ಆ ತಂಡ ಕಡೆಗಣಿಸಿದ್ದ ಆಟಗಾರ ಇಂದು ಡೆಲ್ಲಿ ಪಾಲಿಗೆ ಮ್ಯಾಚ್ ವಿನ್ನರ್​.. 19 ನೇ ಆವೃತ್ತಿಯ ಭವಿಷ್ಯ ನುಡಿದ ಮೊಹಮ್ಮದ್ ಕೈಫ್ | IPL 2026

 IPL 2026 |  ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್
IPL 2026 | ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್
Published on
IPL2026: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್‌ನ 19ನೇ ಆವೃತ್ತಿಯು ಮಾರ್ಚ್ 28 ರಿಂದ ಅದ್ಧೂರಿಯಾಗಿ ಆರಂಭಗೊಳ್ಳಲಿದ್ದು, ಎಲ್ಲಾ ತಂಡಗಳು ಭರ್ಜರಿ ತಾಲೀಮು ನಡೆಸುತ್ತಿರುವ ಬೆನ್ನಲ್ಲೇ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ ಅಸ್ತ್ರ ಕುಲದೀಪ್ ಯಾದವ್ ಪಾತ್ರದ ಕುರಿತು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ (Mohammad Kaif ) ಭವಿಷ್ಯ ನುಡಿದಿದ್ದಾರೆ. 
ಖಾಸಗಿ ಚಾನೆಲ್​ನಲ್ಲಿ ಮಾತನಾಡಿರುವ ಕೈಪ್​, ಈ ಬಾರಿ ಡೆಲ್ಲಿ ತಂಡದ ಯಶಸ್ಸಿನ ಕೀಲಿ ಕೈ ಕುಲದೀಪ್ ಕೈಯಲ್ಲಿದೆ ಎಂದಿದ್ದಾರೆ.
ಕುಲದೀಪ್ ಯಾದವ್​ರ ಕ್ರಿಕೆಟ್ ಜೀವನದ ಏರಿಳಿತಗಳನ್ನು ಮೆಲುಕು ಹಾಕಿದ ಕೈಫ್, ಕುಲದೀಪ್ ಯಾದವ್ ಮೊದಲು ಕೆಕೆಆರ್ ತಂಡದಲ್ಲಿದ್ದಾಗ ಅವರಿಗೆ ಸರಿಯಾದ ಅವಕಾಶಗಳೇ ಸಿಗುತ್ತಿರಲಿಲ್ಲ. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು ಹರಾಜಿನಲ್ಲಿ ಖರೀದಿಸಿ ಬೆಂಬಲ ನೀಡಿದ ಬಳಿಕ ಅವರ ಹೊಸ ಅವತಾರವನ್ನು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ನಾಯಕನಾಗಿ ರಿಷಭ್ ಪಂತ್ ನೀಡಿದ ಬೆಂಬಲವೇ ಕುಲದೀಪ್​ರನ್ನು ಇಂದು ವಿಶ್ವದ ಶ್ರೇಷ್ಠ ವಿಕೆಟ್ ಟೇಕರ್ ಆಗಿ ರೂಪಿಸಿದೆ ಎಂದು ಕೈಫ್​ ಅಭಿಪ್ರಾಯಪಟ್ಟಿದ್ದಾರೆ.
ಪವರ್‌ಪ್ಲೇ ಮುಗಿದ ಬಳಿಕ, ಅಂದರೆ ಆರು ಓವರ್‌ಗಳ ನಂತರ ಕುಲದೀಪ್ ಬೌಲಿಂಗ್​ ಮಾಡಲು ಬರುತ್ತಾರೆ, ಮಧ್ಯದ ಓವರ್‌ಗಳಲ್ಲಿ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕುವುದು ಮಾತ್ರವಲ್ಲದೆ, ಪ್ರಮುಖ ವಿಕೆಟ್‌ಗಳನ್ನು ಉರುಳಿಸಿ ಡೆಲ್ಲಿ ತಂಡಕ್ಕೆ ಮೇಲುಗೈ ತಂದುಕೊಡುವುದು ಇವರ ಜವಾಬ್ದಾರಿ. ಈ ಸಂದರ್ಭದಲ್ಲಿ ಕುಲದೀಪ್ ನೀಡುವ ಪ್ರದರ್ಶನ ತಂಡದ ಗೆಲುವಿಗೆ ಅಡಿಪಾಯವಾಗಲಿದೆ ಎಂದು ಕೈಫ್ ವಿಶ್ಲೇಷಿಸಿದ್ದಾರೆ.

ಲಕ್ನೋ ವಿರುದ್ಧ ಪಂದ್ಯದಿಂದ ಆರಂಭವಾಗಲಿದೆ ಅಭಿಯಾನ

ಡೆಲ್ಲಿ ಕ್ಯಾಪಿಟಲ್ಸ್ ಈ ವರ್ಷದ ಅಭಿಯಾನವನ್ನು ಏಪ್ರಿಲ್ 1 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರಂಭಿಸಲಿದೆ. ಲಕ್ನೋದ ಏಕಾನಾ ಕ್ರೀಡಾಂಗಣದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಕುಲದೀಪ್ ಯಾದವ್ ಕೈಚಳಕ ಹೇಗಿರಲಿದೆ ಎಂಬುದು ಸದ್ಯ ಕುತೂಹಲ ಮೂಡಿಸಿದೆ. ಕುಲದೀಪ್ ಜೊತೆಗೆ ಅಕ್ಷರ್ ಪಟೇಲ್ ಮತ್ತು ವಿಪ್ರಜ್ ನಿಗಮ್​​ರಂತಹ ಸ್ಪಿನ್ನರ್‌ಗಳು ಇರುವುದು ಡೆಲ್ಲಿ ತಂಡದ ಬೌಲಿಂಗ್ ಶಕ್ತಿಯನ್ನು ಹೆಚ್ಚಿಸಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net