ಭಾರತ-ಥೈಲ್ಯಾಂಡ್ ದೋಸ್ತಿಗೆ 2000 ವರ್ಷಗಳ ಇತಿಹಾಸ: ಉತ್ಖನನದಲ್ಲಿ ಪತ್ತೆಯಾಯ್ತು ಬ್ರಾಹ್ಮಿ ಲಿಪಿ ಇರುವ ಬಂಗಾರದ ಉಂಗುರ! Gold Ring with Brahmi Script
ಥೈಲ್ಯಾಂಡ್ ಉತ್ಖನನದಲ್ಲಿ ಸಿಕ್ಕ 2000 ವರ್ಷ ಹಳೆಯ ಚಿನ್ನದ ಉಂಗುರದಲ್ಲಿ ಭಾರತದ ಬ್ರಾಹ್ಮಿ ಲಿಪಿ ಪತ್ತೆ!
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಥೈಲ್ಯಾಂಡ್ ಉತ್ಖನನದಲ್ಲಿ ಸಿಕ್ಕ 2000 ವರ್ಷ ಹಳೆಯ ಚಿನ್ನದ ಉಂಗುರದಲ್ಲಿ ಭಾರತದ ಬ್ರಾಹ್ಮಿ ಲಿಪಿ ಪತ್ತೆ!
ಭಾರತ-ಥೈಲ್ಯಾಂಡ್ ನಡುವಿನ ಪ್ರಾಚೀನ ಸಂಬಂಧದ ರೋಚಕ ಇತಿಹಾಸ
ಹರಪ್ಪಾ ಸಂಸ್ಕೃತಿಯ ರಾಖಿಗಢಿ ಅಸ್ಥಿಪಂಜರದ ರಹಸ್ಯ
ಥೈಲ್ಯಾಂಡ್: ಇತಿಹಾಸ ಮತ್ತು ಪುರಾತತ್ವ ಇಲಾಖೆಯ ಸಂಶೋಧನೆಗಳು ಯಾವಾಗಲೂ ಕುತೂಹಲ ಕೆರಳಿಸುತ್ತವೆ. ಈಗ ಇಂತಹದ್ದೇ ಒಂದು ರೋಮಾಂಚನಕಾರಿ ಸುದ್ದಿ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪಶ್ಚಿಮ ಥೈಲ್ಯಾಂಡ್‌ನಲ್ಲಿ ಇತ್ತೀಚೆಗೆ ನಡೆದ ಉತ್ಖನನದಲ್ಲಿ ಸುಮಾರು 2,000 ವರ್ಷಗಳಷ್ಟು ಹಳೆಯದಾದ ಎರಡು ಅಪರೂಪದ ಚಿನ್ನದ ಉಂಗುರಗಳು ಪತ್ತೆಯಾಗಿವೆ.
ಪತ್ತೆಯಾದ ಎರಡು ಉಂಗುರಗಳಲ್ಲಿ ಒಂದು ಉಂಗುರದ ಮೇಲೆ ಪ್ರಾಚೀನ ಭಾರತೀಯ ಲಿಪಿಯಾದ ಬ್ರಾಹ್ಮಿ ಲಿಪಿ (Gold Ring with Brahmi Script) ಯಲ್ಲಿ ಅಕ್ಷರಗಳನ್ನು ಕೆತ್ತಲಾಗಿದೆ. ಈ ಆವಿಷ್ಕಾರವು ಭಾರತ ಮತ್ತು ಥೈಲ್ಯಾಂಡ್ ನಡುವೆ ಶತಶತಮಾನಗಳ ಹಿಂದೆಯೇ ಇದ್ದ ಆಳವಾದ ಸಂಬಂಧವನ್ನು ಬಿಚ್ಚಿಟ್ಟಿದೆ.
ಥೈಲ್ಯಾಂಡ್‌ನ ಫೆಟ್ಚಾಬುರಿ ಪ್ರಾಂತ್ಯದ ಡಾನ್ ಯೈ ಥಾಂಗ್ ಎಂಬ ಪುರಾತತ್ವ ಸ್ಥಳದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಉತ್ಖನನ ನಡೆಯುತ್ತಿದೆ. ಇತ್ತೀಚೆಗೆ ಅಲ್ಲಿ ಪತ್ತೆಯಾದ ಹಳೆಯ ಮಾನವ ಅಸ್ಥಿಪಂಜರದ ಅವಶೇಷಗಳ ಜೊತೆಗೆ ಈ ಚಿನ್ನದ ಉಂಗುರಗಳು ಸಿಕ್ಕಿವೆ ಎಂದು ಥೈಲ್ಯಾಂಡ್‌ನ ಲಲಿತಕಲಾ ಇಲಾಖೆ ತಿಳಿಸಿದೆ.
ಇವುಗಳಲ್ಲಿ ಒಂದು ಉಂಗುರವು ಯಾವುದೇ ವಿನ್ಯಾಸವಿಲ್ಲದೆ ತೀರಾ ಸರಳವಾಗಿದೆ. ಆದರೆ, ಎರಡನೇ ಉಂಗುರದ ಮೇಲೆ ಭಾರತದ ಅತ್ಯಂತ ಪ್ರಾಚೀನ ಬರವಣಿಗೆ ಶೈಲಿಯಾದ ಬ್ರಾಹ್ಮಿ ಲಿಪಿಯಲ್ಲಿ ಪುಸರಖಿತಸ (ಪುಷ್ಯರಿಂದ ರಕ್ಷಿಸಲ್ಪಟ್ಟದ್ದು) ಎಂದು ಕೆತ್ತಲಾಗಿದೆ. ಭಾರತೀಯ ಖಗೋಳಶಾಸ್ತ್ರದಲ್ಲಿ ಪುಷ್ಯ ನಕ್ಷತ್ರವನ್ನು ಅತ್ಯಂತ ಶುಭ ಮತ್ತು ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಈ ಉಂಗುರವನ್ನು ಧರಿಸಿದ್ದ ವ್ಯಕ್ತಿ ಪ್ರಾಚೀನ ಭಾರತದ ಜಾತಿ ವ್ಯವಸ್ಥೆಯಲ್ಲಿದ್ದ ವೈಶ್ಯ ಅಂದರೆ ದೊಡ್ಡ ವ್ಯಾಪಾರಿಯಾಗಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಭತ್ತದ ಗದ್ದೆಯಲ್ಲಿ ಸಿಕ್ಕಿತ್ತು ಇತಿಹಾಸದ ಸುಳಿವು!
ಬ್ಯಾಂಕಾಕ್‌ನಿಂದ ಸುಮಾರು 130 ಕಿಲೋಮೀಟರ್ ದೂರದಲ್ಲಿರುವ ಈ ಹಳ್ಳಿಯ ಭತ್ತದ ಗದ್ದೆಯೊಂದರಲ್ಲಿ ಸ್ಥಳೀಯ ರೈತರಿಗೆ ಕೆಲವು ಪ್ರಾಚೀನ ಕಂಚಿನ ಡ್ರಮ್‌ಗಳ ತುಣುಕುಗಳು ಸಿಕ್ಕಿದ್ದವು. ಅದಾದ ನಂತರ ಪುರಾತತ್ವ ಇಲಾಖೆ ಇಲ್ಲಿ ಪೂರ್ಣ ಪ್ರಮಾಣದ ಉತ್ಖನನ ಆರಂಭಿಸಿತು.
ಫೆಬ್ರವರಿಯಿಂದ ಇಲ್ಲಿಯವರೆಗೆ ಒಟ್ಟು ಎಂಟು ಮಾನವ ಅಸ್ಥಿಪಂಜರಗಳು, ಕಂಚು ಮತ್ತು ಚಿನ್ನದ ಆಭರಣಗಳು ಹಾಗೂ ಹಳೆಯ ಮಡಿಕೆಗಳು ಪತ್ತೆಯಾಗಿವೆ. ಇದನ್ನು ನೋಡಿದರೆ, ಈ ಜಾಗವನ್ನು ಆ ಕಾಲದ ಶ್ರೀಮಂತರು ಅಥವಾ ರಾಜಮನೆತನದ ಉನ್ನತ ವರ್ಗದವರ ಅಂತ್ಯಸಂಸ್ಕಾರಕ್ಕಾಗಿ ಬಳಸಲಾಗುತ್ತಿತ್ತು ಎಂಬುದು ಸ್ಪಷ್ಟವಾಗುತ್ತದೆ.
ಈ ಇಡೀ ಪ್ರದೇಶವು ಸುಮಾರು 1,500 ರಿಂದ 2,500 ವರ್ಷಗಳಷ್ಟು ಹಳೆಯದಾದ ಕಬ್ಬಿಣ ಯುಗಕ್ಕೆ ಸೇರಿದ್ದಾಗಿದೆ. ಮುಂದಿನ ತಿಂಗಳು ಈ ಉತ್ಖನನ ಮುಗಿಯಲಿದ್ದು, ಸಾರ್ವಜನಿಕರ ವೀಕ್ಷಣೆಗಾಗಿ ಇವುಗಳನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದು ಇಲಾಖೆ ಹೇಳಿದೆ.
ಭಾರತದಲ್ಲೂ ಹರಪ್ಪಾ ಕಾಲದ ಅಸ್ಥಿಪಂಜರಗಳ ರಹಸ್ಯ ಬೇಧಿಸಲು ಸಿದ್ಧತೆ!
ಅತ್ತ ಥೈಲ್ಯಾಂಡ್‌ನಲ್ಲಿ ಇತಿಹಾಸದ ರಹಸ್ಯಗಳು ಹೊರಬರುತ್ತಿದ್ದರೆ, ಇತ್ತ ಭಾರತದಲ್ಲೂ ಪುರಾತತ್ವ ಇಲಾಖೆ ದೊಡ್ಡ ಹೆಜ್ಜೆಯನ್ನಿಟ್ಟಿದೆ. ಹರಿಯಾಣದ ಪ್ರಸಿದ್ಧ ರಾಖಿಗಢಿ ಸಿಂಧೂ ಕಣಿವೆ ನಾಗರಿಕತೆಯ ಸ್ಥಳದಲ್ಲಿ ಸಿಕ್ಕಿದ್ದ ಮಾನವ ಅಸ್ಥಿಪಂಜರದ ಅವಶೇಷಗಳನ್ನು ಈಗ ವಿವರವಾದ ವೈಜ್ಞಾನಿಕ ಸಂಶೋಧನೆಗಾಗಿ ಭಾರತದ ಮಾನವಶಾಸ್ತ್ರೀಯ ಸಮೀಕ್ಷೆಗೆ ಹಸ್ತಾಂತರಿಸಲಾಗಿದೆ.
ಸುಮಾರು 550 ಹೆಕ್ಟೇರ್‌ಗಳಷ್ಟು ವಿಶಾಲವಾಗಿ ಹರಡಿರುವ ರಾಖಿಗಢಿ, ಹರಪ್ಪಾ ನಾಗರಿಕತೆಯ ಅತಿ ದೊಡ್ಡ ತಾಣವಾಗಿತ್ತು. ಇಲ್ಲಿ ನಡೆದಿರುವ ಉತ್ಖನನದಲ್ಲಿ ಅಂದಿನ ಕಾಲದ ಅತ್ಯುತ್ತಮ ಒಳಚರಂಡಿ ವ್ಯವಸ್ಥೆ, ಸುಸಜ್ಜಿತ ರಸ್ತೆಗಳು, ಕರಕುಶಲ ಕಾರ್ಖಾನೆಗಳು ಮತ್ತು ದೊಡ್ಡ ವ್ಯಾಪಾರ ಸಂಪರ್ಕಗಳ ಪುರಾವೆಗಳು ಸಿಕ್ಕಿವೆ.
ಈಗ ಸಿಕ್ಕಿರುವ ಅಸ್ಥಿಪಂಜರಗಳ DNA ಮತ್ತು ವೈಜ್ಞಾನಿಕ ತಪಾಸಣೆಯಿಂದ ಅಂದಿನ ಜನರ ಜೀವನಶೈಲಿ, ಆಹಾರ ಪದ್ಧತಿ ಹಾಗೂ ಅವರು ಎದುರಿಸುತ್ತಿದ್ದ ರೋಗಗಳ ಬಗ್ಗೆ ಮತ್ತಷ್ಟು ರೋಚಕ ಮಾಹಿತಿಗಳು ಹೊರಬರಲಿವೆ ಎಂದು ಪುರಾತತ್ವ ತಜ್ಞರು ಅಭಿಪ್ರಾಯಪಟ್ಟಿದ್ದಾರೆ, (ಏಜನ್ಸೀಸ್).