ಪ್ರತಿಭಟನೆ ವೇಳೆ ಎಡವಟ್ಟು; ರಾಹುಲ್ ಗಾಂಧಿ, ಅಖಿಲೇಶ್ ಪ್ರತಿಕೃತಿ ಸುಡುವಾಗ ಹಣೆ ಸುಟ್ಟುಕೊಂಡ ಬಿಜೆಪಿ ಶಾಸಕಿ ಅನುಪಮಾ | MLA Anupama

ಉತ್ತರ ಪ್ರದೇಶದ ಬಿಜೆಪಿ ಶಾಸಕಿ ಅನುಪಮಾ ಜೈಸ್ವಾಲ್
ಉತ್ತರ ಪ್ರದೇಶದ ಬಿಜೆಪಿ ಶಾಸಕಿ ಅನುಪಮಾ ಜೈಸ್ವಾಲ್
Published on
ಲಖನೌ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ವಿಫಲಗೊಳಿಸಿದ ಹಿನ್ನೆಲೆ ವಿಪಕ್ಷಗಳ ವಿರುದ್ಧ ಪ್ರತಿಭೌಟನೆ ನಡೆಸುವ ಸಮಯದಲ್ಲಿ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರ ಪ್ರತಿಕೃತಿಯನ್ನು ದಹಿಸುವ ಸಮಯದಲ್ಲಿ ಉತ್ತರ ಪ್ರದೇಶದ ಬಿಜೆಪಿ ಶಾಸಕಿ ಅನುಪಮಾ ಜೈಸ್ವಾಲ್(MLA  Anupama Jaiswal) ಹಣೆ ಸುಟ್ಟುಕೊಂಡಿರುವ ಘಟನೆ ವರದಿಯಾಗಿದೆ.
ಶನಿವಾರ(ಏ. 25) ಮಧ್ಯಾಹ್ನ ಬಹ್ರೈಚ್‌ನಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿವಾಸದ ಬಳಿ 'ಮಹಿಳಾ ಜನಕ್ರೋಷ ಮಾರ್ಚ್' ಬ್ಯಾನರ್ ಅಡಿಯಲ್ಲಿ ಬಿಜೆಪಿ ವಿರೋಧ ಪಕ್ಷಗಳ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ ಘಟನೆ ಸಂಭವಿಸಿದೆ. ಪ್ರತಿಕೃತಿಗಳಿಗೆ ಬೆಂಕಿ ಹಚ್ಚಿದಾಗ ಶಾಸಕಿ ಮುಖಕ್ಕೆ ಕಿಡಿಗಳು ಸಿಡಿದಿದ್ದಾವೆ ಎನ್ನಲಾಗಿದೆ. 
ಸ್ಥಳದಲ್ಲಿದ್ದ ಪಕ್ಷದ ಕಾರ್ಯಕರ್ತರು ತಕ್ಷಣ ಬೆಂಕಿಯನ್ನು ನಂದಿಸಿ ಪೊಲೀಸ್ ವಾಹನದಲ್ಲಿ ಶಾಸಕಿ ಅನುಪಮಾ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ವೈದ್ಯಕೀಯ ಸಮಾಲೋಚನೆಗಾಗಿ ಲಖನೌಗೆ ಕರೆದೊಯ್ಯಲಾಗಿದೆ. 
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಎಂ.ಎಂ. ತ್ರಿಪಾಠಿ, ಶಾಸಕಿಯ ಹಣೆಯ ಸುಮಾರು ನಾಲ್ಕು ಪ್ರತಿಶತದಷ್ಟು ಸುಟ್ಟ ಗಾಯಗಳಾಗಿದ್ದು, ತಲೆಯ ಮೇಲಿನ ಕೆಲವು ಕೂದಲುಗಳು ಸುಟ್ಟು ಹೋಗಿವೆ. ಆದಾಗ್ಯೂ, ಅವರ ಕಣ್ಣುಗಳಿಗೆ ಯಾವುದೇ ಹಾನಿಯಾಗಿಲ್ಲ ಮತ್ತು ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್​ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಬೆಂಕಿ ಹಚ್ಚುವವರು ಜಾಗರೂಕರಾಗಿರಬೇಕು. ಮಹಿಳೆಯ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎಂದು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net