ಬಂಚ್ ಆಫ್ ಜೋಕರ್ಸ್ ಹೇಳಿಕೆ; ನೀವು ಯಾವಾಗ ಪ್ರಬುದ್ಧರಾಗುತ್ತೀರಿ?: ರಾಹುಲ್ ಗಾಂಧಿ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ | Pralhad Joshi

ರಾಹುಲ್ ಗಾಂಧಿ ಮತ್ತು ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿ ಮತ್ತು ಪ್ರಲ್ಹಾದ್ ಜೋಶಿ
Published on
ನವದೆಹಲಿ: ಬಿಜೆಪಿ ಮತ್ತು ಆರ್​ಎಸ್ಎಸ್ ನಾಯಕರನ್ನು ಭಾರತದ ಬಗ್ಗೆ ಅಲ್ಪ ತಿಳುವಳಿಕೆ ಹೊಂದಿರುವ ಬಂಚ್ ಆಫ್ ಜೋಕರ್ಸ್ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ(Pralhad Joshi), ನೀವು ಯಾವಾಗ ಪ್ರಬುದ್ಧರಾಗುತ್ತೀರಿ? ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಅವರು, ರಾಹುಲ್ ಗಾಂಧಿಯವರೇ ನೀವು ಯಾವಾಗ ಪ್ರಬುದ್ಧರಾಗುತ್ತೀರಿ? ಭಾರತವನ್ನು ಮುನ್ನಡೆಸಲು ಪ್ರಬುದ್ಧ ನಾಯಕತ್ವದ ಅಗತ್ಯವಿದೆಯೇ ಹೊರತು ಹವ್ಯಾಸಿ ನಾಟಕಗಳಲ್ಲ ಎಂದು ಕಿಡಿಕಾರಿದ್ದಾರೆ.
ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಮತ್ತು ನಾಯಕರನ್ನು 'ಜೋಕರ್ಸ್ ಮತ್ತು ಕ್ಲೌನ್ಸ್' ಎಂದು ಕರೆಯುವುದು, ದೇಶವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನಿಭಾಯಿಸಲು ನಿಮಗೆ ಸಾಮರ್ಥ್ಯವಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಪ್ರಧಾನ ಮಂತ್ರಿಯನ್ನು ಅವಮಾನಿಸುವ ಮೂಲಕ, ನೀವು ಮೋದಿಜಿಯವರನ್ನು ಐತಿಹಾಸಿಕವಾಗಿ ಮೂರು ಅವಧಿಗಳಿಗೆ ಆಯ್ಕೆ ಮಾಡಿದ ಕೋಟ್ಯಂತರ ಮತದಾರರನ್ನು ಅಪಹಾಸ್ಯ ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ವಂಶಾಡಳಿತದ ರಾಜಕಾರಣವನ್ನು ತಿರಸ್ಕರಿಸಿದ್ದಕ್ಕಾಗಿ ನೀವು ಮತದಾರರ ವಿವೇಕವನ್ನೇ ಪ್ರಶ್ನಿಸುತ್ತಿದ್ದೀರಿ. ನಿಮ್ಮ ನಕಾರಾತ್ಮಕ ನಿಲುವನ್ನು ತಿರಸ್ಕರಿಸಿದ ನಾಗರಿಕರನ್ನು ಹೇಡಿಗಳೆಂದು ಜರಿಯುವುದೇ ನೀವು ಸುಮಾರು 100 ಚುನಾವಣಾ ಸೋಲುಗಳನ್ನು ಕಾಣಲು ಕಾರಣವಾಗಿದೆ. ನಿಮ್ಮ ಅಹಂಕಾರವನ್ನು ಬಿಟ್ಟುಬಿಡಿ ಮತ್ತು ಜನರ ತೀರ್ಪನ್ನು ಗೌರವಿಸಿ ಎಂದಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು? 

ಗುರುವಾರ ನವದೆಹಲಿಯಲ್ಲಿ ನಡೆದ ರಚನಾತ್ಮಕ ಕಾಂಗ್ರೆಸ್ ರಾಷ್ಟ್ರೀಯ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಆರ್​ಎಸ್ಎಸ್ ಭಾರತದ ಬಗ್ಗೆ ಅಲ್ಪ ತಿಳುವಳಿಕೆ ಹೊಂದಿರುವ ಬಂಚ್ ಆಫ್ ಜೋಕರ್ಸ್ ಎಂದು ಕಿಡಿರಿಕಾರಿದ್ದಾರೆ. ಜೊತೆಗೆ ಮೋದಿ ವಿದೇಶಾಂಗ ನೀತಿಯನ್ನು ವ್ಯಂಗ್ಯವಾಡಿದ್ದಾರೆ. 
ಆರ್‌ಎಸ್‌ಎಸ್ (RSS) ತನ್ನ ಮೂಲ ಸ್ವರೂಪದ ಶಕ್ತಿಯಾಗಿ ಈಗ ಅಸ್ತಿತ್ವದಲ್ಲಿಲ್ಲ. ಮತ್ತು ಅದು ಈಗ ದೊಡ್ಡ ಬಂಡವಾಳಶಾಹಿಗಳಾದ ಅದಾನಿ ಮತ್ತು ಅಂಬಾನಿ ಅವರ ಸಾಧನವಾಗಿ ಮಾರ್ಪಟ್ಟಿದೆ ಎಂದು ಪ್ರತಿಪಾದಿಸಿದ್ದರು. ಮುಂದುವರೆದು, ಹಾಸ್ಯಾಸ್ಪದ ವ್ಯಕ್ತಿಗಳ ಗುಂಪೊಂದು ನಮ್ಮ ಮೇಲೆ ತಮ್ಮ ಆಳ್ವಿಕೆಯನ್ನು ಹೇರುವುದಕ್ಕೆ ಅವಕಾಶ ನೀಡದಿರುವುದೇ ನಿಜವಾದ ರಾಷ್ಟ್ರೀಯ ಪ್ರಜ್ಞೆ ಎಂದಿದ್ದಾರೆ.
ಹಾಗೆಯೇ ಮೋದಿಯವರ ವಿದೇಶಾಂಗ ನೀತಿಯನ್ನು ಅಪಹಾಸ್ಯ ಮಾಡಿರುವ ಅವರು, ವಿದೇಶಾಂಗ ನೀತಿಯೆಂದರೆ ನಾಯಕರನ್ನು ಅಪ್ಪಿಕೊಳ್ಳುವುದು ಎಂಬ ಭಾವನೆ ಹೇಗೋ ಮೋದಿಯವರ ಮನಸ್ಸಿನಲ್ಲಿ ಬೇರೂರಿದೆ. ಅದನ್ನು ತೋರಿಸುವ ಭಾಗವಾಗಿ ಪ್ರಧಾನಿ ವಿದೇಶಿ ನಾಯಕರನ್ನು ತಬ್ಬಿಕೊಳ್ಳುವ ರೀತಿಯನ್ನು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರನ್ನು ಅಪ್ಪಿಕೊಂಡು ಅಪಹಾಸ್ಯ ಮಾಡಿದ್ದರು (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net