ಹೃದಯಾಘಾತಕ್ಕೆ ಶಸ್ತ್ರಚಿಕಿತ್ಸೆ ಬೇಕಿಲ್ಲ: ಕೇವಲ ಒಂದು ಇಂಜೆಕ್ಷನ್‌ನಿಂದ ಉಳಿಯಬಹುದು ಪ್ರಾಣ! Heart Attack

ಹೃದಯಾಘಾತಕ್ಕೆ ಶಸ್ತ್ರಚಿಕಿತ್ಸೆ ಬೇಕಿಲ್ಲ: ಕೇವಲ ಒಂದು ಇಂಜೆಕ್ಷನ್‌ನಿಂದ ಉಳಿಯಬಹುದು ಪ್ರಾಣ! Heart Attack
ಹೃದಯಾಘಾತಕ್ಕೆ ಶಸ್ತ್ರಚಿಕಿತ್ಸೆ ಬೇಕಿಲ್ಲ: ಕೇವಲ ಒಂದು ಇಂಜೆಕ್ಷನ್‌ನಿಂದ ಉಳಿಯಬಹುದು ಪ್ರಾಣ! Heart Attack
Published on

ಪ್ರಮುಖ ಮುಖ್ಯಾಂಶಗಳು

  • ಹೃದಯಾಘಾತ ಎಂಬುದು ಸಾಮಾನ್ಯ ರೋಗವಲ್ಲ ಮಾರಣಾಂತಿಕ ರೋಗ
  • ಹೃದಯಾಘಾತ ಸಂಭವಿಸಿದಾಗ ತಕ್ಷಣ ಚಿಕಿತ್ಸೆ ದೊರೆಯದೇ ಹೋದರೆ ಸಾವು ಖಚಿತ
  • ಈ ರೋಗವನ್ನು ಜಯಿಸಲು ಪ್ರಪಂಚದಾದ್ಯಂತ ಇಂದಿಗೂ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ
  • ಇದೀಗ ಹೊಸ ಸಂಶೋಧನೆ ಹೃದಯದ ಆರೋಗ್ಯ ಕ್ಷೇತ್ರದಲ್ಲಿ ಒಂದು ಹೊಸ ಭರವಸೆ ಹುಟ್ಟುಹಾಕಿದೆ.
Heart Attack : ಹೃದಯಾಘಾತ ಎಂಬುದು ಒಂದು ರೋಗ. ಸಾಮಾನ್ಯ ರೋಗವಲ್ಲ ಮಾರಣಾಂತಿಕ ರೋಗ. ಯಾವಾಗ ಹೃದಯದಲ್ಲಿನ ಅಪಧಮನಿಗಳು ಮುಚ್ಚಿಹೋಗಿ ರಕ್ತದ ಹರಿವು ಬ್ಲಾಕ್​ ಆಗುತ್ತದೋ ಆಗ ಸಾವು ಸಂಭವಿಸುತ್ತದೆ. ಹೃದಯಾಘಾತ ಸಂಭವಿಸಿದಾಗ ತಕ್ಷಣ ಚಿಕಿತ್ಸೆ ದೊರೆಯದೇ ಹೋದರೆ ಸಾವು ಖಚಿತ. ಈ ರೋಗದ ಸಾಮಾನ್ಯ ಲಕ್ಷಣಗಳೆಂದರೆ, ಹೃದಯದಲ್ಲಿ ನೋವು ಅಥವಾ ಒತ್ತಡ ಕಾಣಿಸಿಕೊಳ್ಳುತ್ತದೆ. ಅಲ್ಲದೆ, ತಲೆತಿರುಗುವಿಕೆ, ವಾಕರಿಕೆ, ದವಡೆ, ಕುತ್ತಿಗೆ ಅಥವಾ ಬೆನ್ನಿನಲ್ಲಿ ನೋವು, ಎಡ ಭುಜದಲ್ಲಿ ಭಾರದ ಅನುಭವ ಮತ್ತು ಉಸಿರಾಟದ ತೊಂದರೆಗಳು ಸೇರಿವೆ.

ಹೊಸ ಭರವಸೆ

ಅಂದಹಾಗೆ, ಪುರುಷರು ಮತ್ತು ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ವಿಭಿನ್ನವಾಗಿರುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವಾದ್ಯಂತ ಶೇ. 12.6 ರಷ್ಟು ಸಾವುಗಳು ಹೃದಯಾಘಾತದಿಂದಲೇ ಸಂಭವಿಸುತ್ತದೆ. ಈ ಕಾಯಿಲೆಗೆ ಚಿಕಿತ್ಸೆಯು ಕೂಡ ತುಂಬಾ ದುಬಾರಿಯಾಗಿದೆ. ಹೀಗಾಗಿ, ಈ ರೋಗವನ್ನು ಜಯಿಸಲು ಪ್ರಪಂಚದಾದ್ಯಂತ ಇಂದಿಗೂ ಸಾಕಷ್ಟು ಅಧ್ಯಯನಗಳು ನಡೆಯುತ್ತಲೇ ಇವೆ. ಇದರ ಮಧ್ಯೆ, ಕೊಲಂಬಿಯಾ ವಿಶ್ವವಿದ್ಯಾಲಯದ ಬಯೋಮೆಡಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಕೆ. ಚೆಂಗ್ ನೇತೃತ್ವದ ಸಂಶೋಧನಾ ತಂಡವು ಒಂದು ಅಧ್ಯಯನವನ್ನು ನಡೆಸಿದೆ. ಆ ಸಂಶೋಧನಾ ವರದಿ 'ಸೈನ್ಸ್' ಜರ್ನಲ್‌ನಲ್ಲಿ ಪ್ರಕಟವಾಗಿದ್ದು, ಹೃದಯದ ಆರೋಗ್ಯ ಕ್ಷೇತ್ರದಲ್ಲಿ ಒಂದು ಹೊಸ ಭರವಸೆಯನ್ನು ಹುಟ್ಟುಹಾಕಿದೆ.

ಹೃದಯದ ಸ್ನಾಯು ಮತ್ತೆ ಬೆಳೆಯುವುದಿಲ್ಲ

ಯಾರಿಗಾದರೂ ಹೃದಯಾಘಾತವಾದಾಗ, ತಕ್ಷಣ ಮಾಡಬಹುದಾದ ಏಕೈಕ ಕೆಲಸವೆಂದರೆ ರಕ್ತದ ಹರಿವನ್ನು ಮರುಸ್ಥಾಪಿಸುವುದು. ಅಂದರೆ, ಬ್ಲಾಕೇಜ್​ ಅನ್ನು ತೆರವುಗೊಳಿಸುವುದು. ಆದರೆ, ಬ್ಲಾಕ್​ ಆದ ರಕ್ತನಾಳಗಳ ಮೂಲಕ ರಕ್ತ ಮತ್ತೆ ಹರಿಯಲು ಆರಂಭಿಸುವ ಹೊತ್ತಿಗೆ ಹೃದಯವು ಅಪಾಯದಲ್ಲಿ ಸಿಲುಕುತ್ತದೆ. ಸಮಯ ಆದಷ್ಟು ಪ್ರಾಣಕ್ಕೆ ಅಪಾಯ ಹೆಚ್ಚಾಗುತ್ತಿರುತ್ತದೆ. ಆಘಾತಕಾರಿ ಮಾಹಿತಿ ಏನೆಂದರೆ, ಒಮ್ಮೆ ಹಾನಿಗೊಳಗಾದ ನಂತರ, ಹೃದಯದ ಸ್ನಾಯು ಮತ್ತೆ ಬೆಳೆಯುವುದಿಲ್ಲ. ಪುನರುತ್ಪಾದನೆಗೆ ಕನಿಷ್ಠ ಸಾಮರ್ಥ್ಯವಿರುವ ಅಂಗಗಳಲ್ಲಿ ಹೃದಯವು ಕೂಡ ಒಂದು ಎಂದು ಅಧ್ಯಯನವನ್ನು ನಡೆಸಿದ ಕೆ. ಚೆಂಗ್ ಮತ್ತು ಅಲನ್ ಎಲ್. ಕಗಾನೋವ್ ಅವರು ಹೇಳುತ್ತಾರೆ. ಈ ಸಾಮರ್ಥ್ಯದ ಕೊರತೆಯಿಂದಾಗಿ, ಹೃದಯಾಘಾತದಿಂದ ಬದುಕುಳಿದ ಅನೇಕರು ನಂತರ ಹೃದಯ ಸ್ತಂಭನಕ್ಕೆ ಒಳಗಾಗುತ್ತಾರೆ.

ತೋಳಿನಲ್ಲಿ ಇಂಜೆಕ್ಷನ್

ಆದರೀಗ, ಚೆಂಗ್ ನೇತೃತ್ವದ ತಂಡವು ಹೃದಯ ಕಾಯಿಲೆಗೆ ಚಿಕಿತ್ಸೆ ನೀಡಲು ದೇಹವು ತನ್ನದೇ ಆದ ಔಷಧವನ್ನು ತಯಾರಿಸುವ ಒಂದು ಮಾರ್ಗವನ್ನು ಅಭಿವೃದ್ಧಿಪಡಿಸುತ್ತಿದೆ. ಈ ಔಷಧವನ್ನು ನೇರವಾಗಿ ಹೃದಯಕ್ಕೆ ಚುಚ್ಚುವ ಅವಶ್ಯಕತೆ ಇಲ್ಲ. ಇದು ದೇಹದ ಇತರೆ ಅಂಗಾಂಶಗಳಲ್ಲಿ ಔಷಧವನ್ನು ತಯಾರಿಸಲು ರೈಬೋನ್ಯೂಕ್ಲಿಯಿಕ್ ಆಮ್ಲ (RNA) ಅನ್ನು ಬಳಸುತ್ತದೆ. ಈ ಔಷಧ ಹೃದಯವನ್ನು ತಲುಪಿದಾಗ ಮಾತ್ರ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಇದರರ್ಥ ಸಾಮಾನ್ಯವಾಗಿ ಮಾಡುವಂತೆ ಹೃದಯವನ್ನು ತೆರೆಯುವ ಅಥವಾ ರಕ್ತನಾಳಗಳ ಮೂಲಕ ಹೃದಯಕ್ಕೆ ಔಷಧವನ್ನು ಚುಚ್ಚುವ ಅಗತ್ಯವಿಲ್ಲ. ನೀವು ಮಾಡಬೇಕಾಗಿರುವುದು ತೋಳಿನಲ್ಲಿ ಇಂಜೆಕ್ಷನ್ ತೆಗೆದುಕೊಂಡರೆ ಸಾಕು.
ಸದ್ಯ ಕ್ಲಿನಿಕಲ್ ಪ್ರಯೋಗದಲ್ಲಿ ಯಶಸ್ವಿಯಾಗಿದೆ. ಈ ಇಂಜೆಕ್ಷನ್​ ನೀಡಿದ ಬಳಿಕ ಸಣ್ಣ ಮತ್ತು ದೊಡ್ಡ ಪ್ರಾಣಿಗಳಲ್ಲಿ ಹೃದಯದ ಕಾರ್ಯವು ಸುಧಾರಿಸಿದೆ ಎಂದು ಸಂಶೋಧಕರು ಹೇಳುತ್ತಾರೆ. ಪ್ರಸ್ತುತ ಹೃದಯ ಕಸಿ ಅಥವಾ ಹೃದಯ ಕೋಶ ಚಿಕಿತ್ಸೆಗಳಿಗಿಂತ ಭಿನ್ನವಾಗಿ, ಈ ಚಿಕಿತ್ಸೆಯು ಸರಳ ವಿಧಾನದಿಂದ ಜೀವಗಳನ್ನು ಉಳಿಸಬಹುದಾಗಿದೆ.

ಎಎನ್​ಪಿ ಹಾರ್ಮೋನ್​

ಜನನದ ನಂತರದ ಮೊದಲ ಕೆಲವು ದಿನಗಳಲ್ಲಿ, ಹೆಚ್ಚಿನ ಪ್ರಾಣಿಗಳು ಹೃತ್ಕರ್ಣದ ನ್ಯಾಟ್ರಿಯುರೆಟಿಕ್ ಪೆಪ್ಟೈಡ್ (ANP) ಎಂಬ ಹಾರ್ಮೋನ್ ಅನ್ನು ಉತ್ಪಾದಿಸುತ್ತವೆ. ಇದು ಹೃದಯ ಸ್ನಾಯು ಮತ್ತೆ ಬೆಳೆಯಲು ಸಹಾಯ ಮಾಡುತ್ತದೆ. ನಾವು ವಯಸ್ಸಾದಂತೆ, ಎಎನ್​ಪಿಯ ಸಾಮರ್ಥ್ಯ ಕಡಿಮೆಯಾಗುತ್ತದೆ ಮತ್ತು ಅಂತಿಮವಾಗಿ ಕಣ್ಮರೆಯಾಗುತ್ತದೆ. ಜನನದ ನಂತರ ಜನಿಸಿದ ಇಲಿಗಳಲ್ಲಿ ಮತ್ತು ವಯಸ್ಸಾದ ಇಲಿಗಳಲ್ಲಿ ಸಂಶೋಧಕರು ಇದನ್ನು ಅಧ್ಯಯನ ಮಾಡಿದ್ದಾರೆ. ನಂತರ ಎಎನ್​ಪಿ ಎಂಬ ಹಾರ್ಮೋನ್ ಅನ್ನು ತೋಳುಗಳು ಅಥವಾ ಕಾಲುಗಳ ಸ್ನಾಯುಗಳಿಗೆ ಚುಚ್ಚಿದರು. ಅದು ರಕ್ತಪ್ರವಾಹದ ಮೂಲಕ ಹೃದಯಕ್ಕೆ ಪ್ರಯಾಣಿಸಿ ರೋಗವನ್ನು ಗುಣಪಡಿಸಿತು ಎಂಬುದನ್ನು ಕಂಡುಕೊಂಡಿದ್ದಾರೆ.
ಅತ್ಯಂತ ಸಮಾಧಾನಕರ ವಿಷಯವೆಂದರೆ ಈ ಇಂಜೆಕ್ಷನ್ ಪಡೆಯಲು ರೋಗಿಯು ಪ್ರತಿ ಬಾರಿ ಆಸ್ಪತ್ರೆಗೆ ಹೋಗಬೇಕಾಗಿಲ್ಲ. ಒಮ್ಮೆ ಇಂಜೆಕ್ಷನ್ ಪಡೆದ ನಂತರ, ಔಷಧವು ದೇಹದಲ್ಲಿ ಸುಮಾರು ನಾಲ್ಕು ವಾರಗಳವರೆಗೆ ಕೆಲಸ ಮಾಡುತ್ತದೆ. ಅಂದರೆ ಅವರು ತಿಂಗಳಿಗೊಮ್ಮೆ ಮಾತ್ರ ಆಸ್ಪತ್ರೆಗೆ ಭೇಟಿ ನೀಡಬೇಕಾಗುತ್ತದೆ.

ಮಾನವರಲ್ಲಿ ಇನ್ನೂ ಪರೀಕ್ಷಿಸಿಲ್ಲ

ಅಂದಹಾಗೆ, ಈ ಚಿಕಿತ್ಸೆಯನ್ನು ಇನ್ನೂ ಮಾನವರಲ್ಲಿ ಪರೀಕ್ಷಿಸಲಾಗಿಲ್ಲ. ಅದಕ್ಕೂ ಮೊದಲು ಅನೇಕ ಪ್ರಯೋಗಗಳನ್ನು ನಡೆಸಬೇಕಾಗಿದೆ. ದೊಡ್ಡ ಪ್ರಾಣಿಗಳು, ವಯಸ್ಸಾದ ಇಲಿಗಳು ಮತ್ತು ಮಧುಮೇಹ ಇಲಿಗಳ ಮೇಲೆ ಈಗಾಗಲೇ ಅಧ್ಯಯನಗಳನ್ನು ನಡೆಸಲಾಗಿದೆ. ಹೃದಯಾಘಾತವಾದ ಒಂದು ವಾರದ ವೀಕ್ಷಣೆಯ ನಂತರವೂ ಚಿಕಿತ್ಸೆಯನ್ನು ಸಹ ಪ್ರಯತ್ನಿಸಲಾಯಿತು. ಚಿಕಿತ್ಸೆಯು ಎಲ್ಲಾ ಪರಿಸ್ಥಿತಿಗಳಲ್ಲಿಯೂ ಪರಿಣಾಮಕಾರಿಯಾಗಿದೆ. ಇನ್ನು ಈ ಚಿಕಿತ್ಸೆಯು ಹೃದಯಾಘಾತಕ್ಕೆ ಮಾತ್ರವಲ್ಲದೆ ಭವಿಷ್ಯದ ಮೂತ್ರಪಿಂಡದ ಕಾಯಿಲೆಗಳು, ರಕ್ತದೊತ್ತಡ ಮತ್ತು ಪ್ರಿಕ್ಲಾಂಪ್ಸಿಯಾದಂತಹ ಪರಿಸ್ಥಿತಿಗಳಲ್ಲಿಯೂ ಸಹ ಪರಿಣಾಮಕಾರಿಯಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net