ಇನ್​ಸ್ಟಾಗ್ರಾಮ್​ನ ಅತ್ಯಂತ ಪ್ರಸಿದ್ಧ ಜೋಡಿ ನಾವೇ... ಜಿ7 ವೇದಿಕೆಯಲ್ಲಿ ಮೆಲೋಡಿ ಕ್ರೇಜ್​, ಮೋದಿ ಮಾತಿಗೆ ನಕ್ಕ ಮೆಲೋನಿ! PM Modi

ಇನ್​ಸ್ಟಾಗ್ರಾಮ್​ನ ಅತ್ಯಂತ ಪ್ರಸಿದ್ಧ ಜೋಡಿ ನಾವೇ... ಜಿ7 ವೇದಿಕೆಯಲ್ಲಿ ಮೆಲೋಡಿ ಕ್ರೇಜ್​, ಮೋದಿ ಮಾತಿಗೆ ನಕ್ಕ ಮೆಲೋನಿ! PM Modi
ಇನ್​ಸ್ಟಾಗ್ರಾಮ್​ನ ಅತ್ಯಂತ ಪ್ರಸಿದ್ಧ ಜೋಡಿ ನಾವೇ... ಜಿ7 ವೇದಿಕೆಯಲ್ಲಿ ಮೆಲೋಡಿ ಕ್ರೇಜ್​, ಮೋದಿ ಮಾತಿಗೆ ನಕ್ಕ ಮೆಲೋನಿ! PM Modi
Published on

ಪ್ರಮುಖ ಮುಖ್ಯಾಂಶಗಳು

  • ಜಾಗತಿಕ ವೇದಿಕೆಯಲ್ಲಿ ಮತ್ತೆ ಮುನ್ನೆಲೆಗೆ ಬಂದ 'ಮೆಲೋಡಿ' ಕ್ರೇಜ್
  • ಪ್ರಧಾನಿ ಮೋದಿ ಮಾತು ಕೇಳಿ ನಗೆಗಡಲಲ್ಲಿ ತೇಲಿದ ಇಟಲಿ ಪ್ರಧಾನಿ
  • ಹೌದು, ನಾವೇ ಇನ್​ಸ್ಟಾಗ್ರಾಮ್​ನ ಅತ್ಯಂತ ಪ್ರಸಿದ್ಧ ಜೋಡಿ ಎಂದ ಜಾರ್ಜಿಯಾ ಮೆಲೋನಿ
  • ಜಾಗತಿಕ ನಾಯಕರ ಸಮ್ಮುಖದಲ್ಲಿ ಗಮನ ಸೆಳೆದ ಮೋದಿ-ಮೆಲೋನಿ ಬಾಂಧವ್ಯ
ಪ್ಯಾರಿಸ್​: ಫ್ರಾನ್ಸ್‌ನ ಎವಿಯನ್-ಲೆ-ಬೈನ್ಸ್‌ನಲ್ಲಿ ಮಂಗಳವಾರ ನಡೆದ ಜಿ7 ಶೃಂಗಸಭೆಯ ನಡುವೆ ಭಾರತದ ಪ್ರಧಾನಿ ನರೇಂದ್ರ ಮೋದಿ ( PM Modi ) ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ( Giorgia Meloni ) ಅವರ ನಡುವೆ ನಡೆದ ಒಂದು ಚಿಕ್ಕ ಸಂಭಾಷಣೆಯು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗಮನ ಸೆಳೆದಿದ್ದು, 'ಮೆಲೋಡಿ' ಕ್ರೇಜ್​ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಜಿ7 ಶೃಂಗಸಭೆಯ ಗ್ರೂಪ್ ಫೋಟೋಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಪರಸ್ಪರ ಹಸ್ತಲಾಘವ ಮಾಡಿ, ಉಭಯಕುಶಲೋಪರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ನಾಯಕರ ಜತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಇತರ ಜಾಗತಿಕ ನಾಯಕರು ಕೂಡ ಫೋಟೋಗೆ ಸಾಲಾಗಿ ನಿಂತಿರುವುದು ಇದರಲ್ಲಿ ಕಂಡುಬಂದಿದೆ.
ವಿಡಿಯೋದ ಆಡಿಯೋ ಅಷ್ಟಾಗಿ ಸ್ಪಷ್ಟವಾಗಿಲ್ಲದಿದ್ದರೂ, ಪ್ರಧಾನಿ ಮೋದಿ ಅವರು ಮೆಲೋನಿ ಅವರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮಿಬ್ಬರ ಜೋಡಿಯ ಜನಪ್ರಿಯತೆಯ ಬಗ್ಗೆ ಪ್ರಸ್ತಾಪಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪ್ರಧಾನಿ ಮೋದಿಯವರ ಮಾತಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ನಗುತ್ತಲೇ ಪ್ರತಿಕ್ರಿಯಿಸಿದ್ದಾರೆ. ಹೌದು, ನಾವೇ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ಜೋಡಿ ಎಂದು ಮರುಮಾತನಾಡಿದ್ದಾರೆ.
ಅಂದಹಾಗೆ, ರೋಮ್ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ವೈರಲ್ ಆಗಿದ್ದ 'ಮೆಲೋಡಿ' ಎಂಬ ಇಂಟರ್ನೆಟ್ ಟ್ರೆಂಡ್‌ಗೆ ತಕ್ಕಂತೆ ಇಟಲಿ ಪ್ರಧಾನಿ ಮೆಲೋನಿ ಅವರಿಗೆ ಭಾರತದ ಪ್ರಸಿದ್ಧ 'ಪಾರ್ಲೆ ಮೆಲೋಡಿ' ಟಾಫಿ ಪ್ಯಾಕೆಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಇದಾದ ಸುಮಾರು ಒಂದು ತಿಂಗಳ ಬಳಿಕ ನಿನ್ನೆ ನಡೆದ ಜಿ7 ಶೃಂಗಸಭೆಯಲ್ಲ ಉಭಯ ನಾಯಕರ ಭೇಟಿಯಾಗಿದೆ. ಪ್ರಧಾನಿ ಮೋದಿಯವರು ಮೆಲೋಡಿ ಚಾಕೋಲೇಟ್​ ಅನ್ನು ಉಡುಗೊರೆಯಾಗಿ ನೀಡಿದ ವಿಡಿಯೋವನ್ನು ಮೆಲೋನಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಅಲ್ಲದೆ, "ಉಡುಗೊರೆಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದರು. ವಿಡಿಯೋ ವೈರಲ್​ ಆಗಿ ಜಗತ್ತಿನ ಗಮನ ಸೆಳೆದಿತ್ತು. ಅಷ್ಟೇ ಅಲ್ಲದೆ, ಮೆಲೋಡಿ ಚಾಕೋಲೇಟ್​ನ ಷೇರುಗಳು ಕೂಡ ಮಾರುಕಟ್ಟೆಯಲ್ಲಿ ಏರಿಕೆ ಕಂಡಿತ್ತು.
'ಮೆಲೋನಿ' ಮತ್ತು ಪ್ರಧಾನಿ ಮೋದಿಯವರ ಹೆಸರನ್ನು ಒಳಗೊಂಡ 'ಮೆಲೋಡಿ' ಎಂಬ ಪದವು 2023ರ ದ್ವಿಪಕ್ಷೀಯ ಸಭೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಒಂದು ಹಾಸ್ಯದ ರೂಪದಲ್ಲಿ ಆರಂಭವಾಗಿತ್ತು. ವಿವಿಧ ಜಾಗತಿಕ ಶೃಂಗಸಭೆಗಳಲ್ಲಿ ಉಭಯ ನಾಯಕರ ನಡುವಿನ ಆತ್ಮೀಯ ಮತ್ತು ಮುಕ್ತ ಸಂಭಾಷಣೆಗಳ ವೈರಲ್ ವಿಡಿಯೋ ಹಾಗೂ ಮೀಮ್ಸ್‌ಗಳಲ್ಲಿ ಈ ಪದವನ್ನು ಹೆಚ್ಚಾಗಿ ಬಳಸಲಾಗುತ್ತಿದ್ದು, ಇದು ಇಂಟರ್ನೆಟ್‌ನಲ್ಲಿ ಕೋಟ್ಯಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇಟಲಿ ಪ್ರಧಾನಿ ಮೆಲೋನಿಯವರು ಮೊದಲ ಬಾರಿಗೆ 2024 ರಲ್ಲಿ ಮೋದಿಯವರೊಂದಿಗಿನ ಸೆಲ್ಫಿ ಹಂಚಿಕೊಂಡು, "ಹಲೋ ಫ್ರೆಂಡ್ಸ್, ಫ್ರಮ್ #Melodi" ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು. ಆ ಬಳಿಕ ಜೂನ್ 2025 ರ ಜಿ7 ಶೃಂಗಸಭೆಯ ಸಂದರ್ಭದಲ್ಲೂ ಸೆಲ್ಫಿ ವಿಡಿಯೋವೊಂದನ್ನು ಹಂಚಿಕೊಂಡು, "ಹಲೋ, ಫ್ರಮ್ ದಿ ಮೆಲೋಡಿ ಟೀಮ್" ಎಂದು ಕ್ಯಾಪ್ಷನ್ ನೀಡಿದ್ದರು. ಅಂದಿನಿಂದ ಜಾಗತಿಕ ವೇದಿಕೆಗಳಲ್ಲಿ ನಡೆಯುತ್ತಿರುವ ಇಂತಹ ಸರಣಿ ಸಂವಹನಗಳು ಇಬ್ಬರು ನಾಯಕರ ನಡುವಿನ ಆತ್ಮೀಯ ವೈಯಕ್ತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿವೆ.
ಆದರೆ, ಪ್ರಧಾನಿ ಮೋದಿ ಮತ್ತು ಮೆಲೋನಿ ನಡುವಿನ ಈ ಒಡನಾಟವು ಕೇವಲ ಫೋಟೋ ಕ್ಲಿಕ್ಕಿಸಿಕೊಳ್ಳುವ ಅವಕಾಶಕ್ಕೆ ಮಾತ್ರ ಸೀಮಿತವಾಗಿಲ್ಲ, ಇದು ವಿದೇಶಾಂಗ ನೀತಿಯ ಪ್ರಮುಖ ಭಾಗವಾಗಿದೆ. ಭಾರತ ಮತ್ತು ಇಟಲಿ ದೇಶಗಳು ಇಂಡೋ-ಪೆಸಿಫಿಕ್ ವಲಯಕ್ಕೆ ರೋಮ್ ಅನ್ನು ಯುರೋಪ್‌ನ ಹೆಬ್ಬಾಗಿಲನ್ನಾಗಿ ಮಾಡುವ 'ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್' (IMEC) ಯೋಜನೆಗಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದು, ಇಟಲಿಯು ಭಾರತದ ಅತ್ಯಂತ ಪ್ರಮುಖ ಜಾಗತಿಕ ಪಾಲುದಾರ ದೇಶವಾಗಿ ಹೊರಹೊಮ್ಮಿದೆ. ಇದರೊಂದಿಗೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು ಈಗಾಗಲೇ 16.77 ಬಿಲಿಯನ್ ಡಾಲರ್ ದಾಟಿದೆ.
ಕಳೆದ ತಿಂಗಳು ಪ್ರಧಾನಿ ಮೋದಿಯವರು ತಮ್ಮ ಐದು ರಾಷ್ಟ್ರಗಳ ಪ್ರವಾಸದ ಕೊನೆಯ ಹಂತದಲ್ಲಿ ಇಟಲಿ ಪ್ರಧಾನಿ ಮೆಲೋನಿ ಅವರೊಂದಿಗೆ ರಾತ್ರಿಯ ಭೋಜನದ ವೇಳೆ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಇಬ್ಬರೂ ನಾಯಕರು ಅಲ್ಲಿನ ಐತಿಹಾಸಿಕ 'ಕೊಲೋಸಿಯಮ್' ಸ್ಮಾರಕಕ್ಕೆ ಭೇಟಿ ನೀಡಿ, ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಸುದೀರ್ಘ ಹಾಗೂ ಆಳವಾದ ಚರ್ಚೆ ನಡೆಸಿದ್ದಾರೆ. ಹೀಗೆ, ಉಭಯ ದೇಶಗಳ ನಾಯಕರ ನಡುವೆ ಉತ್ತಮ ಸ್ನೇಹ ಮುಂದುವರಿದಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net