ಗ್ರಾಹಕರ ಸೋಗಿನಲ್ಲಿ ಬಂದ ಬುರ್ಖಾಧಾರಿ ಗ್ಯಾಂಗ್​: ಎರಡು ಕೋಟಿ ಮೌಲ್ಯದ 1.5 ಕೆ.ಜಿ ಚಿನ್ನ ದೋಚಿ ಪರಾರಿ; ವಿಡಿಯೋ ವೈರಲ್​! Burqa Gang Gold Heist

ಜುವೆಲ್ಲರಿ ಶಾಪ್‌ಗೆ ನುಗ್ಗಿ 2 ಕೋಟಿ ರೂ. ಮೌಲ್ಯದ 1.5 ಕೆ.ಜಿ ಚಿನ್ನ ದೋಚಿ ಪರಾರಿ
ಜುವೆಲ್ಲರಿ ಶಾಪ್‌ಗೆ ನುಗ್ಗಿ 2 ಕೋಟಿ ರೂ. ಮೌಲ್ಯದ 1.5 ಕೆ.ಜಿ ಚಿನ್ನ ದೋಚಿ ಪರಾರಿ
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಹಕರ ಸೋಗಿನಲ್ಲಿ ಬಂದ ಬುರ್ಖಾಧಾರಿ ಗ್ಯಾಂಗ್
  • ಜುವೆಲ್ಲರಿ ಶಾಪ್‌ಗೆ ನುಗ್ಗಿ 2 ಕೋಟಿ ರೂ. ಮೌಲ್ಯದ 1.5 ಕೆ.ಜಿ ಚಿನ್ನ ದೋಚಿ ಪರಾರಿ
  • ಸಿಸಿಟಿವಿಯಲ್ಲಿ ದೃಶ್ಯ ಸೆರೆ; ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​​
ಸಂಭಾಜಿನಗರ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದ ಬೆಚ್ಚಿಬೀಳಿಸುವ ಕಳ್ಳತನದ ಪ್ರಕರಣವೊಂದು ಈಗ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇಲ್ಲಿನ ಪ್ರತಿಷ್ಠಿತ ಆಭರಣ ಅಂಗಡಿಯೊಂದಕ್ಕೆ ಗ್ರಾಹಕರ ವೇಷದಲ್ಲಿ ನುಗ್ಗಿದ ಬುರ್ಖಾ ಧರಿಸಿದ (Burqa Gang Gold Heist) ಮಹಿಳೆಯರ ಗ್ಯಾಂಗ್, ಕೆಲವೇ ನಿಮಿಷಗಳಲ್ಲಿ ಬರೋಬ್ಬರಿ 2 ಕೋಟಿ ರೂಪಾಯಿ ಮೌಲ್ಯದ 1.5 ಕೆಜಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದೆ.
ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಕಳ್ಳತನದ ಕೃತ್ಯ ಸೆರೆಯಾಗಿದ್ದು, ಈ ದೃಶ್ಯಗಳು ಈಗ ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್​ ಆಗುತ್ತಿದೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ!

ಮಾಹಿತಿ ಪ್ರಕಾರ, ಛತ್ರಪತಿ ಸಂಭಾಜಿನಗರದ ಶಹಗಂಜ್ ಪ್ರದೇಶದಲ್ಲಿರುವ ವಿಶ್ವಾಸ್ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ಈ ಕೃತ್ಯ ನಡೆದಿದೆ. ಈ ಕಳ್ಳರ ತಂಡದಲ್ಲಿ ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರ ಒಟ್ಟು ಆರು ಮಂದಿ ಇರುವುದಾಗಿ ತಿಳಿದು ಬಂದಿದೆ.

ಯಾರೂ ಗುರುತಿಸಬಾರದೆಂದು ಬುರ್ಖಾ ಧರಿಸಿದ್ದ ಈ ಗ್ಯಾಂಗ್‌ನ ಸದಸ್ಯರು, ಮೊದಲು ಅಂಗಡಿಯ ಒಳಗೆ ಬಂದು ಏನೂ ಅರಿಯದ ಗ್ರಾಹಕರಂತೆ ವರ್ತಿಸಿದ್ದಾರೆ. ಗ್ಯಾಂಗ್‌ನ ಕೆಲವರು ಅಂಗಡಿಯ ಮಾರಾಟಗಾರರ ಮತ್ತು ಸಿಬ್ಬಂದಿಯ ಗಮನವನ್ನು ಬೇರೆಡೆಗೆ ಸೆಳೆಯಲು ಸುಮ್ಮನೆ ಮಾತನಾಡಲು ಶುರುವಿಟ್ಟಿದ್ದಾರೆ.


ಅದೇ ಸಮಯದಲ್ಲಿ, ಮತ್ತೊಬ್ಬ ಕಳ್ಳ ಕೌಂಟರ್‌ನ ಕೆಳಗಿನಿಂದ ಕೈ ಚಾಚಿ, ದುಬಾರಿ ಆಭರಣಗಳಿದ್ದ ಪೆಟ್ಟಿಗೆಯನ್ನು ನಿಧಾನವಾಗಿ ಎಳೆದುಕೊಂಡು ಪರಾರಿಯಾಗಿದ್ದಾನೆ. ಆರಂಭದಲ್ಲಿ ಕಳ್ಳತನ ನಡೆದಿರುವುದು ಅಂಗಡಿಯವರಿಗೆ ಗೊತ್ತಾಗಿಲ್ಲವಾದರೂ, ನಂತರ ಅನುಮಾನಗೊಂಡು ಸಿಸಿಟಿವಿ ಪರಿಶೀಲಿಸಿದಾಗ ಅಸಲಿ ಕಹಾನಿ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಉಪ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

ದೇಶದಲ್ಲಿ ಸಕ್ರಿಯವಾಗಿರುವ ಬುರ್ಖಾ ಗ್ಯಾಂಗ್!

ಕೇವಲ ಮಹಾರಾಷ್ಟ್ರವಷ್ಟೇ ಅಲ್ಲದೆ, ಕಳೆದ ಕೆಲವು ವಾರಗಳಿಂದ ದೇಶದ ವಿವಿಧೆಡೆ ಇದೇ ರೀತಿಯ ಹಲವು ಕಳ್ಳತನ ಪ್ರಕರಣಗಳು ವರದಿಯಾಗಿವೆ. ಎಲ್ಲೆಡೆ ಬುರ್ಖಾ ಧರಿಸಿದ ಮಹಿಳೆಯರೇ ಗ್ರಾಹಕರಂತೆ ನಟಿಸಿ ಕೈಚಳಕ ತೋರಿರುವುದು ವಿಶೇಷವಾಗಿದೆ.

ಆಗಸ್ಟ್ 16 ರಂದು ಜಹೀರಾಬಾದ್‌ನ ಜೈ ಭವಾನಿ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿದ ಬುರ್ಖಾಧಾರಿ ಮಹಿಳೆಯರ ಗುಂಪು, ಸಿಬ್ಬಂದಿಗೆ ಮೂಗಿನ ಪಿನ್ ತೋರಿಸಲು ಹೇಳಿ ದಿಢೀರ್ ಎಂದು 70 ಗ್ರಾಂ ಚಿನ್ನದ ಸರವನ್ನು ಕದ್ದುಕೊಂಡು ಪರಾರಿಯಾಗಿತ್ತು.

ಆಗಸ್ಟ್ 6 ರಂದು ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ತಂದೂರ್‌ನಲ್ಲಿ ಇದೇ ರೀತಿಯ ತಂಡವೊಂದು 10 ಗ್ರಾಂ ಚಿನ್ನದ ಸರವನ್ನು ದೋಚಿದ್ದ ಸಿಸಿಟಿವಿ ದೃಶ್ಯಗಳು ವೈರಲ್ ಆಗಿದ್ದವು.


ಏಪ್ರಿಲ್‌ನಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬಳು ಚಿನ್ನದ ಅಂಗಡಿಗೆ ಬಂದು, ಕೊನೆಗೆ ಬಂದೂಕು ತೋರಿಸಿ ಸಿಬ್ಬಂದಿಗೆ ಬೆದರಿಸಿ ಚಿನ್ನದ ಹಾರವನ್ನು ದೋಚಿ ಪರಾರಿಯಾಗಿದ್ದ ಭೀಕರ ಘಟನೆಯೂ ನಡೆದಿತ್ತು.
ಹೀಗೆ ದೇಶದ ನಾನಾ ಭಾಗಗಳಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ದೋಚುತ್ತಿರುವ ಈ ಸರಣಿ ಕಳ್ಳರ ತಂಡದ ಹಿಂದೆ ದೊಡ್ಡ ಗ್ಯಾಂಗ್ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾಗಿ ತಿಳಿದು ಬಂದಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net