ರಿಸಲ್ಟ್ ಬಂದು ತಿಂಗಳ ಬಳಿಕ ಎಂ.ಕೆ.ಸ್ಟಾಲಿನ್ ಸೋಲು ನೆನೆದು ಕಣ್ಣೀರಾಕಿದ ಬಾಹುಬಲಿಯ ಕಟ್ಟಪ್ಪ | Kattappa
ಎಂ.ಕೆ.ಸ್ಟಾಲಿನ್ ಮತ್ತು ಸತ್ಯರಾಜ್
Published on:
Copied
Follow Us
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶ ಬಂದು, ಒಂದು ತಿಂಗಳಾದ ಬಳಿಕ ತಮಿಳಿನ ಖ್ಯಾತ ನಟ ಬಾಹುಬಲಿ ಸಿನಿಮಾ ಖ್ಯಾತಿಯ ಕಟ್ಟಪ್ಪ(Kattappa) ಅಲಿಯಾಸ್ ಸತ್ಯರಾಜ್ ಅವರು, ಡಿಎಂಕೆ ಮುಖ್ಯಸ್ಥ ಮತ್ತು ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ ಸೋಲು ನೆನೆದು ಕಣ್ಣೀರಾಕಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದ ದಳಪತಿ ವಿಜಯ್ ನೇತೃತ್ವದ ಟಿವಿಕೆ ಹೊಡೆತದಿಂದ, ಆಡಳಿತ ಮಾಡ್ತಿದ್ದ ಡಿಎಂಕೆ ಸೋತಿದ್ದು, ಸ್ವತಃ ಮುಖ್ಯಮಂತ್ರಿಯಾಗಿದ್ದ ಎಂ.ಕೆ.ಸ್ಟಾಲಿನ್ ಅವರು ತಮ್ಮ ಚೆನ್ನೈನ ಕೊಳತ್ತೂರು ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದರು.
ಇತ್ತೀಚೆಗೆ ನಡೆದ ತಮಿಳುನಾಡು ಮಾಜಿ ಸಿಎಂ ಎಂ.ಕರುಣಾನಿಧಿ ಅವರ 103ನೇ ಜನ್ಮ ದಿನಾಚರಣೆಯ ಅಂಗವಾಗಿ ಡಿಎಂಕೆ ಕೊಳತ್ತೂರಿನಲ್ಲಿ ಸಾರ್ವಜನಿಕ ಸಭೆ ಆಯೋಜಿಸಿತ್ತು. ಡಿಎಂಕೆ ಬೆಂಬಲಿಗರಾದ ಸತ್ಯರಾಜ್ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಸ್ಟಾಲಿನ್ ಸೋಲಿಸಿದ್ದಕ್ಕೆ ಕೊಳತ್ತೂರಿನ ಜನರ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, 1967ಕ್ಕಿಂತ ಮೊದಲು ತಮಿಳುನಾಡನ್ನು ಶ್ರೀಮಂತರು ಆಳುತ್ತಿದ್ದರು. ಕಾಮರಾಜ್ ಬಡವರ ಪಾಲುದಾರರಾಗಿದ್ದರು. ಆದರೆ ಅಧಿಕಾರದಲ್ಲಿದ್ದವರೆಲ್ಲರೂ ಶ್ರೀಮಂತರು. ಅಣ್ಣಾ ಅಧಿಕಾರಕ್ಕೆ ಬಂದ ನಂತರವೇ ತಮಿಳುನಾಡು ಬೆಳೆಯಿತು ಎಂದು ಹೇಳಿದ್ದಾರೆ.
ನಾನು ಪೆರಿಯಾರ್ ಅವರ ದ್ರಾವಿಡ ಸಿದ್ಧಾಂತದ ಬೆಂಬಲಿಗ. ಡಿಎಂಕೆ ಸದಸ್ಯ. ಕೊಳತ್ತೂರಿನಲ್ಲಿ ಎಂ.ಕೆ. ಸ್ಟಾಲಿನ್ ಗೆಲ್ಲಬೇಕಿತ್ತು. ಇದು ಕಷ್ಟ. ನಾನು ಎಲ್ಲವನ್ನೂ ಹಾಸ್ಯವಾಗಿ ತೆಗೆದುಕೊಳ್ತೇನೆ. ಆದರೆ ಈ ಸೋಲು ನನಗೆ ತಡೆದುಕೊಳ್ಳಲಾಗ್ತಿಲ್ಲ ಎಂದು ವೇದಿಕೆಯಲ್ಲಿಯೇ ಕಣ್ಣೀರಾಕಿದ್ದಾರೆ.
ನಾವು ಎಂತಹ ನಾಯಕನನ್ನು ಸೋಲಿಸಿದ್ದೇವೆ ಎಂದು ಈ ಕ್ಷೇತ್ರದ ಜನ ಮರುಗುವ ಕಾಲ ಬರುತ್ತದೆ. ಅಣ್ಣಾ ಮತ್ತು ಕರುಣಾನಿಧಿಯವರ ಮಾದರಿಯಲ್ಲಿ ಸ್ಟಾಲಿನ್ ಅವರು ಆಡಳಿತ ನೀಡಿದ್ದರು. ಇಂದು ನನ್ನ ಮಾತಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಟಿವಿಕೆ ಬೆಂಬಲಿಗರು ಟೀಕಿಸಬಹುದು, ಆದರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ (ಏಜೆನ್ಸೀಸ್).