ಕಾಕ್ರೋಚ್ ಪಾರ್ಟಿ ಹಿಂದೆ ಭಾರತವನ್ನು ಅಸ್ಥಿರಗೊಳಿಸುವ ವಿದೇಶಿ ಸಂಚಿದೆ; ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್​ರಿಂದ ಗಂಭೀರ ಆರೋಪ! | Rajeev Chandrasekhar

Rajeev Chandrasekhar |  ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್
Rajeev Chandrasekhar | ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್
Published on
Rajeev Chandrasekhar: ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿರುವ ಕಾಕ್ರೋಚ್​ ಜನತಾ ಪಾರ್ಟಿ (CJP) ಎಂಬ ಡಿಜಿಟಲ್ ಅಭಿಯಾನದ ಹಿಂದೆ ದೇಶವನ್ನು ಅಸ್ಥಿರಗೊಳಿಸುವ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಗುರಿಯಾಗಿಸುವ ದೇಶ ವಿರೋಧಿ ಶಕ್ತಿಗಳ ಕೈವಾಡವಿದೆ ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಶನಿವಾರ ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಜೀವ್ ಚಂದ್ರಶೇಖರ್, ಈ ಕಾಕ್ರೋಚ್ ಪಾರ್ಟಿಯ ತಂತ್ರವು ಗಡಿಯಾಚೆಗಿನ ಶಕ್ತಿಗಳಿಂದ ಪ್ರೇರಿತವಾಗಿದ್ದು, ಇದಕ್ಕೆ ಭಾರತದ ಕೆಲವು ವಿರೋಧ ಪಕ್ಷಗಳೂ ಸಾಥ್ ನೀಡುತ್ತಿವೆ ಎಂದು ದೂರಿದ್ದಾರೆ. ಇಂದಿನ ಸೋಷಿಯಲ್ ಮೀಡಿಯಾ, ಎಐ ಯುಗದಲ್ಲಿ ಇಂತಹ ಡಿಜಿಟಲ್ ತಂತ್ರಗಳು ತಪ್ಪು ಮಾಹಿತಿಗಳನ್ನು ಹರಡಿ ದೇಶದಲ್ಲಿ ಗೊಂದಲ ಸೃಷ್ಟಿಸಲು ಬಳಸಲಾಗುವ ಅತ್ಯಂತ ಅಪಾಯಕಾರಿ ಆಯುಧಗಳಾಗಿವೆ ಎಂದು ಎಚ್ಚರಿಸಿದ್ದಾರೆ.
ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಸಾಧಿಸುತ್ತಿರುವ ಆರ್ಥಿಕ ಪ್ರಗತಿ ಮತ್ತು ಆಧುನೀಕರಣವನ್ನು ಸಹಿಸದ ಕೆಲವು ವಿದೇಶಿ ಶಕ್ತಿಗಳು ಇಂತಹ ಅಡೆತಡೆಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜಗತ್ತು ಕೋವಿಡ್ ಸಾಂಕ್ರಾಮಿಕ, ರಷ್ಯಾ-ಉಕ್ರೇನ್ ಯುದ್ಧ, ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ, ಇಂಧನ ಬಿಕ್ಕಟ್ಟು ಮತ್ತು ಚೀನಾದ ಆಕ್ರಮಣಶೀಲತೆಯಂತಹ ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದಾಗಲೂ ಮೋದಿ ಸರ್ಕಾರವು ಭಾರತವನ್ನು ಸುರಕ್ಷಿತವಾಗಿ ಹಾಗೂ ಸದೃಢವಾಗಿ ಮುನ್ನಡೆಸಿದೆ ಎಂದು ಶ್ಲಾಘಿಸಿರುವ ರಾಜೀವ್ ಚಂದ್ರಶೇಖರ್, ಯಾವುದೇ ವಿದೇಶಿ ಹಿತಾಸಕ್ತಿಗಳು ಅಥವಾ ವಿರೋಧ ಪಕ್ಷಗಳ ಇಂತಹ ರಾಜಕೀಯ ತಂತ್ರಗಳು ವಿಕಸಿತ ಭಾರತ ನಿರ್ಮಾಣದ ಸಂಕಲ್ಪವನ್ನು ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಕೇರಳದಲ್ಲಿ ಆಡಳಿತಾರೂಢ ಕಾಂಗ್ರೆಸ್, ಅದರ ಮಿತ್ರ ಪಕ್ಷವಾದ ಐಯುಎಂಎಲ್ (IUML) ಮತ್ತು ವಿರೋಧ ಪಕ್ಷವಾದ ಸಿಪಿಐ(ಎಂ) ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಯುವ ನಾಯಕರು ಈ ಡಿಜಿಟಲ್ ಚಳವಳಿಗೆ ಬೆಂಬಲ ಸೂಚಿಸಿದ್ದಾರೆ. ಹೊಸದಾಗಿ ಆಯ್ಕೆಯಾಗಿರುವ ಶಾಸಕರಾದ ಅಬಿನ್ ವರ್ಕಿ (ಕಾಂಗ್ರೆಸ್), ಪಿ.ಕೆ. ನವಾಸ್ ಮತ್ತು ಟಿ.ಪಿ. ಅಶ್ರಫ್ ಅಲಿ (IUML), ಹಾಗೂ ವಿ.ಕೆ. ಸನೋಜ್ ಸಿಪಿಐ(ಎಂ) ಶುಕ್ರವಾರ ಈ ಗುಂಪಿನ ಪರವಾಗಿ ನಿಂತಿರುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ರಾಜ್ಯ ಅಧ್ಯಕ್ಷ ಎಂ. ಶಿವಪ್ರಸಾದ್ ಸೇರಿದಂತೆ ಪ್ರಮುಖ ವಿದ್ಯಾರ್ಥಿ ನಾಯಕರು ಕೂಡ ಈ ಆಂದೋಲನವನ್ನು ಬೆಂಬಲಿಸಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net