ಶೇ.90ರಷ್ಟು ಮಹಿಳೆಯರ ರಾಜಕೀಯ ಜೀವನ ನಾಯಕರ ಕೋಣೆಯಿಂದಲೇ ಆರಂಭ! : ಕಿಡಿ ಹೊತ್ತಿಸಿದ ಪಪ್ಪು ಯಾದವ್ ಹೇಳಿಕೆ | Pappu Yadav

ಸಂಸದ ಪಪ್ಪು ಯಾದವ್
ಸಂಸದ ಪಪ್ಪು ಯಾದವ್
Published on
ಪಾಟ್ನಾ: ಶೇ. 90ರಷ್ಟು ಮಹಿಳೆಯರ ರಾಜಕೀಯ ಜೀವನ ನಾಯಕರ ಕೋಣೆಯಿಂದಲೇ ಆರಂಭವಾಗುತ್ತದೆ, ಅಲ್ಲಿ ಸ್ವಲ್ಪ ಸಮಯ ಕಳೆಯದೇ ಹೆಚ್ಚಿನ ಮಹಿಳೆಯರು ರಾಜಕೀಯದಲ್ಲಿರಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಬಿಹಾರ ಪೂರ್ಣಿಯಾ ಕ್ಷೇತ್ರದ ಪಕ್ಷೇತರ ಸಂಸದ ಪಪ್ಪು ಯಾದವ್(Pappu Yadav) ತೀವ್ರ ವಿವಾದಕೀಡಾಗಿದ್ದಾರೆ. 
ಕಳೆದ ವಾರ ಲೋಕಸಭೆಯಲ್ಲಿ ಅಂಗೀಕರವಾಗದ ಮಹಿಳಾ ಮೀಸಲಾತಿ ಮಸೂದೆ ಕುರಿತು ಮಾತನಾಡಿರುವ ಅವರು, ಮಸೂದೆಯನ್ನು ಕ್ಷೇತ್ರ ಪುನರ್ವಿಂಗಡಣೆ ಜೊತೆ ಲಿಂಕ್ ಮಾಡಿದ್ದರಿಂದ ಪ್ರತಿಪಕ್ಷಗಳನ್ನು ಬಿಲ್​ ಅನ್ನು ವಿರೋಧಿಸಿದವು. ಆದರೆ ಇದೇ ವೇಳೆ ಹೆಚ್ಚಿನ ಪುರುಷ ರಾಜಕಾರಣಿಗಳು ರಣಹದ್ದುಗಳು ಎಂದು ಅವರು ಬಣ್ಣಿಸಿದ್ದಾರೆ.
ಮಹಿಳೆಯರ ಮೇಲೆ ಹೆಚ್ಚಾಗಿ ದೇಶಿ ಹಿಂಸಾಚಾರ ಮಾಡುವವರು ಯಾರು?, ಅವರ ಮೇಲೆ ಕೆಟ್ಟ ಕಣ್ಣಿ ಇಡುವವರು ಯಾರು? ಅಮೆರಿಕದಿಂದ ಭಾರತದವರೆಗೆ ಎಲ್ಲರೂ ರಾಜಕಾರಣಿಗಳೇ ಎಂದು ಆರೋಪಿಸಿದ್ದಾರೆ. ಮುಂದುವರೆದು ರಾಜಕಾರಣಿಗಳ ಕೊಠಡಿಯಲ್ಲಿ ಸಮಯ ಕಳೆಯದೇ ಶೇ. 90 ರಷ್ಟು ಮಹಿಳೆಯರು ರಾಜಕೀಯದಲ್ಲಿ ಇರಲು ಸಾಧ್ಯವಿಲ್ಲ. ಇದು ಪ್ರತಿದಿನ ನಡೆಯುತ್ತಿದೆ. ರಾಜಕಾರಣಿಗಳ ಸಿಸಿಟಿವಿ ದೃಶ್ಯಾವಳಿಗಳು ಪ್ರತಿದಿನ ಮುನ್ನೆಲೆಗೆ ಬರುತ್ತವೆ. ಮಹಿಳೆಯರನ್ನು ಶೋಷಿಸುವುದು ಈಗ ಒಂದು ಸಂಸ್ಕೃತಿಯಾಗಿದೆ ಎಂದು ಹೇಳಿದ್ದಾರೆ.

ಪಪ್ಪು ಯಾದವ್ ಹೇಳಿಕೆ ವಿರುದ್ಧ ಬಿಜೆಪಿ ಕಿಡಿ

ಮಹಿಳೆಯರ ರಾಜಕೀಯ ಜೀವನ ಕುರಿತು ವಿವಾದಾತ್ಮಕವಾಗಿ ಮಾತನಾಡಿರುವ ಪಪ್ಪು ಯಾದವ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಈ ನೀಚ ಹೇಳಿಕೆ ವಿರೋಧ ಪಕ್ಷದ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ. 
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ತಾವು ಮಹಿಳಾ ವಿರೋಧಿಗಳು ಎಂದು ಮತ್ತೊಮ್ಮೆ ತೋರಿಸಿವೆ. ಅವರು ಮಹಿಳಾ ಮೀಸಲಾತಿಯ ವಿರುದ್ಧ ಮತ ಚಲಾಯಿಸಿದ್ದಾರೆ ಮಾತ್ರವಲ್ಲ, ರಾಹುಲ್ ಗಾಂಧಿಗೆ ತುಂಬಾ ಹತ್ತಿರವಾಗಿರುವ ಮತ್ತು ಕಾಂಗ್ರೆಸ್ ಅನ್ನು ಬೆಂಬಲಿಸುವ ಪಪ್ಪು ಯಾದವ್, ರಾಜಕೀಯದಲ್ಲಿ ಮಹಿಳೆಯರ ಬಗ್ಗೆ ಅತ್ಯಂತ ಅವಹೇಳನಕಾರಿ, ಸ್ತ್ರೀದ್ವೇಷಿ ಹಾಗೂ ನೀಚ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜಕೀಯದಲ್ಲಿರುವ 90% ಮಹಿಳೆಯರು ಪುರುಷರ ಕೋಣೆಗೆ ಹೋಗದೆ ರಾಜಕೀಯ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಇದು ಅತ್ಯಂತ ಅಸಹ್ಯಕರವಾದ ಕಾಮೆಂಟ್. ಈ ಹಿಂದೆ ಲಡ್ಕಿ ಹೂಂ ಲಡ್ ಸಕ್ತಿ ಹೂಂ(ನಾನು ಹುಡುಗಿ, ನಾನು ಹೋರಾಡಬಲ್ಲೆ)  ಹೇಳಿದ್ದ ಪ್ರಿಯಾಂಕಾ ಗಾಂಧಿಯವರು ಈ ಹೇಳಿಕೆ ಬಗ್ಗೆ ಯಾಕೆ ಮೌನವಹಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನೋಟಿಸ್ ನೀಡಿದ ಮಹಿಳಾ ಆಯೋಗ

ಇನ್ನೂ ಪಪ್ಪು ಯಾದವ್ ಅವರ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ರಾಜಕೀಯದಲ್ಲೂ ಬಿರುಗಾಳಿ ಎಬ್ಬಿಸಿದೆ. ಈ ಬಗ್ಗೆ ಬಿಹಾರ ರಾಜ್ಯ ಮಹಿಳಾ ಆಯೋಗವು ಯಾದವ್ ಅವರಿಗೆ ಹೇಳಿಕೆ ಸಂಬಂಧ ನೋಟಿಸ್ ಜಾರಿ ಮಾಡಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net