ರಾಷ್ಟ್ರಪತಿ ಭವನದಲ್ಲಿ ಪಟ್ಕಾ ಧರಿಸದೆ ಈಶಾನ್ಯ ಸಂಸ್ಕೃತಿಗೆ ಅವಮಾನ! ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಕಿಡಿ, 'ಕೈ' ತಿರುಗೇಟು

ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published on

ಪ್ರಮುಖ ಮುಖ್ಯಾಂಶಗಳು

  • 'ಆಟ್-ಹೋಮ್' ಕಾರ್ಯಕ್ರಮದಲ್ಲಿ ಪಟ್ಕಾ ಧರಿಸದ ರಾಹುಲ್​ ಗಾಂಧಿ ವಿರುದ್ಧ ಬಿಜೆಪಿ ಕಿಡಿ
  • ಈಶಾನ್ಯ ಪಟ್ಕಾ ಧರಿಸಲು ನಿರಾಕರಿಸುವ ಮೂಲಕ ನಮ್ಮ ಸಂಸ್ಕೃತಿಗೆ ಅವಮಾನಿಸಿದ್ದಾರೆ ಎಂದ ಆರೋಪ
  • ಇದೊಂದು ವಿಚಾರದಲ್ಲಿ ಕಾಂಗ್ರೆಸ್​-ಬಿಜೆಪಿ ಆರೋಪ-ಪ್ರತ್ಯಾರೋಪ
ನವದೆಹಲಿ: ಸೋಮವಾರ (ಜ.26) ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪತಿ ಭವನದಲ್ಲಿ ನಡೆದ 'ಆಟ್ ಹೋಮ್ ರಿಸೆಪ್ಷನ್'ನಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ, ಈಶಾನ್ಯ ಪಟ್ಕಾ ಧರಿಸಲು ನಿರಾಕರಿಸುವ ಮೂಲಕ ನಮ್ಮ ಸಂಸ್ಕೃತಿಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಸದ್ಯ ಈ ವಿಷಯ ರಾಜಕೀಯ ತಿರುವು ಪಡೆದಿದ್ದು, ಬಿಜೆಪಿ-ಕಾಂಗ್ರೆಸ್​ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದೆ. 
ಪ್ರಧಾನಿಯಿಂದ ಯುರೋಪಿಯನ್ ಒಕ್ಕೂಟದ ನಾಯಕರು, ವಿದೇಶಿ ರಾಯಭಾರಿಗಳು ಸೇರಿ ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲಾ ಗಣ್ಯರಿಗೂ ಈಶಾನ್ಯ ಪಟ್ಕಾ ನೀಡಲಾಯಿತು. ಆಗಮಿಸಿದ್ದ ಅತಿಥಿಗಳ ಪೈಕಿ ಈಶಾನ್ಯ ಪಟ್ಕಾ ಧರಿಸದ ಏಕೈಕ ವ್ಯಕ್ತಿ ರಾಹುಲ್ ಗಾಂಧಿ ಮಾತ್ರ ಎಂದು ಉನ್ನತ ಮೂಲಗಳು ತಿಳಿಸಿದ್ದು, ಇದನ್ನೇ ಅಸ್ತ್ರವನ್ನಾಗಿ ಬಳಸಿದ ಬಿಜೆಪಿ, ರಾಹುಲ್ ವಿರುದ್ಧ ಕಿಡಿಕಾರಿದೆ. 

ಬಿಜೆಪಿ ಟೀಕೆ

ರಾಷ್ಟ್ರಪತಿ ಭವನದಲ್ಲಿ 'ಆಟ್-ಹೋಮ್' ಕಾರ್ಯಕ್ರಮದ ಬೆನ್ನಲ್ಲೇ ಈ ವಿವಾದ ಭುಗಿಲೆದ್ದಿದ್ದು, ರಾಷ್ಟ್ರ ರಾಜಕೀಯದಲ್ಲಿ ಸದ್ದು ಮಾಡುತ್ತಿದೆ. ಪಟ್ಕಾ ಅಸ್ಸಾಂ ಜನರ ಮೂಲ ಸಂಸ್ಕೃತಿಯಾಗಿದ್ದು, ಇದನ್ನು ಧರಿಸಲು ರಾಹುಲ್​ ನಿರಾಕರಿಸಿದ್ದಾರೆ ಸರಿಯಲ್ಲ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎರಡು ಬಾರಿ ರಾಹುಲ್​ಗೆ ಧರಿಸುವಂತೆ ಹೇಳಿದರೂ ಸಹ ಅವರು ಒಪ್ಪಲಿಲ್ಲ. ಎಲ್ಲ ಅತಿಥಿಗಳು ಹಾಕಿಕೊಂಡಿರುವಾಗ ಇವರು ಬೇಡ ಎಂದಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಬಿಜೆಪಿ ಪ್ರಶ್ನಿಸಿದೆ. 

'ಇದೊಂದು ಫೇಕ್​ ಡ್ರಾಮಾ'

ಇನ್ನು ರಾಹುಲ್ ಗಾಂಧಿ ನಡೆದುಕೊಂಡ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಾತನಾಡಿ, ಇದು ನಮ್ಮ ಇಡೀ ಈಶಾನ್ಯ ಭಾಗದ ಜನರಿಗೆ ಭಾರೀ ನೋವಾಗಿದೆ. ಅಲ್ಲಿನ ಸಂಸ್ಕೃತಿಗೆ ಮಾಡಿದ ಅಪಮಾನವಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ ಆರೋಪಗಳಿಗೆ ತಿರುಗೇಟು​ ನೀಡಿರುವ ಕಾಂಗ್ರೆಸ್​, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಕಾರ್ಯಕ್ರಮದ ಸಮಯದಲ್ಲಿ ಪಟ್ಕಾ ಧರಿಸಿರಲಿಲ್ಲ ಎಂದು ಆರೋಪಿಸಿದೆ. ಮತ್ತೊಂದೆಡೆ, ಬಿಜೆಪಿ ಆರೋಪಗಳು ಕೇವಲ ರಾಜಕೀಯ ಸೇಡು, ಇದೊಂದು ಫೇಕ್​ ಡ್ರಾಮ ಎಂದಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net