ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡ್ಬೇಕಾ? ದೆಹಲಿ ಹೈಕೋರ್ಟ್ ಹೇಳಿದ್ದೇನು ಗೊತ್ತಾ? | Social media ban for children?

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆ ನಿರ್ಬಂಧ ವಿಚಾರ
  • ಸೋಷಿಯಲ್ ಮೀಡಿಯಾ ನಿರ್ಬಂಧಿಸುವುದು ಕೇಂದ್ರದ ನಿರ್ಧಾರ
  • ಕೇಂದ್ರ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿ ಎಂದ ಹೈಕೋರ್ಟ್
Social Media Ban: ಮಕ್ಕಳ ಸೋಷಿಯಲ್ ಮೀಡಿಯಾ ಬಳಕೆಗೆ ನಿರ್ಬಂಧ ಹೇರಬೇಕೇ? ಅಥವಾ ಬ್ಯಾನ್ ಮಾಡಬೇಕೇ? ಎಂಬ ವಿಚಾರ ಇದೀಗ ಕೇಂದ್ರ ಸರ್ಕಾರದ ಅಂಗಳಕ್ಕೆ ತಲುಪಿದೆ. ಮಕ್ಕಳ ಸೋಷಿಯಲ್ ಮೀಡಿಯಾ ಬಳಕೆಯನ್ನು ನಿಯಂತ್ರಿಸುವುದು ಸರ್ಕಾರದ ನೀತಿ ನಿರ್ಧಾರ ಎಂದು ದೆಹಲಿ ಹೈಕೋರ್ಟ್ ಗುರುವಾರ ಹೇಳಿದೆ.
ಮಕ್ಕಳ ಸೋಷಿಯಲ್ ಮೀಡಿಯಾ ಬಳಕೆಗೆ ನಿರ್ಬಂಧ ಹೇರಬೇಕು ಎಂಬ ಒತ್ತಾಯ ಹೆಚ್ಚುತ್ತಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ.

ಕೋರ್ಟ್‌ ಹೇಳಿದ್ದೇನು?

ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಬೇಕು ಅಂತ ಸರ್ಕಾರಕ್ಕೆ ನೇರವಾಗಿ ಆದೇಶ ನೀಡುವುದು ಸರಿಯಲ್ಲ. ಈ ವಿಚಾರದಲ್ಲಿ ಸೋಷಿಯಲ್ ಮೀಡಿಯಾ ಕಂಪನಿಗಳು ಸೇರಿದಂತೆ ಸಂಬಂಧಪಟ್ಟ ಎಲ್ಲರ ಜೊತೆ ಸರ್ಕಾರ ಚರ್ಚಿಸಬೇಕು ಎಂದು ಕೋರ್ಟ್​ ಸ್ಪಷ್ಟಪಡಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಯಾವಾಗ ಕ್ರಮ ಕೈಗೊಳ್ಳಬೇಕು ಎಂಬುದಕ್ಕೂ ನ್ಯಾಯಾಲಯ ಯಾವುದೇ ಗಡುವು ನೀಡಿಲ್ಲ.

ಮಕ್ಕಳ ಸುರಕ್ಷತೆ ಬಗ್ಗೆ ಆತಂಕ

ಮೂರು ವರ್ಷದ ಮಗುವಿನ ತಾಯಿ ಕೀರ್ತಿ ದುವಾ ಹಾಗೂ ಮಕ್ಕಳ ತಜ್ಞ ಡಾ.ಶರದ್ ಗುಪ್ತಾ ಅರ್ಜಿ ಸಲ್ಲಿಸಿದ್ದರು. ಮಕ್ಕಳು ಸೂಕ್ತವಲ್ಲದ ಆನ್‌ಲೈನ್ ಕಂಟೆಂಟ್‌ ನೋಡುವುದರಿಂದ ಶೋಷಣೆಗೆ ಒಳಗಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಯುವಕರಲ್ಲಿ ಹೆಚ್ಚುತ್ತಿರುವ ಸೋಷಿಯಲ್ ಮೀಡಿಯಾ ವ್ಯಸನ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ಅರ್ಜಿ ಮೂಲಕ ಗಮನ ಸೆಳೆಯಲಾಗಿತ್ತು.

CSAM ತಡೆಯಲು Meta ಕ್ರಮ?

ಮೆಟಾ ಪರ ವಕೀಲ ಅರವಿಂದ್ ದಾತಾರ್, ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಂಟೆಂಟ್ ಪತ್ತೆಹಚ್ಚಿ ತೆಗೆದುಹಾಕಲು ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್​ನಲ್ಲಿ ಹಲವು ಕ್ರಮಗಳಿವೆ ಎಂದು ಕೋರ್ಟ್‌ಗೆ ತಿಳಿಸಿದರು. ಇನ್ನೊಂದೆಡೆ, ಫೇಸ್‌ಬುಕ್​ನಲ್ಲಿ ಇಂತಹ ಕಂಟೆಂಟ್ ಪತ್ತೆಹಚ್ಚುವ ಪ್ರಮಾಣ ಶೇ.99.5ರಷ್ಟು, ಇನ್ಸ್ಟಾಗ್ರಾಮ್​ನಲ್ಲಿ ಶೇ.95.2ರಷ್ಟು ಇದೆ. ಮೆಟಾ ಇನ್ನಷ್ಟು ಬಲವಾದ ತಂತ್ರಜ್ಞಾನ ಮತ್ತು ಆಡಿಟ್ ವ್ಯವಸ್ಥೆ ಜಾರಿಗೆ ತರಲಿ ಎಂದು ಅರ್ಜಿದಾರರು ಕೋರಿದ್ದರು. ಈ ಬಗ್ಗೆ ಕೇಂದ್ರ ಸರ್ಕಾರವೇ ಸಂಬಂಧಪಟ್ಟವರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಹೇಳಿದೆ,(ಏಜೇನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net