200 ಕ್ಷೇತ್ರ ಗೆದ್ದರೂ... ಬಂಗಾಳ ಚುನಾವಣೆ ಅಸ್ಸಾಂಗೆ ಮುಖ್ಯ ಏಕೆ..? ಒಳನುಸುಳುವಿಕೆಯ ಡೆಡ್ಲಿ ಸ್ಕೆಚ್ ಬಿಚ್ಚಿಟ್ಟ ಅಸ್ಸಾಂ ಸಿಎಂ ಶರ್ಮಾ | Himanta Biswa Sarma

Himanta Biswa Sarma |
Himanta Biswa Sarma |
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯು ಕೇವಲ ಆ ರಾಜ್ಯಕ್ಕೆ ಮಾತ್ರವಲ್ಲದೆ ಅಸ್ಸಾಂ ಮತ್ತು ಇಡೀ ಈಶಾನ್ಯ ಭಾರತಕ್ಕೂ ಅತ್ಯಂತ ನಿರ್ಣಾಯಕವಾಗಿದ್ದು, ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೂ ಅಚ್ಚರಿ ಪಡಬೇಕಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅಭಿಪ್ರಾಯಪಟ್ಟಿದ್ದಾರೆ.
ಕೋಲ್ಕತ್ತಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರ್ಮಾ, ಬಾಂಗ್ಲಾದೇಶದಿಂದ ಆಗುತ್ತಿರುವ ಒಳನುಸುಳುವಿಕೆಯನ್ನು ತಡೆಯದಿದ್ದರೆ ಮುಂದಿನ ಎರಡು ದಶಕಗಳಲ್ಲಿ ಅಸ್ಸಾಂ ಮತ್ತು ಬಂಗಾಳದಲ್ಲಿ ಹಿಂದೂಗಳು ಬಹುಮತವನ್ನು ಕಳೆದುಕೊಳ್ಳಲಿದ್ದಾರೆ, ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದ್ದು, ಮೊದಲ ಹಂತದ ಮತದಾನದ ಬಳಿಕ ವಾತಾವರಣ ಸಂಪೂರ್ಣ ಬದಲಾಗಿದೆ ಎಂದರು.

ಟಿಎಂಸಿ ವಿರುದ್ಧ ಗಂಭೀರ ಆರೋಪ

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರವು ಕೇವಲ ವೋಟ್​​ಬ್ಯಾಂಕ್ ರಾಜಕೀಯಕ್ಕಾಗಿ ಒಳನುಸುಳುವಿಕೆಯನ್ನು ಬೆಂಬಲಿಸುತ್ತಿದ್ದು, ಬಾಂಗ್ಲಾದೇಶ ಗಡಿಯಲ್ಲಿ ಬೇಲಿ ಹಾಕಲು ಬಿಎಸ್‌ಎಫ್‌ಗೆ ಟಿಎಂಸಿ ಸರ್ಕಾರ ಭೂಮಿಯನ್ನೇ ಒದಗಿಸುತ್ತಿಲ್ಲ. ಈ ಒಳನುಸುಳುವಿಕೆಯನ್ನು ಈಗಲೇ ನಿಲ್ಲಿಸದಿದ್ದರೆ, ಭಾರತದ ಪೂರ್ವ ಭಾಗವು ಬಾಂಗ್ಲಾದೇಶದ ಭಾಗವಾದಂತೆ ಭಾಸವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಜನಸಂಖ್ಯಾ ಬದಲಾವಣೆಗಳನ್ನು ಒಮ್ಮೆ ಅನುಮತಿಸಿದರೆ ಅದನ್ನು ಮತ್ತೆ ಸರಿಪಡಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿರುವ ಶರ್ಮಾ, ಅಸ್ಸಾಂನಲ್ಲಿ ಈಗ ಶೇ. 60ರಷ್ಟು ಹಿಂದೂಗಳು ಮತ್ತು ಶೇ. 40ರಷ್ಟು ಮುಸ್ಲಿಮರಿದ್ದಾರೆ. ಒಳನುಸುಳುವಿಕೆ ಹೀಗೆಯೇ ಮುಂದುವರಿದರೆ ಅಸ್ಸಾಂ ಮೊದಲು ಪತನಗೊಳ್ಳುತ್ತದೆ, ನಂತರ ಬಂಗಾಳ, ಬಿಹಾರ ಮತ್ತು ಜಾರ್ಖಂಡ್‌ಗಳಿಗೆ ಇದು ಹರಡುತ್ತದೆ. ಭಾರತವನ್ನು ಸುರಕ್ಷಿತವಾಗಿಡಲು ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಐದು ರಾಜ್ಯಗಳೊಂದಿಗೆ ಬಾಂಗ್ಲಾದೇಶ ಗಡಿ ಹಂಚಿಕೊಂಡಿದ್ದು, ಯಾವುದೇ ಒಂದು ರಾಜ್ಯದ ಗಡಿ ತೆರೆದಿದ್ದರೂ ಅದು ಇಡೀ ಈಶಾನ್ಯ ಭಾರತದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಬಂಗಾಳದ ಮತದಾರರು ಎರಡನೇ ಹಂತದ ಮತದಾನದಲ್ಲಿ ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಚುನಾವಣಾ ಯಾವಾಗ..?

ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆದಿದ್ದರೆ, ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 23 ರಂದು ಮುಕ್ತಾಯಗೊಂಡಿದೆ. ಏಪ್ರಿಲ್ 29 ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net