ತುಂಬಾ ಸಿಹಿಯಾದ ಕಲ್ಲಂಗಡಿ ಹಣ್ಣು ಖರೀದಿಸಬೇಕೇ? ನಿಮ್ಮ ಕೈಯಲ್ಲಿ ಮೊಬೈಲ್​ ಇದ್ರೆ ಸಾಕು, ಇಲ್ಲಿದೆ ಸಖತ್​ ಟಿಪ್ಸ್​! Watermelon

ತುಂಬಾ ಸಿಹಿಯಾದ ಕಲ್ಲಂಗಡಿ ಹಣ್ಣು ಖರೀದಿಸಬೇಕೇ? ನಿಮ್ಮ ಕೈಯಲ್ಲಿ ಮೊಬೈಲ್​ ಇದ್ರೆ ಸಾಕು, ಇಲ್ಲಿದೆ ಸಖತ್​ ಟಿಪ್ಸ್​! Watermelon
ತುಂಬಾ ಸಿಹಿಯಾದ ಕಲ್ಲಂಗಡಿ ಹಣ್ಣು ಖರೀದಿಸಬೇಕೇ? ನಿಮ್ಮ ಕೈಯಲ್ಲಿ ಮೊಬೈಲ್​ ಇದ್ರೆ ಸಾಕು, ಇಲ್ಲಿದೆ ಸಖತ್​ ಟಿಪ್ಸ್​! Watermelon
Published on

ಪ್ರಮುಖ ಮುಖ್ಯಾಂಶಗಳು

  • ನಮ್ಮಲ್ಲಿ ಕಲ್ಲಂಗಡಿ ಇಷ್ಟಪಡದವರು ಬಹಳ ಕಡಿಮೆ ಅಂತಾನೇ ಹೇಳಬಹುದು
  • ಕಲ್ಲಂಗಡಿ ತುಂಬಾ ರುಚಿಯಾಗಿರುವುದಲ್ಲದೆ, ದಾಹವನ್ನು ಸಹ ನೀಗಿಸುತ್ತದೆ
  • ನಾವು ಕಲ್ಲಂಗಡಿಯನ್ನು ಖರೀದಿ ಮಾಡುವಾಗ ತುಂಬಾ ಗೊಂದಲಕ್ಕೆ ಒಳಗಾಗುತ್ತೇವೆ
  • ಒಂದೊಳ್ಳೆ ಹಣ್ಣನ್ನು ಖರೀದಿ ಮಾಡುವುದು ಹೇಗೆಂದು ನಾವಿಂದು ತಿಳಿದುಕೊಳ್ಳೋಣ
Watermelon : ನಮ್ಮಲ್ಲಿ ಯಾವುದೇ ಸಂದೇಹಗಳಿದ್ದರೂ ಈ ಹಿಂದೆ ನಾವು ಎಲ್ಲದಕ್ಕೂ ಗೂಗಲ್ ಮಾಡಿ ಉತ್ತರ ಹುಡುಕುತ್ತಿದ್ದೆವು. ಆದರೆ, ಇತ್ತೀಚೆಗೆ ನಾವು ಚಾಟ್‌ಜಿಪಿಟಿಯಂತಹ ಎಐ (ಕೃತಕ ಬುದ್ಧಿಮತ್ತೆ) ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ವೈದ್ಯಕೀಯ ಮಾಹಿತಿಯಿಂದ ಹಿಡಿದು ಅಡುಗೆಮನೆಯ ಅಗತ್ಯಗಳವರೆಗೆ, ಚಾಟ್‌ಜಿಪಿಟಿಯನ್ನು ಬಳಸಲು ಪ್ರಾರಂಭಿಸಿದ್ದೇವೆ. ಇದೀಗ ಅದೇ ಚಾಟ್​ಜಿಪಿಟಿಯನ್ನು ಬಳಸಿ ಯುವತಿಯೊಬ್ಬಳು ಕಲ್ಲಂಗಡಿ ಹಣ್ಣು ಖರೀದಿಸುವ ಹಳೆಯ ವಿಡಿಯೋವೊಂದು ಮತ್ತೆ ವೈರಲ್​ ಆಗಿದೆ. ಇದೀಗ ಕಲ್ಲಂಗಡಿ ಸೀಸನ್​ ಆಗಿರುವುದರಿಂದ ಹಳೆಯ ವಿಡಿಯೋ ಮತ್ತೆ ವೈರಲ್​ ಆಗುತ್ತಿದೆ. 
ಅಂದಹಾಗೆ ನಮ್ಮಲ್ಲಿ ಕಲ್ಲಂಗಡಿ ಇಷ್ಟಪಡದವರು ಬಹಳ ಕಡಿಮೆ ಅಂತಾನೇ ಹೇಳಬಹುದು. ಕಲ್ಲಂಗಡಿ ತುಂಬಾ ರುಚಿಯಾಗಿರುವುದಲ್ಲದೆ, ದಾಹವನ್ನು ಸಹ ನೀಗಿಸುತ್ತದೆ. ಅಲ್ಲದೆ, ಇದು ಸದಾ ದೊರೆಯುವ ಹಣ್ಣು. ನಾವು ಕಲ್ಲಂಗಡಿಯನ್ನು ಖರೀದಿ ಮಾಡುವಾಗ ತುಂಬಾ ಗೊಂದಲಕ್ಕೆ ಒಳಗಾಗುತ್ತೇವೆ. ಯಾವ ಹಣ್ಣು ಚೆನ್ನಾಗಿದೆ? ಯಾವುದು ಸಿಹಿಯಾಗಿದೆ? ಎಂಬುದು ನಮಗೆ ಗೊತ್ತಾಗುವುದೇ ಇಲ್ಲ. ಕೆಲವೊಮ್ಮೆ ಮನೆಗೆ ತಂದಂತಹ ಹಣ್ಣು ಒಳಗೆ ಹಾಳಾಗಿರುವ ಉದಾಹರಣೆಗಳೂ ಇವೆ. ಹಾಗಾದರೆ, ಒಂದೊಳ್ಳೆ ಹಣ್ಣನ್ನು ಖರೀದಿ ಮಾಡುವುದು ಹೇಗೆ?
ಈ ಪ್ರಶ್ನೆಗೆ ಉತ್ತರ ನೀಡುವಂತಹ ವಿಡಿಯೋವೊಂದನ್ನು ಯುವತಿ ತನ್ನ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ. ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡಲು ChatGPT ಒಂದು ಉತ್ತಮ ಪರಿಹಾರ ಎಂದಿದ್ದಾಳೆ. 

ವಿಡಿಯೋದಲ್ಲಿ ಏನಿದೆ?

ಯುವತಿ ಒಂದು ಕಲ್ಲಂಗಡಿ ಹಣ್ಣಿನ ಮಳಿಗೆಗೆ ಹೋಗುತ್ತಾಳೆ. ಅಲ್ಲಿ ಸಾಕಷ್ಟು ಹಣ್ಣುಗಳಿರುತ್ತವೆ. ಆದ್ದರಿಂದ ಯಾವುದನ್ನು ಖರೀದಿಸಬೇಕೆಂದು ಗೊಂದಲ ಆಕೆಯಲ್ಲಿ ಮೂಡುತ್ತದೆ. ಚೆನ್ನಾಗಿರುವ ಹಣ್ಣನ್ನು ಖರೀದಿ ಮಾಡುವುದು ಹೇಗೆ ಎಂಬ ಪ್ರಶ್ನೆ ಆಕೆಯಲ್ಲಿ ಮೂಡುತ್ತದೆ. ಈ ವೇಳೆ ಆಕೆಗೆ ಒಂದು ಉಪಾಯ ಬರುತ್ತದೆ. ಅದೇನೆಂದರೆ, ಯುವತಿ ತನ್ನ ಫೋನ್ ತೆಗೆದು ಕಲ್ಲಂಗಡಿ ಹಣ್ಣುಗಳ ಫೋಟೋ ತೆಗೆಯುತ್ತಾಳೆ. ಬಳಿಕ ಆ ಫೋಟೋವನ್ನು ChatGPT ನಲ್ಲಿ ಹಾಕುತ್ತಾಳೆ. ಬಳಿಕ ಯಾವುದು ಉತ್ತಮ ಕಲ್ಲಂಗಡಿ ಹಣ್ಣು? ಎಂದು ಪ್ರಶ್ನೆ ಮಾಡುತ್ತಾಳೆ. ಬಳಿಕ ChatGPT ತಕ್ಷಣವೇ ಆ ಗುಂಪಿನಲ್ಲಿ ಒಂದು ಹಣ್ಣನ್ನು ಗುರುತಿಸಿ ಅದು ಅತ್ಯುತ್ತಮ ಎಂದು ಹೇಳುತ್ತದೆ. ಬಳಿಕ ಅದನ್ನು ಖರೀದಿ ಮಾಡಿ, ಮನೆಗೆ ಬಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸಿದಾಗ, ಅದು ಒಳ್ಳೆಯ ಕೆಂಪು ಬಣ್ಣದಲ್ಲಿ, ಸಿಹಿಯಾಗಿತ್ತು. ಈ ವಿಚಾರವನ್ನು ಯುವತಿ ತನ್ನ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ. 
ಸದ್ಯ ವಿಡಿಯೋ ವೈರಲ್​ ಆಗಿದೆ. ಒಂದು ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದು, ನೂರಾರು ಮಂದಿ ಕಾಮೆಂಟ್​ ಮಾಡುತ್ತಿದ್ದಾರೆ. ಈ ರೀತಿಯೂ ಖರೀದಿ ಮಾಡಬಹುದು? ನಿಜಕ್ಕೂ ಇದು ತುಂಬಾ ಚೆನ್ನಾಗಿದೆ. ಇದೊಂದು ಒಳ್ಳೆಯ ಐಡಿಯಾ ಎಂದೆಲ್ಲ ಕಾಮೆಂಟ್​ ಮಾಡುತ್ತಿದ್ದಾರೆ. ಇನ್ನು ಮುಂದೆ ನಾವು ಕೂಡ ಇದೇ ವಿಧಾನವನ್ನು ಫಾಲೋ ಮಾಡುತ್ತೇವೆ ಎಂದು ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ. ಅಂದಹಾಗೆ, ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. 

ಕಲ್ಲಂಗಡಿ ಹಣ್ಣು ಖರೀದಿ ಮಾಡುವಾಗ ಇವು ನೆನಪಿರಲಿ...

1. ಕಲ್ಲಂಗಡಿಯ ಕೆಳಭಾಗದಲ್ಲಿ ನೆಲಕ್ಕೆ ತಾಗಿರುವ ಕಡೆ ದೊಡ್ಡದಾದ ಹಳದಿ ಅಥವಾ ಕೆನೆ ಬಣ್ಣದ ಗುರುತು ಇರಬೇಕು. ಇದು ಹಣ್ಣು ಬಳ್ಳಿಯಲ್ಲೇ ಪೂರ್ತಿಯಾಗಿ ಮಾಗಿದೆ ಎನ್ನುವುದರ ಸೂಚನೆ. ಒಂದು ವೇಳೆ ಆ ಭಾಗ ಬಿಳಿಯಾಗಿದ್ದರೆ ಅಥವಾ ಹಸಿರಾಗಿದ್ದರೆ ಅದನ್ನು ಕೀಳುವಾಗ ಹಣ್ಣು ಇನ್ನೂ ಹಸಿಯಾಗಿತ್ತು ಎಂದರ್ಥ.

2. ಕಲ್ಲಂಗಡಿ ಹಣ್ಣನ್ನು ಕೈಯಲ್ಲಿ ಹಿಡಿದು ನೋಡಿದಾಗ ಅದರ ಗಾತ್ರಕ್ಕಿಂತ ಹೆಚ್ಚು ತೂಕವಾಗಿರಬೇಕು. ಹಣ್ಣು ಎಷ್ಟು ತೂಕವಿರುತ್ತದೋ ಅಷ್ಟು ಹೆಚ್ಚು ನೀರಿನಾಂಶ ಮತ್ತು ಸಿಹಿಯಿಂದ ಕೂಡಿರುತ್ತದೆ.

3. ಹಣ್ಣಿನ ಮೇಲೆ ಬೆರಳಿನಿಂದ ಮೆಲ್ಲನೆ ತಟ್ಟಿದಾಗ 'ಡಬ್ ಡಬ್' ಎಂದು ಗಡುಸಾದ ಶಬ್ದ ಬರಬೇಕು. ಒಂದು ವೇಳೆ ಶಬ್ದ ಮಂದವಾಗಿದ್ದರೆ ಅದು ಹಣ್ಣು ಅತಿಯಾಗಿ ಹಣ್ಣಾಗಿರಬಹುದು ಅಥವಾ ಒಳಗಿನ ಅಂಶ ಮೆತ್ತಗಾಗಿರಬಹುದು ಎಂದು ತಿಳಿಯಬಹುದು.

4. ಹಣ್ಣಿನ ಮೇಲೆ ಜೇಡರ ಬಲೆಯಂತೆ ಕಂದು ಬಣ್ಣದ ಗೆರೆಗಳು ಅಥವಾ ಕಲೆಗಳಿದ್ದರೆ ಅಂತಹ ಹಣ್ಣನ್ನು ಆರಿಸಿ. ಜೇನುನೊಣಗಳು ಹೂವಿನ ಪರಾಗಸ್ಪರ್ಶ ಮಾಡುವಾಗ ಎಷ್ಟು ಹೆಚ್ಚು ಬಾರಿ ಭೇಟಿ ನೀಡುತ್ತವೋ, ಅಷ್ಟು ಹೆಚ್ಚು ಕಲೆಗಳು ಹಣ್ಣಿನ ಮೇಲಿರುತ್ತವೆ. ಇಂತಹ ಹಣ್ಣುಗಳು ಅತ್ಯಂತ ಸಿಹಿಯಾಗಿರುತ್ತವೆ.

5. ಕಲ್ಲಂಗಡಿ ಹಣ್ಣು ಸಮಾನವಾದ ಆಕಾರದಲ್ಲಿರಲಿ (ಒಂದು ಕಡೆ ಉಬ್ಬಿ, ಮತ್ತೊಂದು ಕಡೆ ಚಪ್ಪಟೆಯಾಗಿ ಇರಬಾರದು). ಹಾಗೆಯೇ, ಹಣ್ಣಿನ ತೊಟ್ಟು ಒಣಗಿದಂತಿದ್ದರೆ ಅದು ಹಣ್ಣು ಮಾಗಿದೆ ಎಂದು ತೋರಿಸುತ್ತದೆ. ಹಸಿರು ತೊಟ್ಟಿದ್ದರೆ ಅದು ಇನ್ನೂ ಸರಿಯಾಗಿ ಹಣ್ಣಾಗಿಲ್ಲ ಎಂದರ್ಥ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net