ನಿಮ್ಮ ಬಾತ್​ರೂಮ್​ನಲ್ಲಿರುವ ಸೈಲೆಂಟ್​ ಕಿಲ್ಲರ್​ ಬಗ್ಗೆ ಎಚ್ಚರವಿರಲಿ: ಚಳಿಗಾಲದಲ್ಲಿ ಯಾಮಾರಿದ್ರೆ ಪ್ರಾಣವೇ ಹೋಗುತ್ತೆ! Bathroom

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಚಳಿಯಿಂದ ಸ್ವಲ್ಪ ಪರಿಹಾರ ಸಿಗುತ್ತದೆ ಎಂದು ಭಾವಿಸುತ್ತಾರೆ
  • ಇಂದು ಅನೇಕ ಮಂದಿ ವಾಟರ್​ ಹೀಟರ್​ ಹಾಗೂ ಗೀಸರ್​ಗಳ ಮೊರೆ ಹೋಗುತ್ತಿದ್ದಾರೆ
  • ಗೀಸರ್​ಗಳನ್ನು ಬಳಸುವಾಗ ನಾವು ತುಂಬಾ ಜಾಗರೂಕರಾಗಿರಬೇಕು
  • ಚಳಿಗಾಲದಲ್ಲಿ ಹೆಚ್ಚಾಗಿ ಗೀಸರ್​ ಬಳಸುವಾಗ ಸ್ವಲ್ಪ ಯಾಮಾರಿದರೂ ಪ್ರಾಣವೇ ಹೋಗುತ್ತೆ ಎಚ್ಚರ
Bathroom : ದೇಶದಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದೆ. ಮೈ ಕೊರೆಯುವ ಚಳಿಯಿಂದ ಬಚಾವ್​​ ಆಗಲು ಅನೇಕ ಮಂದಿ ವಿವಿಧ ಮಾರ್ಗವನ್ನು ಹುಡುಕುತ್ತಿದ್ದಾರೆ. ಚಳಿಗೆ ಗುಡ್​ಬೈ ಹೇಳಿ ಬೆಚ್ಚನೆಯ ಅನುಭವಕ್ಕಾಗಿ ಬಹುತೇಕ ಮಂದಿಯ ಮೊದಲ ಆಯ್ಕೆಯೆಂದರೆ ಅದು ಬಿಸಿ ನೀರಿನ ಸ್ನಾನ. ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಚಳಿಯಿಂದ ಸ್ವಲ್ಪ ಪರಿಹಾರ ಸಿಗುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಬಿಸಿ ನೀರು ಅಂತಾ ಬಂದಾಗ ಇಂದು ಅನೇಕ ಮಂದಿ ವಾಟರ್​ ಹೀಟರ್​ ಹಾಗೂ ಗೀಸರ್​ಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಹೆಚ್ಚಿನ ಮಂದಿ ಗೀಸರ್​ ಕಡೆ ಮುಖ ಮಾಡಿದ್ದಾರೆ. ಏಕೆಂದರೆ, ಗೀಸರ್​ ಬಾಳಿಕೆ, ಸುರಕ್ಷತೆ ಮತ್ತು ಸುಲಭವಾಗಿ ಲಭ್ಯವಾಗುವ ಕಾರಣ ಹೆಚ್ಚಿನ ಜನರು ಈಗ ಗೀಸರ್‌ಗಳನ್ನು ಖರೀದಿಸಿ ತಮ್ಮ ಸ್ನಾನಗೃಹಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ.
ವಿವಿಧ ಕಂಪನಿಗಳ ಗೀಸರ್‌ಗಳು ಮಾರುಕಟ್ಟೆಯಲ್ಲಿ ಕನಿಷ್ಠ ಬೆಲೆ 1500 ರೂ.ಗಳಿಂದ ಪ್ರಾರಂಭವಾಗುತ್ತವೆ. ಗೀಸರ್​ಗಳು ಎರಡು ವಿಧಗಳಲ್ಲಿ ಲಭ್ಯವಿದೆ. ಒಂದು ಇನ್‌ಸ್ಟಂಟ್ ಹೀಟರ್‌ಗಳು ಮತ್ತೊಂದು ಸ್ಟೋರೇಜ್ ಹೀಟರ್‌ಗಳು. ಹೆಚ್ಚಿನ ಮಾಡೆಲ್​ಗಳು ಆಟೋ ಕಟ್ ವ್ಯವಸ್ಥೆಯನ್ನು ಹೊಂದಿವೆ. ಅಂದರೆ, ನೀರನ್ನು ಒಂದು ನಿರ್ದಿಷ್ಟ ಮಟ್ಟಕ್ಕೆ ಬಿಸಿ ಮಾಡಿದ ನಂತರ, ಅದು ಖಾಲಿಯಾಗುವವರೆಗೂ ಬಿಸಿಯಾಗಿರುತ್ತದೆ. ಇದು ತುಂಬಾ ಸುರಕ್ಷಿತ ಮತ್ತು ಅನುಕೂಲಕರವಾಗಿದೆ. ಆದರೆ, ಇನ್​ಸ್ಟಂಟ್​ ಗೀಸರ್​ಗಳು ಯಾವಾಗಲೂ ಆನ್​ನಲ್ಲಿರುತ್ತವೆ. ಅಲ್ಲದೆ, ಕೆಲವರು ಇತರ ಉದ್ದೇಶಗಳಿಗಾಗಿ ನೀರನ್ನು ಬಳಸಿಕೊಳ್ಳಲು ಯಾವಾಗಲೂ ಗೀಸರ್‌ಗಳನ್ನು ಆನ್ ಮಾಡಿರುತ್ತಾರೆ. ಇದು ತುಂಬಾ ಅಪಾಯಕಾರಿ. ಇತ್ತೀಚಿನ ಕೆಲವು ಘಟನೆಗಳನ್ನು ನೋಡಿದಾಗ ಗೀಸರ್​ಗಳನ್ನು ಬಳಸುವಾಗ ನಾವು ತುಂಬಾ ಜಾಗರೂಕರಾಗಿರಬೇಕು ಎಂಬುದನ್ನು ನಮಗೆ ನೆನಪಿಸುತ್ತವೆ.
2023ರಲ್ಲಿ ಮಹಾರಾಷ್ಟ್ರ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದ ಪುಣೆ ಮೂಲದ 30 ವರ್ಷದ ಅಶ್ವನಿ ಕೇದಾರಿ, ನೀರು ಬಿಸಿಯಾಗಿದೆಯೇ ಎಂದು ಪರಿಶೀಲಿಸುವಾಗ ಗೀಸರ್​ನಿಂದ ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾದರು. ಯುವತಿಯ ದೇಹದ ಮೇಲೆ ಬಿಸಿನೀರು ಬಿದ್ದು, ಶೇ. 80 ಕ್ಕೂ ಹೆಚ್ಚು ಸುಟ್ಟಗಾಯಗಳಾಗಿದ್ದವು. ಇತ್ತೀಚೆಗೆ, ಉತ್ತರ ಪ್ರದೇಶದ ಅಲಿಗಢದಲ್ಲಿ 12 ವರ್ಷದ ಬಾಲಕಿಯೊಬ್ಬಳು ಸ್ನಾನಗೃಹದಲ್ಲಿ ಗ್ಯಾಸ್ ಗೀಸರ್​ನಿಂದ ಉಸಿರುಗಟ್ಟಿ ಮೃತಪಟ್ಟಳು. ದಿಯೋರಿಯಾ ಜಿಲ್ಲೆಯಲ್ಲಿ ಗೀಸರ್ ಪ್ಲಗ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡರು.

ಈ ಅಪಘಾತಗಳಿಗೆ ಹಲವು ಕಾರಣಗಳಿವೆ

ದಿನಗಳು ಕಳೆದಂತೆ ಬಿಸಿನೀರು ಗೀಸರ್‌ನ ತಾಪನ ಅಂಶವನ್ನು ಮೃದುಗೊಳಿಸುತ್ತದೆ ಮತ್ತು ಒಳಗಿನ ತಂತಿಗಳು ಒಡೆಯಲು ಕಾರಣವಾಗುತ್ತದೆ. ಇದು ದೋಷಯುಕ್ತ ವಿದ್ಯುತ್ ಸೆಟ್ಟಿಂಗ್‌ಗಳಿಂದಾಗಿ ಸಂಭವಿಸುತ್ತದೆ. ಇನ್ನು ಹಳೆಯ ವಿದ್ಯುತ್ ಸೆಟ್ಟಿಂಗ್‌ಗಳನ್ನು ಹೊಂದಿರುವ ಮನೆಗಳು ಮತ್ತು ಫ್ಲಾಟ್‌ಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಆಧುನಿಕ ಗೀಸರ್‌ಗಳು ಅವುಗಳ ಕಾರ್ಯಾಚರಣೆಗೆ ಅನುಕೂಲಕರವಾದ ರೀತಿಯಲ್ಲಿ ವೈರಿಂಗ್ ಪ್ರಕಾರವನ್ನು ಹೊಂದಿಲ್ಲದಿರಬಹುದು.
ಗ್ಯಾಸ್ ಗೀಸರ್‌ಗಳನ್ನು ಬಳಸುವಾಗ ಪರಿಗಣಿಸಬೇಕಾದ ಕೆಲವು ಮುಖ್ಯ ವಿಷಯಗಳಿವೆ. ಕಳಪೆ ಗಾಳಿ ಇರುವ ಪ್ರದೇಶದಲ್ಲಿ ಗ್ಯಾಸ್ ಗೀಸರ್ ಅನ್ನು ಸ್ಥಾಪಿಸಿದಾಗ ಮತ್ತು ನೀರನ್ನು ಬಿಸಿ ಮಾಡಿದಾಗ, ಅದು ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಶಾಖವನ್ನು ಉತ್ಪಾದಿಸುತ್ತದೆ ಎಂದು ಶ್ರೀ ಜಯದೇವ ಹೃದಯರಕ್ತನಾಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಕೆ.ಎಸ್. ರವೀಂದ್ರನಾಥ್ ಹೇಳಿದ್ದಾರೆ.
ಗೀಸರ್ ಹೆಚ್ಚು ಶಾಖವನ್ನು ಉತ್ಪಾದನೆ ಮಾಡುವುದರಿಂದ ಆಮ್ಲಜನಕದ ಕೊರತೆಯ ವಾತಾವರಣವನ್ನು ಸೃಷ್ಟಿಸುತ್ತದೆ. ಇದು ಇಂಗಾಲದ ಡೈಆಕ್ಸೈಡ್ ಅನ್ನು ಉಸಿರಾಡಲು ಕಾರಣವಾಗುತ್ತದೆ. ಸುತ್ತಮುತ್ತಲಿನ ಆಮ್ಲಜನಕದ ಮಟ್ಟ ಕಡಿಮೆಯಾದಾಗ ದೇಹದ ಜೀವಕೋಶಗಳು ಆಮ್ಲಜನಕವನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ದೇಹವು ಇಂಗಾಲದ ಡೈಆಕ್ಸೈಡ್ ಅನ್ನು ಉಸಿರಾಡುತ್ತದೆ. ಇದರಿಂದ ಹೈಪೋಕ್ಸಿಕ್ ಸ್ಥಿತಿಗೆ ಕಾರಣವಾಗುತ್ತದೆ ಎಂದು ರವೀಂದ್ರನಾಥ್ ಹೇಳಿದ್ದಾರೆ.
ಸರಿಯಾದ ಅರ್ಥಿಂಗ್ ಮತ್ತು ಸರ್ಕ್ಯೂಟ್ ಬ್ರೇಕರ್‌ಗಳನ್ನು ಅಳವಡಿಸಲಾದ ಗೀಸರ್‌ಗಳು ಅಪಘಾತ ಉಂಟುಮಾಡುವ ಸಾಧ್ಯತೆ ಕಡಿಮೆ ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಹೊರಸೂಸುವುದಿಲ್ಲ. ಆದಾಗ್ಯೂ, ಕಳಪೆ ವೈರಿಂಗ್, ಕಳಪೆ ಗುಣಮಟ್ಟದ ಸ್ಥಳೀಯ ಬ್ರ್ಯಾಂಡ್‌ಗಳು ಹಾಗೂ ಸೋರಿಕೆಗಳು ಟ್ಯಾಂಕ್ ಸ್ಫೋಟಗಳಿಗೆ ಕಾರಣವಾಗಬಹುದು ಆದ್ದರಿಂದ, ಪ್ರಮಾಣೀಕೃತ ಬ್ರ್ಯಾಂಡ್‌ಗಳು ಮತ್ತು ಪರವಾನಗಿ ಪಡೆದ ಗೀಸರ್​ ಮಾದರಿಗಳನ್ನು ಅಳವಡಿಸಿಕೊಳ್ಳುವುದು ತುಂಬಾನೇ ಮುಖ್ಯವಾಗಿವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net