18 ವರ್ಷಗಳ ಒಡನಾಟ... ಪ್ರೀತಿಯ ಬಸ್‌ಗೆ ಮುತ್ತಿಟ್ಟು ಕಣ್ಣೀರಿನಿಂದ ಬೀಳ್ಕೊಟ್ಟ ಚಾಲಕ; ವಿಡಿಯೋ ವೈರಲ್​! Kerala Bus Driver

ಬಸ್​ಗೆ ಮುತ್ತಿಟ್ಟು ಕಣ್ಣೀರಿಡುತ್ತಿರುವ ಚಾಲಕ ಪಾಲ್ ಕುರಿಯನ್
ಬಸ್​ಗೆ ಮುತ್ತಿಟ್ಟು ಕಣ್ಣೀರಿಡುತ್ತಿರುವ ಚಾಲಕ ಪಾಲ್ ಕುರಿಯನ್
Published on
ಕೇರಳ: ಕೆಲವೊಮ್ಮೆ ನಾವು ಮಾಡುವ ವೃತ್ತಿ ಕೇವಲ ಕೆಲಸವಾಗಿರುವುದಿಲ್ಲ, ಅದೊಂದು ಜೀವನವಾಗಿ ಬದಲಾಗಿರುತ್ತದೆ. ನಾವೆಲ್ಲರೂ ಬಸ್‌ಗಳು, ಕಾರುಗಳನ್ನು ಓಡಿಸುತ್ತೇವೆ, ಆದರೆ ಇಲ್ಲೊಬ್ಬ ಚಾಲಕ ತಾನು 18 ವರ್ಷಗಳ ಕಾಲ ಅದೆಷ್ಟೋ ಮೈಲುಗಳ ದೂರ ಸಾಗಿಸಿದ ತನ್ನ ಪ್ರೀತಿಯ ಬಸ್‌ಗೆ ಕಣ್ಣೀರಿನ ವಿದಾಯ ಹೇಳುವ ಮೂಲಕ ಇಡೀ ಕೇರಳದ ಜನರ ಮನಸ್ಸನ್ನು ಗೆದ್ದಿದ್ದಾರೆ.
ಕೇರಳ ರಸ್ತೆ ಸಾರಿಗೆ ನಿಗಮದ (KSRTC) ಹಿರಿಯ ಚಾಲಕ (Kerala Bus Driver) ಪಾಲ್ ಕುರಿಯನ್ ಅವರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಜನರ ಕಣ್ಣಾಲಿಗಳನ್ನು ತೇವಗೊಳಿಸುತ್ತಿದೆ. ಇಡುಕ್ಕಿಯ ಕಟ್ಟಪ್ಪನ ಮೂಲದ ಪಾಲ್ ಕುರಿಯನ್, ಕೆಎಸ್‌ಆರ್‌ಟಿಸಿಯಲ್ಲಿ ಬರೋಬ್ಬರಿ 18 ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿ ಈಗ ನಿವೃತ್ತಿಯಂಚಿನಲ್ಲಿದ್ದಾರೆ.

18 ವರ್ಷಗಳ ನಂಟು ಬಿಡಲಾರೆ

ಕಳೆದ 18 ವರ್ಷಗಳಿಂದ ಕುರಿಯನ್ ಇಡುಕ್ಕಿ ಮತ್ತು ಕುಮಿಲಿ ನಡುವಿನ ಕಠಿಣ ಮಾರ್ಗಗಳಲ್ಲಿ ಒಂದೇ ಬಸ್‌ ಅನ್ನು ಚಾಲನೆ ಮಾಡುತ್ತಿದ್ದರು. ಮಳೆಯಾಗಲಿ, ಬಿಸಿಲಾಗಲಿ, ಕಡಿದಾದ ಘಾಟಿ ರಸ್ತೆಯಾಗಲಿ ಈ ಬಸ್ ಮತ್ತು ಕುರಿಯನ್ ಜೋಡಿ ಪ್ರತಿದಿನ ಸಾವಿರಾರು ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ನಿಗದಿತ ಸ್ಥಳಕ್ಕೆ ತಲುಪಿಸುತ್ತಿತ್ತು. 
ತಮ್ಮ ಕೊನೆಯ ದಿನ ಡಿಪೋದಿಂದ ಹೊರಡುವ ಮುನ್ನ, ಕುರಿಯನ್ ವಾಹನವನ್ನು ಸಮೀಪಿಸಿ ಪ್ರೀತಿಯಿಂದ ಸವರಿ, ಅದರ ಮುಂಭಾಗಕ್ಕೆ ಮುತ್ತಿಟ್ಟಿದ್ದಾರೆ. ಬಸ್‌ಗೆ ಗೌರವಪೂರ್ವಕವಾಗಿ ನಮಸ್ಕರಿಸಿ ಬೀಳ್ಕೊಡುಗೆ ಪಡೆದ ಈ ದೃಶ್ಯ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ. ಈ ಭಾವನಾತ್ಮಕ ಕ್ಷಣವನ್ನು ಸಹೋದ್ಯೋಗಿಗಳು ಮೊಬೈಲ್‌ನಲ್ಲಿ ಸೆರೆಹಿಡಿದು ಆನ್‌ಲೈನ್‌ಗೆ ಅಪ್‌ಲೋಡ್ ಮಾಡಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರ ಮನಸ್ಸು ಗೆದ್ದಿದೆ.
ನಾನಲ್ಲ, ಈ ಬಸ್ಸೇ ನಮ್ಮನ್ನು ಕಾಪಾಡಿದ್ದು!
ಯಾವುದೇ ಅಹಂಕಾರವಿಲ್ಲದ ಕುರಿಯನ್ ಅವರ ಮಾತುಗಳು ಕೇಳುಗರನ್ನು ಬೆರಗುಗೊಳಿಸುತ್ತವೆ. ಇಷ್ಟು ವರ್ಷಗಳ ಕಾಲ ಪ್ರಯಾಣಿಕರನ್ನು ಮತ್ತು ನನ್ನನ್ನು ರಕ್ಷಿಸಿದ್ದು ನಾನಲ್ಲ; ಈ ಬಸ್‌ ನಮ್ಮನ್ನು ಸುರಕ್ಷಿತವಾಗಿರಿಸಿತು ಎಂದು ಅವರು ನುಡಿದಿದ್ದಾರೆ. ಇಷ್ಟು ವರ್ಷಗಳ ಕಾಲ ತನ್ನ ಜೊತೆಗಿದ್ದ ವಾಹನದ ಮೇಲಿನ ಅವರ ಈ ಪ್ರೀತಿ, ಮನುಷ್ಯ ಮತ್ತು ಯಂತ್ರದ ನಡುವಿನ ಭಾವನಾತ್ಮಕ ಬಂಧ ಹೇಗಿರುತ್ತದೆ ಎಂಬುದಕ್ಕೆ ಕನ್ನಡಿಯಾಗಿದೆ.

ಮುಖ್ಯಮಂತ್ರಿಗಳಿಂದಲೂ ಮೆಚ್ಚುಗೆಯ ಮಹಾಪೂರ

ಪಾಲ್ ಕುರಿಯನ್ ಅವರ ಈ ವಿಡಿಯೋ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಸನ್ ಅವರ ಗಮನವನ್ನೂ ಸೆಳೆದಿದೆ. ಚಾಲಕನ ಈ ಪ್ರಾಮಾಣಿಕತೆ ಮತ್ತು ಬಸ್ ಮೇಲಿನ ಭಕ್ತಿಯನ್ನು ಕೊಂಡಾಡಿರುವ ಸಿಎಂ, ಕೆಎಸ್‌ಆರ್‌ಟಿಸಿ ನೌಕರರ ಸಮರ್ಪಣಾ ಭಾವವನ್ನು ಶ್ಲಾಘಿಸಿದ್ದಾರೆ.
ವರ್ಷಗಟ್ಟಲೆ ತಾವು ಚಲಾಯಿಸಿದ ಬಸ್‌ಗೆ ಅತ್ಯಂತ ಭಕ್ತಿಯಿಂದ ನಮಸ್ಕರಿಸಿ ವಿದಾಯ ಹೇಳಿದ ಶ್ರೀ ಪಾಲ್ ಕುರಿಯನ್ ಅವರ ವಿಡಿಯೋ ನೋಡಿ ಹೇಳಲಾಗದ ಭಾವನೆಯೊಂದು ಮೂಡಿತು. ಸಾರ್ವಜನಿಕ ಸಾರಿಗೆಯ ನಿಜವಾದ ಬೆನ್ನೆಲುಬು ಅಂದರೆ ಇಂತಹ ಸಾವಿರಾರು ಕಾರ್ಮಿಕರ ದಣಿವರಿಯದ ಶ್ರಮ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದ್ದಾರೆ. ಸರ್ಕಾರದ ವತಿಯಿಂದ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಭರವಸೆಯನ್ನೂ ಅವರು ನೀಡಿದ್ದಾರೆ.
ಪಾಲ್ ಕುರಿಯನ್ ಅವರ ಅಧಿಕೃತ ನಿವೃತ್ತಿ ಅಕ್ಟೋಬರ್ 31 ರಂದು ನಿಗದಿಯಾಗಿದೆ. ಆದರೆ, ಅವರ ಈ ಸರಳತೆಯ ವಿದಾಯ ಮಾತ್ರ ಇಂಟರ್ನೆಟ್‌ನಲ್ಲಿ ಕೋಟ್ಯಂತರ ಹೃದಯಗಳನ್ನು ಗೆಲ್ಲುವ ಮೂಲಕ ಎಂದೆಂದಿಗೂ ನೆನಪಿನಲ್ಲಿಳಿಯುವಂತೆ ಮಾಡಿದೆ. ಕೆಲಸದ ಮೇಲೆ ಇಂಥದ್ದೊಂದು ಅಚ್ಚಳಿಯದ ಪ್ರೀತಿ ಇದ್ದರೆ, ಆ ವೃತ್ತಿಯೇ ಒಂದು ಪೂಜೆ ಎಂಬುವುದನ್ನು ಕುರಿಯನ್ ಸಾಬೀತುಪಡಿಸಿದ್ದಾರೆ, (ಏಜನ್ಸೀಸ್​).  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net