ಚಿನ್ನದ ಗಣಿಗಾರಿಕೆಯಲ್ಲಿ ಹೂಡಿಕೆ ಮಾಡಿ, 5 ವರ್ಷಗಳ ತೆರಿಗೆ ವಿನಾಯಿತಿ ಕೋಡುತ್ತೇವೆ: ಭಾರತಕ್ಕೆ ಆಹ್ವಾನ ನೀಡಿದ ಅಫ್ಘಾನ್ | ​ gold mining

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ಅಫ್ಘಾನಿಸ್ತಾನದಲ್ಲಿರುವ ಹಲವಾರು ವಲಯಗಳಲ್ಲಿ ಭಾರತ ಹೂಡಿಕೆ ಮಾಡಬೇಕು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಅಲ್ಹಾಜ್ ನೂರುದ್ದೀನ್ ಅಜೀಜ್ ಕೋರಿದ್ದಾರೆ. ಅಲ್ಲದೆ, ಚಿನ್ನದ ಗಣಿಗಾರಿಕೆ(​Gold Mining) ಸೇರಿದಂತೆ ಹೊಸ ವಲಯಗಳಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಐದು ವರ್ಷಗಳ ತೆರಿಗೆ ವಿನಾಯಿತಿ ನೀಡಲು ತಮ್ಮ ಸರ್ಕಾರ ಸಿದ್ಧವಾಗಿದೆ ಎಂದಿದ್ದಾರೆ.
ಈ ಬಗ್ಗೆ ಅಸ್ಸೋಚಾಮ್ ಆಯೋಜಿಸಿದ್ದ ಸಂವಾದದಾತ್ಮಕ ಅಧಿವೇಶನದಲ್ಲಿ ಮಾತನಾಡಿದ ಅಜೀಜ್, ಪಾಕಿಸ್ತಾನದೊಂದಿಗಿನ ಉದ್ವಿಗ್ನತೆಯು ವ್ಯಾಪಾರ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಅಲ್ಲದೆ, ಹೂಡಿಕೆಗಾಗಿ ಯಂತ್ರೋಪಕರಣಗಳನ್ನು ಆಮದು ಮಾಡಿಕೊಳ್ಳುವ ಭಾರತೀಯ ಕಂಪನಿಗಳಿಗೆ ಕೇವಲ ಶೇ 1 ರಷ್ಟು ಸುಂಕವನ್ನು ವಿಧಿಸಲಾಗುವುದು ಎಂದು ಅಜೀಜ್ ಭರವಸೆ ನೀಡಿದ್ದಾರೆ.
ಭಾರತಕ್ಕೆ ಆರು ದಿನಗಳ ಭೇಟಿ ನೀಡಿರುವ ಅಫ್ಘಾನಿಸ್ತಾನ ಸಚಿವ ಅಜೀಜ್, ಅಫ್ಘಾನಿಸ್ತಾನವು ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ. ಅಲ್ಲಿ ನಿಮಗೆ ಹೆಚ್ಚಿನ ಸ್ಪರ್ಧಿಗಳು ಸಿಗುವುದಿಲ್ಲ ಎಂದು ಹೇಳುವ ಮೂಲಕ ಹೂಡಿಕೆಗೆ ಆಹ್ವಾನ ನೀಡಿದರು. ಹೂಡಿಕೆ ಮಾಡುವ ಕಂಪನಿಗಳಿಗೆ ಸುಂಕ ಬೆಂಬಲ ಮತ್ತು ಭೂಮಿಯನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಚಿನ್ನದ ಗಣಿಗಾರಿಕೆ ರಿಯಾಯಿತಿಗಳು

ಇದಲ್ಲದೆ, ಹೊಸ ವಲಯಗಳಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಐದು ವರ್ಷಗಳ ತೆರಿಗೆ ವಿನಾಯಿತಿ ಸಿಗುತ್ತದೆ. ಭಾರತೀಯ ಕಂಪನಿಗಳು ಹೂಡಿಕೆಗಾಗಿ ಯಂತ್ರೋಪಕರಣಗಳನ್ನು ಆಮದು ಮಾಡಿಕೊಂಡರೆ, ಕೇವಲ ಒಂದು ಪ್ರತಿಶತ ಸುಂಕವನ್ನು ವಿಧಿಸಲಾಗುತ್ತದೆ ಎಂದು ಅಜೀಜ್ ಹೇಳಿದ್ದಾರೆ.
ಚಿನ್ನದ ಗಣಿಗಾರಿಕೆಗೆ ಖಂಡಿತವಾಗಿಯೂ ತಾಂತ್ರಿಕ ಮತ್ತು ವೃತ್ತಿಪರ ತಂಡಗಳು ಮತ್ತು ವೃತ್ತಿಪರ ಕಂಪನಿಗಳು ಬೇಕಾಗುತ್ತವೆ. ಅಲ್ಲದೆ, ಉದ್ಯೋಗಗಳನ್ನು ಸೃಷ್ಟಿಸಲು ದೇಶದೊಳಗೆ ಸಂಸ್ಕರಣೆ ನಡೆಯಬೇಕು ಎಂದು ಅಫ್ಘಾನ್​ ಸಚಿವರು ಸಲಹೆ ನೀಡಿದ್ದಾರೆ.

ವ್ಯವಹಾರದಲ್ಲಿನ ಸಮಸ್ಯೆಗಳು

ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸಲು ಸಣ್ಣ ಅಡೆತಡೆಗಳನ್ನು ತೆಗೆದುಹಾಕುವಂತೆ ಅಜೀಜ್ ಭಾರತವನ್ನು ಒತ್ತಾಯಿಸಿದ್ದಾರೆ. ನಾವು ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಸಂಬಂಧವನ್ನು ಸುಧಾರಿಸಲು ಬಯಸುತ್ತೇವೆ ಎಂದು ಭಾರತೀಯ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ತಿಳಿಸಿದರು.
ವೀಸಾಗಳು, ಏರ್ ಕಾರಿಡಾರ್‌ಗಳು, ಬ್ಯಾಂಕಿಂಗ್ ವಹಿವಾಟುಗಳಂತಹ ಕೆಲವು ಸಣ್ಣ ಅಡೆತಡೆಗಳು ಒಟ್ಟಾರೆ ಪ್ರಕ್ರಿಯೆಯ ಮೇಲೆ ನಿಜವಾಗಿಯೂ ಪರಿಣಾಮ ಬೀರುತ್ತವೆ. ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಸುಧಾರಿಸಲು ಇವುಗಳನ್ನು ಪರಿಹರಿಸಬೇಕಾಗಿದೆ ಎಂದು ಅಜೀಜ್ ಒತ್ತಾಯಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net