ಮಾರ್ಚ್ 9ಕ್ಕೆ ಸಂಸತ್ತಿನಲ್ಲಿ ಬಿಗ್ ಫೈಟ್ ನಿರೀಕ್ಷೆ!...ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯದ ಬಗ್ಗೆ ಶಾಕಿಂಗ್​ ಸ್ಟೇಟಮೆಂಟ್​​ ನೀಡಿದ ಸಚಿವ ರಿಜಿಜು | Om Birla No Confidence Motion

Om Birla No Confidence Motion | ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯದ ಬಗ್ಗೆ ಶಾಕಿಂಗ್​ ಸ್ಟೇಟಮೆಂಟ್​​ ನೀಡಿದ ಸಚಿವ ರಿಜಿಜು
Om Birla No Confidence Motion | ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯದ ಬಗ್ಗೆ ಶಾಕಿಂಗ್​ ಸ್ಟೇಟಮೆಂಟ್​​ ನೀಡಿದ ಸಚಿವ ರಿಜಿಜು
Published on
ದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ (Om Birla No Confidence Motion) ಮೇಲಿನ ಚರ್ಚೆ ಮತ್ತು ಮತದಾನವನ್ನು ಮಾರ್ಚ್ 9 ರಂದು ನಡೆಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾನುವಾರ (ಫೆ.15) ತಿಳಿಸಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಚಿವ ರಿಜಿಜು, ಮಾರ್ಚ್ 9 ರಿಂದ ಏಪ್ರಿಲ್ 2 ರವರೆಗೆ ನಡೆಯಲಿರುವ ಬಜೆಟ್ ಅಧಿವೇಶನದ ಎರಡನೇ ಹಂತವು ಆಸಕ್ತಿದಾಯಕವಾಗಿರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಹಲವಾರು ಪ್ರಮುಖ ಶಾಸನಗಳು ಮತ್ತು ಒಂದು ನಿರ್ಣಾಯಕ ಮಸೂದೆಯು ಲೋಕಸಭೆಯಲ್ಲಿ ಚರ್ಚೆ ಮತ್ತು ಅಂಗೀಕಾರಕ್ಕಾಗಿ ಕಾಯುತ್ತಿದ್ದು, ಅಧಿವೇಶನದ ಮೊದಲ ಭಾಗದಲ್ಲಿ ಮಾಡಿದಂತೆ ಈಗಲೂ ವಿರೋಧ ಪಕ್ಷಗಳು ತಮ್ಮ ಪ್ರತಿಭಟನೆಗಳನ್ನು ಮುಂದುವರಿಸಿದರೆ, ಅಂತಿಮವಾಗಿ ಅದರಿಂದ ಹಾನಿಯಾಗುವುದು ಅವರಿಗೆ ಎಂದು ಎಚ್ಚರಿಕೆ ನೀಡಿದರು.

ಓಂ ಬಿರ್ಲಾ ಪದಚ್ಯುತಿ ಚರ್ಚೆ ಮತ್ತು ಮತ ಚಲಾವಣೆ

ಮಾರ್ಚ್ 9 ರಂದು ಲೋಕಸಭೆಯಲ್ಲಿ ಸ್ಪೀಕರ್ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯದ ಕುರಿತು ಚರ್ಚೆ ನಡೆಯಲಿದ್ದು, ಮೊದಲ ದಿನವೇ ಅದನ್ನು ಕೈಗೆತ್ತಿಕೊಳ್ಳುವುದು ನಿಯಮವಾಗಿರುವುದರಿಂದ ಚರ್ಚೆಯ ಬಳಿಕ ಮತದಾನ ನಡೆಯಲಿದೆ ಎಂದರು.
ರಾಷ್ಟ್ರಪತಿಗಳ ಭಾಷಣದೊಂದಿಗೆ ಜನವರಿ 28 ರಂದು ಬಜೆಟ್ ಜಂಟಿ ಅಧಿವೇಶನ ಪ್ರಾರಂಭವಾಗಿದ್ದು, ಫೆಬ್ರವರಿ 12 ರಂದು ಮುಕ್ತಾಯಗೊಂಡಿತು. ಎರಡನೇ ಹಂತದ ಅಧಿವೇಶನವು ಮಾರ್ಚ್ 9 ಕ್ಕೆ ಪುನರಾರಂಭಗೊಂಡು ಏಪ್ರಿಲ್ 2 ರಂದು ಕೊನೆಗೊಳ್ಳುತ್ತದೆ.

ಚರ್ಚೆಗೆ ಐದು ಸಚಿವಾಲಯಗಳ ಆಯ್ಕೆ

ಲೋಕಸಭೆಯಲ್ಲಿ, ನಾವು ಐದು ಸಚಿವಾಲಯಗಳಲ್ಲಿನ ಅನುದಾನದ ಬೇಡಿಕೆಗಳನ್ನು ಚರ್ಚಿಸುತ್ತೇವೆ ಮತ್ತು ರಾಜ್ಯಸಭೆಯಲ್ಲಿ ನಾವು ಇತರ ಐದು ಸಚಿವಾಲಯಗಳ ಕೆಲಸದ ಬಗ್ಗೆ ಚರ್ಚಿಸುತ್ತೇವೆ. ರಾಜ್ಯಸಭೆಯಲ್ಲಿ, ಇದು ಅನುದಾನದ ಬೇಡಿಕೆಗಳ ಮೇಲೆ ಅಲ್ಲ, ಬದಲಾಗಿ ಸಚಿವಾಲಯಗಳ ಮೇಲಿನ ಚರ್ಚೆಗಳಾಗಿರುತ್ತದೆ ಎಂದು ಸಚಿವ ರಿಜಿಜು ಹೇಳಿದರು.
ಸರ್ಕಾರವು ಮೊದಲು ರಾಜ್ಯಸಭೆಯಲ್ಲಿ ಚರ್ಚೆಗೆ ಐದು ಸಚಿವಾಲಯಗಳನ್ನು ಆಯ್ಕೆ ಮಾಡುತ್ತದೆ, ನಂತರ ಲೋಕಸಭೆಯಲ್ಲಿ ಐದು ಸಚಿವಾಲಯಗಳ ಕುರಿತು ಚರ್ಚೆ ನಡೆಸುತ್ತದೆ. ಪ್ರತಿಪಕ್ಷಗಳು ಸದನವನ್ನು ಸರಿಯಾದ ರೀತಿಯಲ್ಲಿ ನಡೆಯಲು ಅವಕಾಶ ನೀಡದಿದ್ದರೆ, ನಾವು ಗಿಲ್ಲೊಟಿನ್ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ, ಇದರಿಂದ ವಿಪಕ್ಷಗಳಿಗೆ ನಷ್ಟವಾಗುತ್ತದೆ ಎಂದು ಹೇಳಿದರು.
ನಾವು ಕೆಲವು ಪ್ರಮುಖ ಮಸೂದೆಗಳನ್ನು ತರುತ್ತೇವೆ. ಮಸೂದೆ ಏನೆಂದು ನಾವು ಈಗ ಬಹಿರಂಗಪಡಿಸುವುದಿಲ್ಲ, ಆದರೆ ಎರಡನೇ ಭಾಗದಲ್ಲಿ ಒಂದು ಪ್ರಮುಖ ವ್ಯವಹಾರವನ್ನು ತರುತ್ತೇವೆ. ಈ ಎಲ್ಲಾ ಮಸೂದೆಗಳನ್ನು ನಾವು ಅಂಗೀಕರಿಸುತ್ತೇವೆ ಎಂದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net