ಟಿಎಂಸಿ ಭದ್ರಕೋಟೆಯಲ್ಲಿ ಇವಿಎಂ ಅಕ್ರಮ..? ಬಿಜೆಪಿ ಬಟನ್‌ಗೆ ಟೇಪ್ ಹಾಕಿದ ಆರೋಪ; ಮರು ಮತದಾನಕ್ಕೆ ಕಮಲ ಪಡೆ ಆಗ್ರಹ! | Falta Consistency

Falta Consistency | ಫಾಲ್ಟಾದಲ್ಲಿ ಚುನಾವಣಾ ಗೋಲ್ಮಾಲ್: ಬಿಜೆಪಿ ಚಿಹ್ನೆಗೆ ಟೇಪ್ ಹಾಕಿ ಮತದಾನಕ್ಕೆ ಅಡ್ಡಿ
Falta Consistency | ಫಾಲ್ಟಾದಲ್ಲಿ ಚುನಾವಣಾ ಗೋಲ್ಮಾಲ್: ಬಿಜೆಪಿ ಚಿಹ್ನೆಗೆ ಟೇಪ್ ಹಾಕಿ ಮತದಾನಕ್ಕೆ ಅಡ್ಡಿ
Published on
Falta Consistency: ಸಂಸದ ಅಭಿಷೇಕ್ ಬ್ಯಾನರ್ಜಿ ಪ್ರತಿನಿಧಿಸುವ ಹೈ-ಪ್ರೊಫೈಲ್ ಕ್ಷೇತ್ರವಾದ ಡೈಮಂಡ್ ಹಾರ್ಬರ್ ಲೋಕಸಭಾ ವ್ಯಾಪ್ತಿಯ ಫಾಲ್ಟಾ ವಿಧಾನಸಭಾ ಕ್ಷೇತ್ರವು ಮತದಾನದ ದಿನದಂದು ತೀವ್ರ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದ್ದು, ಇವಿಎಂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಮತಯಂತ್ರಗಳನ್ನು ತಿರುಚಲಾಗಿದೆ ಎಂಬ ಗಂಭೀರ ಆರೋಪಗಳು ಫಾಲ್ಟಾದಿಂದ ಕೇಳಿಬಂದಿವೆ.
ಘಟನೆಗೆ ಸಂಬಂಧಿಸಿದಂತೆ ಟಿಎಂಸಿ ವಿರುದ್ಧ ನೇರ ವಾಗ್ದಾಳಿ ನಡೆಸಿರುವ ಬಿಜೆಪಿ ಅಭ್ಯರ್ಥಿ ದೇಬಾಂಗ್ಶು ಪಾಂಡಾ, ಬಿಜೆಪಿಗೆ ಮತದಾನ ಮಾಡುವುದನ್ನು ಉದ್ದೇಶಪೂರ್ವಕವಾಗಿ ನಿಷ್ಕ್ರಿಯಗೊಳಿಸಲಾಗಿದೆ, ಹಲವಾರು ಮತಗಟ್ಟೆಗಳಲ್ಲಿ ಬಿಜೆಪಿ ಅಭ್ಯರ್ಥಿಯ ಹೆಸರು ಮತ್ತು ಪಕ್ಷದ ಚಿಹ್ನೆಗೆ ಅನುಗುಣವಾದ ಇವಿಎಂ ಬಟನ್ ಜಾಮ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಮತದಾರರು ತಮ್ಮ ಪರವಾಗಿ ಮತ ಚಲಾಯಿಸಲು ಸಾಧ್ಯವಾಗದಂತೆ ತಡೆಯಲು ಇಂತಹ ಕುತಂತ್ರ ರೂಪಿಸಲಾಗಿದೆ ಎಂಬುದು ಅವರ ವಾದ.
ಮತದಾನ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಮತ್ತು ಮುಕ್ತ ಹಾಗೂ ನ್ಯಾಯಯುತ ಮತದಾನವನ್ನು ತಡೆಯಲು ಟಿಎಂಸಿ ಇಂತಹ ಕ್ರಮಗಳನ್ನು ಕೈಗೊಂಡಿದೆ ಎಂದು ದೇಬಾಂಗ್ಶು ಪಾಂಡಾ ಆರೋಪಿಸಿದ್ದಾರೆ. ಈ ಬೆಳವಣಿಗೆಗಳು ಕ್ಷೇತ್ರದಲ್ಲಿ ತೀವ್ರ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದ್ದು, ಈವರೆಗೆ ಈ ಆರೋಪಗಳ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟಿಕರಣ ವರದಿಯಾಗಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಶ್ಚಿಮ ಬಂಗಾಳ ಚುನಾವಣಾ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಇವಿಎಂ ಗುಂಡಿಗಳನ್ನು ಟೇಪ್ ಮಾಡಲಾಗುತ್ತಿದೆ ಎಂಬ ವರದಿಗಳನ್ನು ಕೂಡಲೇ ಪರಿಶೀಲಿಸಬೇಕು, ಒಂದು ವೇಳೆ ಇವಿಎಂ ತಿರುಚುವಿಕೆ ಅಥವಾ ಅಕ್ರಮಗಳು ನಡೆದಿರುವುದು ನಿಜವೆಂದು ಕಂಡುಬಂದಲ್ಲಿ, ಅಂತಹ ಮತಗಟ್ಟೆಗಳಲ್ಲಿ ತಕ್ಷಣವೇ ಮರು ಮತದಾನ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಮರು ಮತದಾನಕ್ಕೆ ಒತ್ತಾಯ!..

ಪಶ್ಚಿಮ ಬಂಗಾಳದ ಫಾಲ್ಟಾದಲ್ಲಿ ನಡೆದಿದೆ ಎನ್ನಲಾದ ಚುನಾವಣಾ ಅಕ್ರಮಗಳ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಂಬಂಧ ಬಿಜೆಪಿ ಮಾಧ್ಯಮ ಉಸ್ತುವಾರಿ ಅಮಿತ್ ಮಾಳವೀಯಲ್ಲಿ ಮರು ಮತದಾನ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮಾಳವೀಯ, ಹಲವಾರು ಮತಗಟ್ಟೆಗಳಲ್ಲಿ ಬಿಜೆಪಿಗೆ ಮತ ಚಲಾಯಿಸುವ ಆಯ್ಕೆಯನ್ನು ಟೇಪ್ ಬಳಸಿ ನಿರ್ಬಂಧಿಸಲಾಗಿದೆ. ಇದು ಮತದಾರರು ತಮ್ಮ ಹಕ್ಕನ್ನು ಚಲಾಯಿಸುವುದನ್ನು ತಡೆಯುವ ಉದ್ದೇಶಪೂರ್ವಕ ಸಂಚು. ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಲೋಕಸಭಾ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಬಳಸಿದ ಅದೇ ಡೈಮಂಡ್ ಹಾರ್ಬರ್ ಮಾದರಿಯನ್ನು ಇಲ್ಲಿಯೂ ಅನ್ವಯಿಸಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಬಿಜೆಪಿಯ ಈ ಆರೋಪಗಳಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಕ್ತಾರ ರಿಜು ದತ್ತಾ ಅಷ್ಟೇ ಖಡಕ್ ತಿರುಗೇಟು ನೀಡಿದ್ದು, ಕಳೆದ ಕೆಲವು ದಿನಗಳಿಂದ ಪೊಲೀಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಫಾಲ್ಟಾದ ಜನರು ಮತ್ತು ನಮ್ಮ ಅಭ್ಯರ್ಥಿ ಹಾಗೂ ಅವರ ಕುಟುಂಬ ಸದಸ್ಯರನ್ನು ಭಯಭೀತಗೊಳಿಸುತ್ತಿದ್ದಾರೆ. ಇಡೀ ವಿಷಯ ಚುನಾವಣಾ ಆಯೋಗದ ವ್ಯಾಪ್ತಿಯಲ್ಲಿದೆ. ಅಮಿತ್ ಮಾಳವೀಯ ಕೇವಲ ಟ್ವೀಟ್ ಮಾಡುವ ಬದಲು, ಬಿಜೆಪಿ ಬಯಸಿದ್ದನ್ನು ನೀಡಲು ಸಾಧ್ಯವಾಗದ ಅಜಯ್ ಪಾಲ್ ಶರ್ಮಾರನ್ನು ಅಮಾನತುಗೊಳಿಸುವಂತೆ ತಮ್ಮ ಮೇಲಧಿಕಾರಿಗಳಿಗೆ ದೂರು ನೀಡಲಿ ಎಂದು ಸವಾಲು ಹಾಕಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net