ಜಿಮ್ ಪ್ರಿಯರೇ ಎಚ್ಚರ! ಪ್ರೋಟೀನ್ ಶೇಕ್ ಸೇವಿಸಿ ಪ್ರಾಣ ಕಳೆದುಕೊಂಡ 19ರ ಯುವಕ: ಸೇವಿಸುವ ಸರಿಯಾದ ಕ್ರಮ ಯಾವುದು? Protein Shake

ಪ್ರೋಟೀನ್​ ಶೇಕ್​ ಕುಡಿಯುತ್ತಿರುವ ವ್ಯಕ್ತಿ
ಪ್ರೋಟೀನ್​ ಶೇಕ್​ ಕುಡಿಯುತ್ತಿರುವ ವ್ಯಕ್ತಿ
Published on

ಪ್ರಮುಖ ಮುಖ್ಯಾಂಶಗಳು

  • ಪ್ರೋಟೀನ್​ ಶೇಕ್​ ಕುಡಿದು 19 ವರ್ಷದ ಬಾಲಕ ಸಾವು
  • ಈ ಘಟನೆ ಫಿಟ್‌ನೆಸ್ ಜಗತ್ತಿನ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ
  • ಪ್ರೋಟೀನ್​ ನಮ್ಮ ದೇಹಕ್ಕೆ ಏಕೆ ಬೇಕು?
ಉತ್ತರ ಪ್ರದೇಶ: ಇತ್ತೀಚೆಗೆ, ಉತ್ತರ ಪ್ರದೇಶದ 19 ವರ್ಷದ ಬಾಲಕ ಪ್ರೋಟೀನ್ ಶೇಕ್ (Protein Shake) ಸೇವಿಸಿದ ನಂತರ ಅವನ ಶ್ವಾಸಕೋಶಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ ಪರಿಣಾಮ ಸಾವನ್ನಪ್ಪಿದ ಸುದ್ದಿ ವರದಿಯಾಗಿತ್ತು.
ಕೆಲವು ದಿನಗಳ ಹಿಂದೆ ಜಿಮ್‌ಗೆ ಸೇರಿದ್ದ ಇತ ಅಲ್ಲಿ ಒದಗಿಸಲಾದ ಪ್ರೋಟೀನ್ ಶೇಕ್ ತೆಗೆದುಕೊಂಡಿದ್ದ ಎಂದು ತಿಳಿದು ಬಂದಿದೆ. ಈ ಘಟನೆಯು ಇಂದಿನ ಫಿಟ್‌ನೆಸ್ ಜಗತ್ತಿನ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.
ಸ್ನಾಯುಗಳನ್ನು ತ್ವರಿತವಾಗಿ ನಿರ್ಮಿಸಿ, ಫಿಟ್ ಆಗಿ ಕಾಣುವ ಆತುರದಲ್ಲಿ, ಪ್ರತಿಯೊಬ್ಬರ ದೇಹವು ವಿಭಿನ್ನ ಪೌಷ್ಟಿಕಾಂಶಗಳ ಅಗತ್ಯವನ್ನು ಹೊಂದಿದೆ ಎಂಬುದನ್ನು ನಿರ್ಲಕ್ಷಿಸುತ್ತಾರೆ. ವೈದ್ಯಕೀಯ ಮಾರ್ಗದರ್ಶನವಿಲ್ಲದೆ ಪ್ರೋಟೀನ್ ಪೂರಕ(Supplements)ಗಳನ್ನು ಸೇವಿಸುವುದು ಅಪಾಯಕಾರಿಯಾಗಿದೆ.
ಈ ಕಳವಳಗಳಿಗೆ ಹೆಚ್ಚುವರಿಯಾಗಿ, ಭಾರತದಲ್ಲಿ ಮಾರಾಟವಾಗುವ 36 ಅತ್ಯಂತ ಜನಪ್ರಿಯ ಪ್ರೋಟೀನ್ ಪೂರಕಗಳಲ್ಲಿ 70% ತಪ್ಪುದಾರಿಗೆಳೆಯುವ ಲೇಬಲ್‌ಗಳನ್ನು ಹೊಂದಿವೆ ಎಂದು ವರದಿಗಳು ಬಹಿರಂಗಪಡಿಸುತ್ತವೆ. ಆದರೆ 14% ಹಾನಿಕಾರಕ ವಿಷವನ್ನು ಹೊಂದಿರುವುದು ಕಂಡುಬಂದಿದೆ. ಅಂತಹ ಪೂರಕಗಳನ್ನು ಬಳಸುವ ಮೊದಲು ಜಾಗೃತಿ, ಸರಿಯಾದ ನಿಯಂತ್ರಣ ಮತ್ತು ತಜ್ಞರ ಸಮಾಲೋಚನೆಯ ತುರ್ತು ಅಗತ್ಯವನ್ನು ಇದು ಒತ್ತಿ ಹೇಳುತ್ತದೆ.
ಇಂದು ನಾವು ಪ್ರೋಟೀನ್ ಎಂದರೇನು? ಅದು ದೇಹಕ್ಕೆ ಏಕೆ ಅವಶ್ಯಕವಾಗಿದೆ ಮತ್ತು ಪ್ರೋಟೀನ್ ತೆಗೆದುಕೊಳ್ಳುವ ಆರೋಗ್ಯಕರ ಮಾರ್ಗ ಯಾವುದು ಎಂಬುದನ್ನು ತಿಳಿದುಕೊಳ್ಳೊಣ.

ಪ್ರೋಟಿನ್​ ಎಂದರೇನು?

ಪ್ರೋಟೀನ್ ಎನ್ನುವುದು ಅಮಿನೋ ಆಮ್ಲಗಳ (Amino acids) ಸುದೀರ್ಘ ಸರಪಳಿಯಿಂದ ಮಾಡಲ್ಪಟ್ಟ ಒಂದು ಸಂಕೀರ್ಣ ಸಾವಯವ ಸಂಯುಕ್ತವಾಗಿದೆ. ಇದು ಜೀವಕೋಶಗಳ ರಚನೆ, ಕಾರ್ಯನಿರ್ವಹಣೆ ಮತ್ತು ದೇಹದ ಅಂಗಾಂಶಗಳ ಬೆಳವಣಿಗೆಗೆ ಅತ್ಯಗತ್ಯವಾದ ಪ್ರಮುಖ ಪೋಷಕಾಂಶವಾಗಿದೆ.
ವಿಜ್ಞಾನದ ದೃಷ್ಟಿಕೋನದಲ್ಲಿ ಹೇಳುವುದಾದರೆ, ಪ್ರೋಟೀನ್‌ಗಳು ಅಮಿನೋ ಆಮ್ಲಗಳಿಂದ ಮಾಡಲ್ಪಟ್ಟ ಬೃಹತ್ ಜೈವಿಕ ಅಣುಗಳಾಗಿದ್ದು, ಇವು ನಮ್ಮ ದೇಹದ ಪ್ರತಿಯೊಂದು ಜೀವಕೋಶದ ಬಹುಮುಖ್ಯ ಭಾಗವಾಗಿವೆ.

ಮಾನವನ ದೇಹಕ್ಕೆ ಪ್ರೋಟೀನ್​ ಏಕೆ ಬೇಕು?

ಮಾನವ ದೇಹದ ಸುಗಮ ಕಾರ್ಯನಿರ್ವಹಣೆಗೆ ಪ್ರೋಟೀನ್ ಅಥವಾ ಸಸಾರಜನಕವು ಅತ್ಯಂತ ಅವಶ್ಯಕವಾದ ಪೋಷಕಾಂಶವಾಗಿದೆ. ಪ್ರೋಟೀನ್​ನ್ನು ದೇಹದ ನಿರ್ಮಾಣ ಇಟ್ಟಿಗೆಗಳು (Building blocks of the body) ಎಂದು ಕರೆಯಲಾಗುತ್ತದೆ.
ಏಕೆಂದರೆ ಇದು ಸ್ನಾಯು, ಚರ್ಮ, ಎಲುಬು, ಕೂದಲು ಮತ್ತು ಉಗುರುಗಳ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೀವಕೋಶಗಳ ಬೆಳವಣಿಗೆ ಮತ್ತು ಹಾನಿಗೊಳಗಾದ ಅಂಗಾಂಶಗಳ ದುರಸ್ತಿಗೆ ಪ್ರೋಟೀನ್ ಅತಿ ಮುಖ್ಯ. ಅಷ್ಟೇ ಅಲ್ಲದೆ, ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರತಿಕಾಯಗಳನ್ನು (Antibodies) ಉತ್ಪಾದಿಸಲು ಸಹಾಯ ಮಾಡುತ್ತದೆ.
ರಕ್ತದಲ್ಲಿ ಆಮ್ಲಜನಕವನ್ನು ಸಾಗಿಸುವ ಹಿಮೋಗ್ಲೋಬಿನ್ ಕೂಡ ಒಂದು ರೀತಿಯ ಪ್ರೋಟೀನ್ ಆಗಿದೆ. ಮಕ್ಕಳಲ್ಲಿ ದೈಹಿಕ ಬೆಳವಣಿಗೆಗೆ ಮತ್ತು ಗರ್ಭಿಣಿಯರ ಆರೋಗ್ಯಕ್ಕೆ ಇದು ಬಹಳ ಮುಖ್ಯವಾಗಿದ್ದು, ಇದರ ಕೊರತೆಯು ದೌರ್ಬಲ್ಯ, ಕೂದಲು ಉದುರುವಿಕೆ ಮತ್ತು ರೋಗನಿರೋಧಕ ಶಕ್ತಿಯ ಕುಂಠಿತಕ್ಕೆ ಕಾರಣವಾಗಬಹುದು.

ಪ್ರೋಟೀನ್ ತೆಗೆದುಕೊಳ್ಳುವ ಆರೋಗ್ಯಕರ ಮಾರ್ಗ

ಆರೋಗ್ಯಕರವಾಗಿ ಪ್ರೋಟೀನ್ ಸೇವಿಸಲು ಸಮತೋಲಿತ ಮತ್ತು ನೈಸರ್ಗಿಕ ಆಹಾರ ಪದ್ಧತಿಯನ್ನು ಅನುಸರಿಸುವುದು ಅತ್ಯಂತ ಉತ್ತಮ ಮಾರ್ಗವಾಗಿದೆ. ಕೇವಲ ಪ್ರೋಟೀನ್ ಮೇಲೆ ಮಾತ್ರ ಗಮನ ಹರಿಸದೆ, ಅದರ ಜೊತೆಗೆ ನಾರಿನಂಶ (Fiber) ಮತ್ತು ಜೀವಸತ್ವಗಳು ಇರುವಂತೆ ನೋಡಿಕೊಳ್ಳಬೇಕು.
ಸಸ್ಯಾಹಾರಿಗಳು ದಿನನಿತ್ಯದ ಆಹಾರದಲ್ಲಿ ಬೇಳೆಕಾಳುಗಳು, ಹೆಸರುಕಾಳು, ಕಡಲೆ, ಸೋಯಾಬೀನ್, ಪನೀರ್ ಮತ್ತು ಮೊಳಕೆ ಬರಿಸಿದ ಕಾಳುಗಳನ್ನು ಬಳಸುವುದರಿಂದ ಉತ್ತಮ ಗುಣಮಟ್ಟದ ಪ್ರೋಟೀನ್ ಪಡೆಯಬಹುದು. ಮಾಂಸಾಹಾರಿಗಳಾದರೆ ಮೊಟ್ಟೆಯ ಬಿಳಿ ಭಾಗ, ಚರ್ಮರಹಿತ ಚಿಕನ್ ಮತ್ತು ಮೀನುಗಳನ್ನು ಬೇಯಿಸಿ ಅಥವಾ ಸುಟ್ಟು ಸೇವಿಸುವುದು ಆರೋಗ್ಯಕರ.
ಪ್ರೋಟೀನ್ ಸೇವನೆಯನ್ನು ದಿನದ ಒಂದೇ ಹೊತ್ತಿನ ಊಟಕ್ಕೆ ಸೀಮಿತಗೊಳಿಸದೆ, ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದಲ್ಲಿ ಸಮಾನವಾಗಿ ಹಂಚಿಕೊಳ್ಳಬೇಕು.
ಸಂಸ್ಕರಿಸಿದ ಪ್ರೋಟೀನ್ ಪೌಡರ್‌ಗಳಿಗಿಂತ ನೈಸರ್ಗಿಕ ಮೂಲಗಳಿಗೆ ಮೊದಲ ಆದ್ಯತೆ ನೀಡಬೇಕು ಮತ್ತು ಹೆಚ್ಚಿನ ಪ್ರೋಟೀನ್ ಸೇವಿಸಿದಾಗ ದೇಹದ ಜೀರ್ಣಕ್ರಿಯೆಗೆ ಪೂರಕವಾಗಿ ದಿನವಿಡೀ ಸಾಕಷ್ಟು ನೀರನ್ನು ಕುಡಿಯುವುದು ಬಹಳ ಮುಖ್ಯ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net