ಬಿಹಾರದ ಗದ್ದುಗೆಗೆ ಹೊಸ 'ಸಾಮ್ರಾಟ್'...ನೂತನ ಮುಖ್ಯಮಂತ್ರಿಯಾಗಿ ಚೌಧರಿ ಆಯ್ಕೆ; ನಾಳೆ ಪ್ರಮಾಣ ವಚನ ಸ್ವೀಕಾರ! | Samrat Choudhary

Samrat Choudhary | .ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಆಯ್ಕೆ
Samrat Choudhary | .ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಆಯ್ಕೆ
Published on
ಪಟನಾ: ಬಿಹಾರ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು, ಬಿಜೆಪಿ ತನ್ನ ಪ್ರಬಲ ದಾಳವನ್ನು ಉರುಳಿಸಿದೆ. ದೀರ್ಘಕಾಲದ ಚರ್ಚೆ, ರಾಜಕೀಯ ಲೆಕ್ಕಾಚಾರದ ಬಳಿಕೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸಾಮ್ರಾಟ್ ಚೌಧರಿ (Samrat Choudhary) ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ಈ ನಿರ್ಧಾರವು ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಬಿಹಾರದ ರಾಜಕೀಯ ಸಮೀಕರಣವನ್ನೇ ಬದಲಿಸುವ ಸಾಧ್ಯತೆ ಇದೆ.

ಹೊಸ ಇತಿಹಾಸ ಸೃಷ್ಟಿ

ಸಾಮ್ರಾಟ್​ ಆಯ್ಕೆಯ ಮೂಲಕ ಬಿಹಾರದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದ್ದು, ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸಾಮ್ರಾಟ್ ಚೌಧರಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿಹಾರದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಬಿಜೆಪಿಯ ಮೊಟ್ಟಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಇಷ್ಟು ವರ್ಷಗಳ ಕಾಲ ಬಿಹಾರದಲ್ಲಿ ಸಮ್ಮಿಶ್ರ ಸರ್ಕಾರದ ಭಾಗವಾಗಿ ಪ್ರಮುಖ ಪಾತ್ರ ವಹಿಸಿದ್ದ ಬಿಜೆಪಿ, ಈಗ ಮೊದಲ ಬಾರಿಗೆ ಸ್ವತಂತ್ರವಾಗಿ ಮತ್ತು ತನ್ನದೇ ನಾಯಕತ್ವದಲ್ಲಿ ಸರ್ಕಾರವನ್ನು ಮುನ್ನಡೆಸಲು ಸಜ್ಜಾಗಿದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ, ಸಾಮ್ರಾಟ್ ಚೌಧರಿ ಹೆಸರನ್ನು ಪ್ರಸ್ತಾಪಿಸಿದರು. ಈ ಪ್ರಸ್ತಾವನೆಯನ್ನು ಹಿರಿಯ ಶಾಸಕರಾದ ರೇಣು ದೇವಿ, ಮಂಗಲ್ ಪಾಂಡೆ ಮತ್ತು ದಿಲೀಪ್ ಜೈಸ್ವಾಲ್ ಅನುಮೋದಿಸಿದರು. ಕೇಂದ್ರ ವೀಕ್ಷಕರಾಗಿ ಆಗಮಿಸಿದ್ದ ಹಿರಿಯ ನಾಯಕ ಶಿವರಾಜ್ ಸಿಂಗ್ ಚೌಹಾಣ್, ಚೌಧರಿ ಹೆಸರನ್ನು ಅಧಿಕೃತವಾಗಿ ಘೋಷಿಸಿದರು ಎನ್ನಲಾಗಿದೆ.

ಜಾತಿ ಸಮೀಕರಣದ ಮಾಸ್ಟರ್ ಸ್ಟ್ರೋಕ್

57 ವರ್ಷದ ಸಾಮ್ರಾಟ್ ಚೌಧರಿ ಬಿಹಾರದ ಅತ್ಯಂತ ಪ್ರಭಾವಿ ಹಿಂದುಳಿದ ವರ್ಗ (OBC) ಸಮುದಾಯವಾದ ಕುಶ್ವಾಹ (ಕೊಯೇರಿ) ಜಾತಿಗೆ ಸೇರಿದವರಾಗಿದ್ದು, ಬಿಹಾರದ ಜನಸಂಖ್ಯೆಯಲ್ಲಿ ಯಾದವರ ಬಳಿಕ ಅತ್ಯಂತ ದೊಡ್ಡ ಮತಬ್ಯಾಂಕ್ ಎನಿಸಿರುವ ಕುಶ್ವಾಹ ಸಮುದಾಯವನ್ನು ಓಲೈಸುವುದು ಈ ಆಯ್ಕೆಯ ಹಿಂದಿನ ಪ್ರಮುಖ ಉದ್ದೇಶವಾಗಿದೆ. ಮುಂದಿನ ಮುಖ್ಯಮಂತ್ರಿಯಾಗುವವರು ಇದೇ ಸಮುದವರಾಗಿರಬೇಕು ಎಂದು ನಿತೀಶ್ ಕುಮಾರ್ ನೇತೃತ್ವದ ಜೆಡಿಯು (JDU) ಕೂಡ ಮನವಿ ಮಾಡಿತ್ತು ಎಂದು ಮೂಲಗಳು ತಿಳಿಸಿವೆ.

ನಿತೀಶ್ ಕುಮಾರ್ ರಾಜೀನಾಮೆ

ಬಿಹಾರದಲ್ಲಿ ದೀರ್ಘಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ನಿತೀಶ್ ಕುಮಾರ್ ಪಟನಾದ ಲೋಕ ಭವನದಲ್ಲಿ ರಾಜ್ಯಪಾಲ ಸೈಯದ್ ಅತಾ ಹಸ್ನೈನ್ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ನಾನು ಬಿಹಾರದ ಜನರಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಇಂದಿನ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಹುದ್ದೆಯನ್ನು ತೊರೆಯಲು ನಿರ್ಧರಿಸಿದೆ ಎಂದು ತಿಳಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net