ಗ್ರೇಟ್ ನಿಕೋಬಾರ್ ಯೋಜನೆಯ ಗೌಪ್ಯ ಕಡತಗಳ ಸೋರಿಕೆ ಆರೋಪ: ಒಂದೇ ದಿನ ಮೂವರು ಅಧಿಕಾರಿಗಳನ್ನು ವಜಾಗೊಳಿಸಿದ ಕೇಂದ್ರ | dismisses

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದರ್ ಯಾದವ್
ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದರ್ ಯಾದವ್
Published on: 
ನವದೆಹಲಿ: ಗ್ರೇಟ್ ನಿಕೋಬಾರ್ ಮೆಗಾ ಯೋಜನೆಗೆ ಸಂಬಂಧಿಸಿದ ಗೌಪ್ಯ ಕಡತಗಳ ಸೋರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಸಚಿವಾಲಯದಲ್ಲಿದ್ದ ಮೂವರು ಹಿರಿಯ ಪ್ರಮುಖ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಒಂದೇ ದಿನದಲ್ಲಿ ವಜಾಗೊಳಿಸಿದೆ(dismisses) ಎಂದು ಮಂಗಳವಾರ(ಜು. 07) ವರದಿಯಾಗಿದೆ.
ಗ್ರೇಟ್ ನಿಕೋಬಾರ್ ಮೆಗಾ ಯೋಜನೆಗೆ ಸಂಬಂಧಿಸಿದ ಗೌಪ್ಯ ಕಡತಗಳ ಸೋರಿಕೆಯ ಬಗ್ಗೆ ಪ್ರಧಾನಿ ಕಚೇರಿ ಗಂಭೀರವಾಗಿ ಪರಿಗಣಿಸಿದ್ದು, ಪರಿಸರಕ್ಕೆ ಸಂಬಂಧಪಟ್ಟ ವರದಿಗಳು ಕೇಂದ್ರ ಪರಿಸರ ಸಚಿವರ ವೈಯಕ್ತಿಕ ಸಿಬ್ಬಂದಿಯಿಂದ ಸೋರಿಕೆಯಾಗಿವೆ ಎಂದು ಗುಪ್ತಚರ ಬ್ಯೂರೋ ಗುರುತಿಸಿದೆ ಎನ್ನಲಾಗಿದೆ.
ಈ ಹಿನ್ನೆಲೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರ ಆಪ್ತ ಕಾರ್ಯದರ್ಶಿ ಅಮರ್ ಸಿಂಗ್ ಅವರನ್ನು , ಆಡಳಿತಾತ್ಮಕ ಆಧಾರದ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಅವರ ಕರ್ತವ್ಯಗಳಿಂದ ವಜಾಗೊಳಿಸಿ, ಅವರನ್ನು ಮಾತೃ ಸಂಸ್ಥೆಯಾದ ಕಂದಾಯ ಇಲಾಖೆಗೆ ಕಳುಹಿಸಿದೆ. ಅಮರ್ ಸಿಂಗ್​ 2010ರ ಬ್ಯಾಚ್ ಐಎಎಸ್​ ಅಧಿಕಾರಿಯಾಗಿದ್ದಾರೆ.
ಹಾಗೆಯೇ ಕೇಂದ್ರ ಪರಿಸರ ಸಚಿವರ ಹೆಚ್ಚುವರಿ ಖಾಸಗಿ ಕಾರ್ಯದರ್ಶಿಗಳಾದ ಆಯುಷ್ ಶರಣ್ ಮತ್ತು ಶೈಲೇಶ್ ಕುಮಾರ್ ಸಿಂಗ್ ಅವರನ್ನೂ ಅಮಾನತುಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಮತ್ತು , ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸುವ ಮತ್ತು ಇಲಾಖೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ (ಏಜೆನ್ಸೀಸ್).