ಪಶ್ಚಿಮ ಬಂಗಾಳದಲ್ಲಿ ಇಂದಿನಿಂದ ಬಿಜೆಪಿ ದರ್ಬಾರ್; ರಾಜ್ಯದ ಮೊದಲ ಬಿಜೆಪಿ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣವಚನ | Suvendu Adhikari
ಅಮಿತ್ ಶಾ ಮತ್ತು ಸುವೇಂದು ಅಧಿಕಾರಿ
Published on:
Copied
Follow Us
ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಬಿಜೆಪಿ, ಇಂದು(ಮೇ 09) ರಾಜ್ಯದಲ್ಲಿ ತನ್ನ ಚೊಚ್ಚಲ ಸರ್ಕಾರವನ್ನು ರಚಿಸುತ್ತಿದ್ದು, ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಸುವೇಂದು ಅಧಿಕಾರಿ ಹೆಸರನ್ನು ಸಿಎಂ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಿಸಿದ್ದರು. ಬಳಿಕ ತಡರಾತ್ರಿ ರಾಜ್ಯಪಾರ ಆರ್.ಎನ್.ರವಿ ಭೇಟಿಯಾಗಿದ್ದ ಅಧಿಕಾರಿ, ಸರ್ಕಾರ ರಚಿಸುವ ಹಕ್ಕು ಮಂಡಿಸಿದ್ದರು.
ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಗ್ರೌಂಡ್‌ನಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಇತರ ಎನ್‌ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಇನ್ನೂ ಸಿಎಂ ಅಭ್ಯರ್ಥಿಯಾಗಿ ತಮ್ಮ ಹೆಸರು ಘೋಷಣೆ ಬಳಿಕ ಮಾತನಾಡಿರುವ ಅಧಿಕಾರಿ, ವರ್ಷಗಳ ಕಾಲದ ಹೋರಾಟ ಮತ್ತು ಕಠಿಣ ಪರಿಶ್ರಮಕ್ಕೆ ಇಂದು ಫಲ ಸಿಕ್ಕಿದೆ. ಪಶ್ಚಿಮ ಬಂಗಾಳದಲ್ಲಿ ಇನ್ನು ಮುಂದೆ ಯಾರೂ ಭಯದಲ್ಲಿ ಬದುಕಬೇಕಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿರುವ ಅವರು, ಟಿಎಂಸಿ ಆಡಳಿತದ ಅವಧಿಯಲ್ಲಿ ಹತ್ಯೆಗೀಡಾದ 321 ಬಿಜೆಪಿ ಕಾರ್ಯಕರ್ತರ ಬಲಿದಾನವನ್ನು ನಾನು ಇಂದು ಸ್ಮರಿಸುತ್ತೇನೆ. ಅವರ ತ್ಯಾಗ ವ್ಯರ್ಥವಾಗಲು ನಾವು ಬಿಡುವುದಿಲ್ಲ ಎಂದು ಭಾವುಕರಾಗಿ ನುಡಿದಿದ್ದಾರೆ.
ಮುಂದುವರೆದು, ಸಂದೇಶ್‌ಖಾಲಿ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರು ಯಾರೇ ಆಗಿರಲಿ, ಅವರಿಗೆ ತಕ್ಕ ಶಾಸ್ತಿ ಮಾಡಲಾಗುವುದು. ನಮ್ಮ ಸರ್ಕಾರವು ಜನರ ಭರವಸೆಗಳನ್ನು ಈಡೇರಿಸಲಿದೆ ಎಂದು ಭರವಸೆ ನೀಡಿದ್ದಾರೆ (ಏಜೆನ್ಸೀಸ್).