ಇದು ಸರ್ವಾಧಿಕಾರ; ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ: ತಡರಾತ್ರಿ ಚು. ಆಯೋಗದ ಮುಂದೆ ಕಾಂಗ್ರೆಸ್ ಪ್ರತಿಭಟನೆ | Congress protests

ಕಾಂಗ್ರೆಸ್ ಪ್ರತಿಭಟನೆ
ಕಾಂಗ್ರೆಸ್ ಪ್ರತಿಭಟನೆ
Published on
ನವದೆಹಲಿ: ಮಧ್ಯಪ್ರದೇಶದ ಏಕೈಕ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸಿದ ಚುನಾವಣೆ ಆಯೋಗದ ಕ್ರಮದ ವಿರುದ್ಧ ದೆಹಲಿ ಮತ್ತು ಭೋಫಾಲ್​ನಲ್ಲಿ ತಡರಾತ್ರಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಕಾಂಗ್ರೆಸ್(Congress protests) ಭಾರತೀಯ ಚುನಾವಣೆ ಆಯೋಗದ ಕಚೇರಿ ಮುಂದೆ ಭಾರಿ ಪ್ರತಿಭಟನೆ ನಡೆಸಿದೆ.
ದೆಹಲಿಯಲ್ಲಿ ಕೆ.ಸಿ.ವೇಣುಗೋಪಾಲ್, ಜೈರಾಮ್ ರಮೇಶ್ ಸೇರಿ ಅನೇಕ ಕಾಂಗ್ರೆಸ್ ನಾಯಕರು ಆಯೋಗದ ಕಚೇರಿ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ರೆ, ಅತ್ತ ಭೋಪಾಲ್​ನಲ್ಲಿ ಪಕ್ಷದ ಅಧ್ಯಕ್ಷ ಜಿತು ಪಟ್ವಾರಿ ನೇತೃತ್ವದಲ್ಲಿ ರಾಜ್ಯ ಚುನಾವಣೆ ಆಯೋಗದ ಮುಂದೆ ಅಹೋರಾತ್ರಿ ಧರಣಿ ನಡೆಸಿದ್ದಾರೆ.

ನಾಮಪತ್ರ ತಿರಸ್ಕೃತ

ಮಧ್ಯಪ್ರದೇಶದ ಮೂರು ರಾಜ್ಯಸಭಾ ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ಹಿನ್ನಲೆ ಅಫಿಡವಿಟ್‌ನಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಬಿಜೆಪಿ ದೂರು ನೀಡಿದ ಬಳಿಕ, ಚುನಾವಣಾಧಿಕಾರಿ ಮಂಗಳವಾರ ರಾತ್ರಿ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸಿದ್ದಾರೆ.
ಮೂರನೇ ರಾಜ್ಯಸಭಾ ಸ್ಥಾನದಲ್ಲಿ ನಟರಾಜನ್ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಮಹೇಶ್ ಕೆವಾತ್ ಅವರು ದೂರು ಸಲ್ಲಿಸಿದ್ದರು. ತೆಲಂಗಾಣದಲ್ಲಿ ನಟರಾಜನ್ ವಿರುದ್ಧ ದಾಖಲಾಗಿರುವ ಪ್ರಕರಣದ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ ಎಂದು ಆರೋಪಿಸಿದ್ದರು.
ಬಳಿಕ ನಟರಾಜನ್ ಅವರ ನಾಮಪತ್ರವನ್ನು ಪರಿಶೀಲಿಸಿದ್ದ RO ಮತ್ತು ಪ್ರಧಾನ ಕಾರ್ಯದರ್ಶಿ (ವಿಧಾನಸಭೆ) ಅರವಿಂದ್ ಶರ್ಮಾ ಅವರು, ಹೈದರಾಬಾದ್ ನ್ಯಾಯಾಲಯದಲ್ಲಿ ಅವರ ವಿರುದ್ಧ ದಾಖಲಾಗಿರುವ ದೂರಿನ ಬಗ್ಗೆ ಅವರಿಗೆ ಸಂಪೂರ್ಣ ತಿಳಿದಿದೆ ಆದರೆ ಅಫಿಡವಿಟ್‌ನಲ್ಲಿ ಅದನ್ನು ಉಲ್ಲೇಖಿಸಲು ವಿಫಲರಾಗಿದ್ದಾರೆ ಎಂದು ನಾಮಪತ್ರವನ್ನು ತಿರಸ್ಕಾರ ಮಾಡಿದ್ದಾರೆ.

ಸರ್ವಾಧಿಕಾರಿ ಧೋರಣೆ

ಆಡಳಿತ ಪಕ್ಷ ಬಿಜೆಪಿಗೆ ಅಗತ್ಯವಿರುವ ಸಂಖ್ಯಾ ಬಲದ ಕೊರತೆಯಿದ್ದರೂ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗ ಇದೆಲ್ಲವೂ ಪ್ರಾರಂಭವಾಯಿತು. ಅವರು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ತುಳಿಯಲು ಕುತಂತ್ರ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಯಿತು.
ಹಾಗಾಗಿ ಕಾನೂನು ನೋಟಿಸ್ ನೆಪದಲ್ಲಿ ಅವರು ನನ್ನ ನಾಮಪತ್ರವನ್ನು ಪ್ರಶ್ನಿಸಿದ್ದಾರೆ. ನಮ್ಮ ಕಾನೂನು ತಂಡವು ಈ ವಿಷಯದಲ್ಲಿ ತಮ್ಮ ವಾದಗಳನ್ನು ಬಲವಾಗಿ ಮಂಡಿಸಿದರೂ, ಆರ್‌ಒ ನಮ್ಮ ವಾದಗಳನ್ನು ಗಮನಕ್ಕೆ ತೆಗೆದುಕೊಳ್ಳದೇ ನಾಮಪತ್ರ ತಿರಸ್ಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದು ರಾಜ್ಯಸಭಾ ಸ್ಥಾನ ಅಥವಾ ನನ್ನ ನಾಮಪತ್ರ ತಿರಸ್ಕೃತವಾಗುವ ಪ್ರಶ್ನೆಯಲ್ಲ, ಇದು ಏಕಪಕ್ಷೀಯ ವ್ಯವಸ್ಥೆ ಮತ್ತು ಸರ್ವಾಧಿಕಾರವನ್ನು ದೇಶದ ಮೇಲೆ ಹೇರಲಾಗುತ್ತಿದೆ. ಮತ್ತು ಫೆಡರಲ್ ರಚನೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ, ಕಾಂಗ್ರೆಸ್ ನಿಯೋಗವು ಚುನಾವಣೆ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದು, ಇಂದು ಮಧ್ಯಾಹ್ನದೊಳಗೆ ಭೇಟಿ ನೀಡುವ ಸಾಧ್ಯತೆ ಇದೆ. ನಾಮಪತ್ರ ತಿರಸ್ಕೃತವಾದದ್ದರ ಬಗ್ಗೆ ಚುನಾವಣಾ ಅಧಿಕಾರಿಯಿಂದ ವರದಿಯನ್ನು ಕೋರಲಿದೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net