾಜಕೀಯದಲ್ಲಿ ತೊಡಗಿದೆ, ಸುಳ್ಳುಗಳನ್ನೇ ಸತ್ಯ ಎಂದು ಬಿಂಬಿಸಿರುವುದಾಗಿ ಆರೋಪಿಸಿದರು.
ಕಳೆದ 11 ವರ್ಷಗಳಲ್ಲಿನ ಆಪ್​ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ರಾಷ್ಟ್ರ ರಾಜಧಾನಿಯ ಜನ ವಾಯು ಮಾಲಿನ್ಯದ ಸಮಸ್ಯೆಗೆ ಸಿಲುಕಿದ್ದಾರೆ. ಈ ಮಾಲಿನ್ಯ ಸಮಸ್ಯೆಯನ್ನು ಬಗೆಹರಿಸಬೇಕಾಗಿದ್ದ ಸರ್ಕಾರ, ಅಂದಿನ ಕಾಂಗ್ರೆಸ್​ ಪಂಜಾಬ್ ಕಾಂಗ್ರೆಸ್​ ಮತ್ತು ಕೇಂದ್ರದಲ್ಲಿದ್ದ ಎನ್​ಡಿಎ ಸರ್ಕಾರವನ್ನು ದೂಷಿಸುವುದರಲ್ಲೇ ಕಾಲಹರಣ ಮಾಡಿತು, ನಗರದ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವ ಧೂಳಿನ ಸಮಸ್ಯೆಯನ್ನು ತಡೆಯಲು ಅದು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಬರೆದಿದ್ದಾರೆ.
ಎಎಪಿ ಸರ್ಕಾರವು ವಾರಕ್ಕೊಮ್ಮೆ ಕ್ಯಾಬಿನೆಟ್ ಸಭೆಗಳನ್ನು ನಡೆಸುವ ಅಭ್ಯಾಸವನ್ನು ನಿಲ್ಲಿಸಿತ್ತು ಎಂದಿರುವ ಸಕ್ಸೇನಾ, ಪ್ರಮುಖ ನೀತಿ ಮತ್ತು ಆಡಳಿತಾತ್ಮಕ ನಿರ್ಧಾರಗಳನ್ನು ಚಲಾವಣೆಯ ಮೂಲಕ ತೆಗೆದುಕೊಳ್ಳಲಾಗುತ್ತಿತ್ತು, ಯಾವುದೇ ಚರ್ಚೆಗೆ ಅವಕಾಶ ನೀಡಲಿಲ್ಲ, ಇದು ದೆಹಲಿಯ ಜನರ ಬಗ್ಗೆ ಸರ್ಕಾರದ ಬೇಜವಾಬ್ದಾರಿತನವನ್ನು ಪ್ರತಿಬಿಂಬಿಸುತ್ತದೆ ಎಂದು ಟೀಕಿಸಿದರು(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net