ಕ್ಷೇತ್ರ ಪುನರ್ವಿಂಗಡಣೆಗಾಗಿ ಬಿಜೆಪಿ ಮಹಿಳೆಯರನ್ನು ಗುರಾಣಿಯಾಗಿ ಬಳಸುತ್ತಿದೆ; ಕೇಂದ್ರ ಸರ್ಕಾರದ ವಿರುದ್ಧ ಸಂಸದೆ ಕನಿಮೋಳಿ ವಾಗ್ದಾಳಿ | Kanimozhi

ಡಿಎಂಕೆ ಸಂಸದೆ ಕನಿಮೋಳಿ
ಡಿಎಂಕೆ ಸಂಸದೆ ಕನಿಮೋಳಿ
Published on
ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಯನ್ನು ತಿದ್ದುಪಡಿ ಮಾಡುವ ಕೇಂದ್ರ ಸರ್ಕಾರದ ಕ್ರಮವನ್ನು ಟೀಕಿಸಿರುವ ಡಿಎಂಕೆ ನಾಯಕಿ ಮತ್ತು ಸಂಸದೆ ಕನಿಮೋಳಿ ಕರುಣಾನಿಧಿ, ಕ್ಷೇತ್ರಗಳ ಪುನರ್ವಿಂಗಡಣೆಗಾಗಿ ಬಿಜೆಪಿ ಮಹಿಳೆಯರನ್ನು ಗುರಾಣಿಯಾಗಿ ಬಳಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ(ಏ. 17) ಲೋಕಸಭೆಯ ಚರ್ಚೆಯಲ್ಲಿ ಪ್ರತಿಭಟನಾರ್ಥವಾಗಿ ಕಪ್ಪು ಸೀರೆಯುಟ್ಟು ಭಾಗವಹಿಸಿ ಮಾತನಾಡಿರುವ ಅವರು, ಗಡಿ ನಿರ್ಣಯವು ದಕ್ಷಿಣ ರಾಜ್ಯಗಳ ಸಾಮೂಹಿಕ ರಾಜಕೀಯ ಶಕ್ತಿಯನ್ನು ಕಡಿಮೆ ಮಾಡುತ್ತವೆ. ಹೆಚ್ಚಿನ ಸಾಕ್ಷರತೆಯ ಮಟ್ಟವನ್ನು ಹೊಂದಿರುವ ತಮಿಳುನಾಡಿನ ಮಹಿಳೆಯರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳಲು ಬಿಡಲ್ಲ ಎಂದು ಕಿಡಿಕಾರಿದ್ದಾರೆ.
2023ರ ಮಹಿಳಾ ಮೀಸಲಾತಿ ಕಾಯ್ದೆಯ ಜಾರಿ ಅಧಿಸೂಚನೆಯ ಸಮಯವನ್ನು ಪ್ರಶ್ನಿಸಿದ ಅವರು, ಈ ಕಾನೂನನ್ನು ಈಗಾಗಲೇ ಜಾರಿಗೆ ತರಲಾಗಿದ್ದರೆ, ಚರ್ಚೆಯ ಉದ್ದೇಶವೇನು?, ನಾನು ದ್ರಾವಿಡ ಮುನ್ನೇತ್ರ ಕಳಗಂನ ಪ್ರತಿನಿಧಿಯಾಗಿ ಮಾತ್ರವಲ್ಲ, ಚುನಾವಣೆಯ ಸಮಯದಲ್ಲಿ ತಮ್ಮ ಮತಗಳು ಕಡಿಮೆಯಾಗುತ್ತವೆ ಮತ್ತು ಈ ಸಂಸತ್ತಿನಲ್ಲಿ ತಮ್ಮ ಧ್ವನಿ ಕಡಿಮೆಯಾಗುತ್ತದೆ ಎಂದು ಹೇಳಲಾದ ಎಂಟು ಕೋಟಿ ಜನರ ಪ್ರತಿನಿಧಿಯಾಗಿಯೂ ಮಾತನಾಡುತ್ತಿದ್ದೇನೆ.
ನಾವು ಇಲ್ಲಿ ಮಸೂದೆಯ ಬಗ್ಗೆ ಚರ್ಚಿಸುತ್ತಿದ್ದೇವೆ, ಹಾಗಾದರೆ ನಿನ್ನೆ ಅದನ್ನು ತಿಳಿಸುವ ಅಗತ್ಯವೇನಿತ್ತು? ಈ ಸದನದ ಬಗ್ಗೆ ನಿಮಗೆ ಗೌರವವೇನು? ಈ ಮೂರು ಮಸೂದೆಗಳು ಮಹಿಳೆಯರಿಗೆ ಮೀಸಲಾತಿಯನ್ನು ಬೆಂಬಲಿಸುತ್ತಿವೆ ಎಂಬಂತೆ ಮರೆಮಾಚಲ್ಪಟ್ಟಿವೆ. ಇದು ಒಕ್ಕೂಟ ರಚನೆಯ ಮೇಲಿನ ಅತಿದೊಡ್ಡ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಲಿಮಿಟೇಷನ್ ವಿರುದ್ಧದ ಡಿಎಂಕೆ ಕಪ್ಪು ಬಾವುಟದ ಪ್ರತಿಭಟನೆಯನ್ನು ಕಾಲಾ ಟಿಕಾ ಎಂದು ಟೀಕಿಸಿದ್ದ ಪ್ರಧಾನಿ ಮೋದಿಯವರಿಗೆ ತಿರುಗೇಟು ನೀಡಿರುವ ಅವರು, ಕಪ್ಪು ಬಣ್ಣವು ಕಾಳಿ ದೇವತೆಯ ಬಣ್ಣವಾಗಿದ್ದು, ತಮಿಳುನಾಡಿನ ಆಡಳಿತ ಪಕ್ಷವು ಈ ವಿಷಯದ ಬಗ್ಗೆ ಕೊನೆಯವರೆಗೂ ಪ್ರತಿಭಟನೆ ನಡೆಸುತ್ತದೆ. ಹಿಂದುತ್ವವನ್ನು ರಕ್ಷಿಸಲು ಇರುವ ಜನರಿಗೆ ಕಪ್ಪು ಬಟ್ಟೆ ಧರಿಸಿದ ಕಪ್ಪು ದೇವತೆ ಕಾಳಿಯನ್ನು ನೆನಪಿಸದಿರುವುದು ಆಶ್ಚರ್ಯ ತಂದಿದೆ. ಕಪ್ಪು ಬಣ್ಣವು ಡಿಎಂಕೆಯ ಬೌದ್ಧಿಕ ನಾಯಕ ಪೆರಿಯಾರ್ ಅವರ ಬಣ್ಣವೂ ಆಗಿದೆ, ಅವರು ಕೊನೆಯವರೆಗೂ ಹೋರಾಡಲು ಕಲಿಸಿದ್ದಾರೆ ಎಂದಿದ್ದಾರೆ.
ದಕ್ಚಿಣ ರಾಜ್ಯಗಳಿಗೆ ತಾರತಮ್ಯ ಮಾಡುವುದಿಲ್ಲ. ಲೋಕಸಭೆಯಲ್ಲಿ ತಮಿಳುನಾಡಿನ ಪ್ರಾತಿನಿಧ್ಯ 39 ರಿಂದ 59 ಕ್ಕೆ ಹೆಚ್ಚಾಗಲಿದೆ. ಅದೇ ರೀತಿಯ ಶೇಕಡಾವಾರು ಪ್ರಮಾಣವನ್ನು ಕಾಯ್ದುಕೊಳ್ಳಲಾಗುವುದು ಎಂದು ಈ ಹಿಂದೆ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಆದಾಗ್ಯೂ ಅವರ ಹೇಳಿಕೆಯೂ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net