Volodymyr Zelensky | ನಮಗೀಗ ಇರೋದು ಒಂದೇ ಆಸೆ, ಅದು ಪುಟಿನ್ ಸಾವು: ಕ್ರಿಸ್ಮಸ್ ಭಾಷಣದಲ್ಲಿ ವೊಲೊಡಿಮಿರ್ ಝೆಲೆನ್ಸ್ಕಿವಿವಾದಾತ್ಮಕ ಹೇಳಿಕೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ
Published on
ಕೈವ್: ರಷ್ಯಾ ಮತ್ತು ಯುಕ್ರೇನ್ ನಡುವಿನ ರಕ್ತಸಿಕ್ತ ಯುದ್ಧವು ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿರುವ ಬೆನ್ನಲ್ಲೇ, ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelensky) ಈ ಬಾರಿಯ ಕ್ರಿಸ್ಮಸ್ ಸಂದೇಶದಲ್ಲಿ ನಾವು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಾವನ್ನು ಬಯಸುತ್ತೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಝೆಲೆನ್ಸ್ಕಿ​, ಇಂದು ಪ್ರತಿಯೊಬ್ಬ ಯುಕ್ರೇನಿಯನ್ ಹೃದಯದಲ್ಲಿ ಒಂದೇ ಬಯಕೆ ಇದೆ. ಅದು ಶತ್ರುವಿನ ಅಂತ್ಯ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.
ಸಾಂಪ್ರದಾಯಿಕ ನಂಬಿಕೆಯಂತೆ ಕ್ರಿಸ್ಮಸ್ ರಾತ್ರಿ ಸ್ವರ್ಗದ ಬಾಗಿಲು ತೆರೆಯುತ್ತದೆ ಮತ್ತು ಬೇಡಿದ್ದನ್ನು ದೇವರು ನೀಡುತ್ತಾನೆ ಎಂಬ ನಂಬಿಕೆಯನ್ನು ಉಲ್ಲೇಖಿಸಿದ ಝೆಲೆನ್ಸ್ಕಿ, ಇಂದು ನಮ್ಮೆಲ್ಲರ ಕನಸು ಒಂದೇ ಆಗಿದೆ. ಪುಟಿನ್​ ಸತ್ತು ಹೋಗಲಿ ಎಂದು ಪ್ರತಿಯೊಬ್ಬ ಯುಕ್ರೇನಿಯನ್ ತನ್ನ ಮನಸ್ಸಿನಲ್ಲಿ ಮೌನವಾಗಿ ಪ್ರಾರ್ಥಿಸುತ್ತಿದ್ದಾನೆ ಎಂದು ಪುಟಿನ್ ಹೆಸರನ್ನು ಹೇಳದೆಯೇ ತಿಳಿಸಿದ್ದಾರೆ.
ಹಬ್ಬದ ಸಂದರ್ಭದಲ್ಲೂ ಯುಕ್ರೇನ್‌ನ ಇಂಧನ ಮೂಲಸೌಕರ್ಯಗಳ ಮೇಲೆ ರಷ್ಯಾ ನಡೆಸಿದ ಸರಣಿ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಖಂಡಿಸಿದ ಯುಕ್ರೇನ್​ ಅಧ್ಯಕ್ಷ, ಕ್ರಿಸ್ಮಸ್ ಮುನ್ನಾದಿನದಂದು ಈ ರೀತಿ ದಾಳಿ ಮಾಡುವವರು ದೇವರ ನಂಬಿಕೆ ಇಲ್ಲದವರು. ಅಲ್ಲದೆ, ಕ್ರೈಸ್ತ ಧರ್ಮಕ್ಕೂ ಅವರಿಗೂ ಸಂಬಂಧವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಷ್ಯಾ ಪ್ರತಿಕ್ರಿಯೆ

ಝೆಲೆನ್ಸ್ಕಿ ಭಾಷಣಕ್ಕೆ ರಷ್ಯಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಈ ಬಗ್ಗೆ ಮಾತನಾಡಿದ ರಷ್ಯಾ ವಕ್ತಾರ ಡಿಮಿಟ್ರಿ ಪೆಸ್ಕೋವ್, ಝೆಲೆನ್ಸ್ಕಿ ಮಾತುಗಳು ಅಸಂಸ್ಕೃತ ಮತ್ತು ದ್ವೇಷದಿಂದ ಕೂಡಿವೆ. ಇಂತಹ ವ್ಯಕ್ತಿಯೊಂದಿಗೆ ರಾಜತಾಂತ್ರಿಕ ಮಾತುಕತೆ ನಡೆಸಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಅಮೆರಿಕದ ಮಧ್ಯಸ್ಥಿಕೆಯಲ್ಲಿ ಶಾಂತಿ ಮಾತುಕತೆಯ ಚರ್ಚೆಗಳು ನಡೆಯುತ್ತಿರುವಾಗಲೇ ಇಂತಹ ಹೇಳಿಕೆ ಹೊರಬಿದ್ದಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಶಾಂತಿ ಮಾತುಕತೆಗೆ ಹಿನ್ನಡೆ..?

ಅಮೆರಿಕದ ಟ್ರಂಪ್ ಆಡಳಿತವು ರಷ್ಯಾ ಮತ್ತು ಯುಕ್ರೇನ್ ನಡುವೆ 20 ಅಂಶಗಳ ಶಾಂತಿ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸುತ್ತಿರುವಾಗಲೇ ಇಂತಹ ಹೇಳಿಕೆ ಬಂದಿದೆ. ಒಂದು ಕಡೆ ಝೆಲೆನ್ಸ್ಕಿ ಯುದ್ಧ ಅಂತ್ಯಗೊಳಿಸಲು ಅಮೆರಿಕದೊಂದಿಗೆ ಚರ್ಚಿಸುತ್ತಿದ್ದಾರೆ. ಇನ್ನೊಂದೆಡೆ ಪುಟಿನ್ ವಿರುದ್ಧ ತೀವ್ರವಾದ ದ್ವೇಷದ ಮಾತುಗಳನ್ನಾಡುತ್ತಿದ್ದಾರೆ. ಇದು ಮುಂಬರುವ ಶಾಂತಿ ಮಾತುಕತೆಗಳ ಮೇಲೆ ಕರಿನೆರಳು ಬೀರಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net