ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಸಚಿವರೊಬ್ಬರೇ ‘ನಾನು ಲಂಚ ಕೊಟ್ಟಿದ್ದೇನೆ’ ಎಂದು ಹೇಳಿರುವುದು ಇದೀಗ ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಹಣಕಾಸು ಸಚಿವ ಎನ್.ಮೇರಿ ವಿಲ್ಸನ್, ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲಿ ತಮ್ಮ ಸಂಸ್ಥೆಗಳಿಗೆ ಅನುಮತಿ ಪಡೆಯಲು ಶಾಲಾ ಶಿಕ್ಷಣ ಇಲಾಖೆಗೆ ಭಾರೀ ಮೊತ್ತದ ಲಂಚ ನೀಡಬೇಕಾಯಿತು ಎಂದು ಆರೋಪಿಸಿದ್ದಾರೆ.
ಇನ್ನು, ವಿಧಾನಸಭೆಯಲ್ಲಿ ಮಾತನಾಡಿದ ವಿಲ್ಸನ್, ತಮ್ಮ ಆರೋಪದ ಬಗ್ಗೆ ತನಿಖೆ ನಡೆಸಿದರೆ ಎಲ್ಲವನ್ನೂ ಹೇಳಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ‘ನಾನೇ ಸಾಕ್ಷಿ, ನಾನೇ ಎವಿಡೆನ್ಸ್. ತನಿಖೆ ಎದುರಿಸಲು ನಾನು ಸಿದ್ಧ’ ಎಂದು ಸಚಿವರು ಹೇಳಿದ್ದು, ಸದನದಲ್ಲಿ ಹೊಸ ರಾಜಕೀಯ ಕಿಚ್ಚು ಹೊತ್ತಿಸಿದೆ.
ಮಾಜಿ ಸಚಿವರಿಗೆ ವಿಲ್ಸನ್ ಸವಾಲ್
ಹಿಂದಿನ ಡಿಎಂಕೆ ಸರ್ಕಾರದಲ್ಲಿ ಶಾಲಾ ಶಿಕ್ಷಣ ಸಚಿವರಾಗಿದ್ದ ಅನ್ಬಿಲ್ ಮಹೇಶ್ ಪೊಯ್ಯಾಮೊಳಿ ಅವರಿಗೆ ವಿಲ್ಸನ್ ನೇರ ಸವಾಲು ಹಾಕಿದ್ದಾರೆ. ಟಿ.ನಗರದ ‘ಗ್ಲೋಬಲ್’ ಎಂಬ ಸ್ಥಳದಲ್ಲಿ ಹಣ ಪಾವತಿಸಲಾಗಿದೆ ಎಂದು ಆರೋಪಿಸಿದ ಅವರು, ಎಷ್ಟು ಹಣ ನೀಡಬೇಕಾಯಿತು ಎಂಬುದನ್ನೂ ಬಹಿರಂಗಪಡಿಸುವುದಾಗಿ ಹೇಳಿದ್ದಾರೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನೀಡುವ ವಿಚಾರದಲ್ಲಿ ಹಣ ಪಡೆದಿರುವ ಬಗ್ಗೆ ವಿವರ ನೀಡಬಹುದು ಎಂದು ವಿಲ್ಸನ್ ಸದನದಲ್ಲೇ ಹೇಳಿದ್ದಾರೆ.
ಸಚಿವರನ್ನೇ ವಿಚಾರಿಸಿ ಎಂದ ಡಿಎಂಕೆ
ವಿಲ್ಸನ್ ಆರೋಪಕ್ಕೆ ಮಾಜಿ ಸಚಿವ ಅನ್ಬಿಲ್ ಮಹೇಶ್ ತಿರುಗೇಟು ನೀಡಿದ್ದಾರೆ. ಒಬ್ಬ ಸಚಿವರೇ ವಿಧಾನಸಭೆಯಲ್ಲಿ ಲಂಚ ನೀಡಿರುವುದಾಗಿ ಹೇಳಿರುವುದು ಗಂಭೀರ ವಿಚಾರವಾಗಿದ್ದು, ತಕ್ಷಣ ಡಿವಿಎಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಸಚಿವರು ಲಂಚ ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅವರು ಯಾರಿಗೆ ಎಷ್ಟು ಹಣ ಕೊಟ್ಟರು ಅನ್ನೋದನ್ನು ಮೊದಲು ಡಿವಿಎಸಿ ವಿಚಾರಿಸಲಿ’ ಎಂದು ಮಹೇಶ್ ಹೇಳಿದ್ದಾರೆ.
ವಿಸಲ್‌ಬ್ಲೋವರ್ ಎಂದ ಆರೋಗ್ಯ ಸಚಿವ
ಇತ್ತ ತಮಿಳುನಾಡು ಆರೋಗ್ಯ ಸಚಿವ ಕೆ.ಜಿ. ಅರುಣ್‌ರಾಜ್ ಅವರು ವಿಲ್ಸನ್ ಪರ ಬ್ಯಾಟ್ ಬೀಸಿದ್ದಾರೆ. ಲಂಚದ ವಿಚಾರವನ್ನು ಬಹಿರಂಗಪಡಿಸಿರುವ ವಿಲ್ಸನ್ ಅವರನ್ನು ‘ವಿಸಲ್‌ಬ್ಲೋವರ್’ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಆದರೆ ಬಿಜೆಪಿ ಮಾತ್ರ ಸರ್ಕಾರದ ವಿರುದ್ಧ ಮತ್ತೊಂದು ಒತ್ತಡ ಹಾಕಿದೆ. ಲಂಚ ಕೊಡುವುದೂ ಅಪರಾಧ, ಪಡೆಯುವುದೂ ಅಪರಾಧ. ಆರೋಪ ನಿಜವಾಗಿದ್ದರೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಒತ್ತಾಯಿಸಿದ್ದಾರೆ.
ವಿರೋಧ ಪಕ್ಷಗಳು ಆರೋಪಕ್ಕೆ ಸಾಕ್ಷ್ಯ ನೀಡುವಂತೆ ಒತ್ತಾಯಿಸಿದರೂ, ವಿಲ್ಸನ್ ತಮ್ಮ ಹೇಳಿಕೆಯಿಂದ ಹಿಂದೆ ಸರಿಯಲ್ಲ ಎಂದಿದ್ದಾರೆ. ಹೀಗಾಗಿ ವಿಧಾನಸಭೆಯಲ್ಲಿ ಸಚಿವರ ಲಂಚದ ಆರೋಪ ಇದೀಗ ತಮಿಳುನಾಡಿನ ರಾಜಕೀಯದಲ್ಲಿ ವಿವಾದವಾಗಿ ಮಾರ್ಪಟ್ಟಿದೆ,(ಏಜೆನ್ಸೀಸ್).