ಬೆಂಗಳೂರು: "ಮಗು ಆರೋಗ್ಯವಾಗಿ(Baby Health) ಹುಟ್ಟಬೇಕಾದರೆ ತಾಯಿ ಚೆನ್ನಾಗಿರಬೇಕು" ಎಂಬುದು ಕಾಲಕಾಲದಿಂದಲೂ ನಡೆದುಬಂದಿರುವ ನಂಬಿಕೆ. ಆದರೆ, ಆಧುನಿಕ ವೈದ್ಯಕೀಯ ವಿಜ್ಞಾನವು ಈ ಚಿಂತನೆಯನ್ನು ಸಂಪೂರ್ಣವಾಗಿ ಬದಲಾಯಿಸುತ್ತಿದೆ. ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಎಷ್ಟು ಮುಖ್ಯವೋ, ಗರ್ಭಧಾರಣೆಗೆ ಮುನ್ನ ತಂದೆಯ ಆರೋಗ್ಯ ಮತ್ತು ಆತನ ಜೀವನಶೈಲಿಯೂ ಅಷ್ಟೇ ಮಹತ್ವದ್ದಾಗಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ತಂದೆಯ ವಯಸ್ಸು, ಒತ್ತಡದ ಜೀವನ, ಧೂಮಪಾನ, ಮದ್ಯಪಾನ ಮತ್ತು ನಿದ್ದೆಯ ಕೊರತೆ ಹುಟ್ಟಲಿರುವ ಮಗುವಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಬಹುದು ಎಂದು ಇತ್ತೀಚಿನ ಜಾಗತಿಕ ಸಂಶೋಧನೆಗಳು ಸಾಬೀತುಪಡಿಸಿವೆ.