ಇದು ತಮಿಳುನಾಡು Vs ದೆಹಲಿ ಯುದ್ಧ...ಪಳನಿಸ್ವಾಮಿಯನ್ನು ಗುಲಾಮ ಎಂದು ಕರೆದ ಉದಯನಿಧಿ | Udhayanidhi Stalin

 Udhayanidhi Stalin | ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್
Udhayanidhi Stalin | ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್
Published on
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವೇ ದಿನ ಬಾಕಿ ಉಳಿದಿದ್ದು, ಡಿಎಂಕೆ ಸಂಸ್ಥಾಪಕ ಸಿ.ಎನ್. ಅಣ್ಣಾದೊರೈ ಜನ್ಮಸ್ಥಳವಾದ ಕಾಂಚೀಪುರಂನಲ್ಲಿ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿರುವ ಡಿಸಿಎಂ ಉದಯನಿಧಿ ಸ್ಟಾಲಿನ್ ಎನ್​ಡಿಎ ಮೈತ್ರಿಕೂಟದ ವಿರುದ್ಧ ಗುಡುಗಿದ್ದಾರೆ.
ಕಾಂಚೀಪುರಂನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆ ಕೇವಲ ಮತದಾನವಲ್ಲ, ಬದಲಾಗಿ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿಯನ್ನು ಅಧಿಕಾರದಿಂದ ಪದಚ್ಯುತಗೊಳಿಸುವ ದೊಡ್ಡ ಯುದ್ಧವಾಗಿದೆ ಎಂದು ಘೋಷಿಸಿದರು.
ತಮ್ಮ ಭಾಷಣದುದ್ದಕ್ಕೂ ಕೇಂದ್ರ ಸರ್ಕಾರ ಮತ್ತು ಎಐಎಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ ಉದಯನಿಧಿ, ಈ ಸ್ಪರ್ಧೆಯು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ತಮಿಳುನಾಡಿನಲ್ಲಿ ಅವಕಾಶ ನೀಡದಿರುವ ಕುರಿತಾಗಿದೆ ಎಂದರು.

ತಮಿಳುನಾಡು Vs ದೆಹಲಿ

ಇದು ತಮಿಳುನಾಡು ಮತ್ತು ದೆಹಲಿಯ ನಡುವೆ ನಡೆಯುತ್ತಿರುವ ಹೋರಾಟವಾಗಿದೆ ಎಂಬ ತಮ್ಮ ತಂದೆ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿಕೆಯನ್ನು ಪುನರುಚ್ಛರಿಸಿದ ಉದಯನಿಧಿ, ಎಡಪ್ಪಾಡಿ ಪಳನಿಸ್ವಾಮಿಯನ್ನು ಪ್ರಧಾನಿ ಮೋದಿಯವರ ಗುಲಾಮ ಎಂದು ಕರೆದರು. ನಮ್ಮ ಈ ಚುನಾವಣೆಯ ಮುಖ್ಯ ಉದ್ದೇಶವೇ ಪಳನಿಸ್ವಾಮಿಯನ್ನು ಸೋಲಿಸುವುದಾಗಿದೆ, ಇಂತಹ ಪರಿಸ್ಥಿತಿಯಲ್ಲಿ ನಾವು ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರಿಗೆ ತಮಿಳುನಾಡಿನಲ್ಲಿ ಜಾಗ ಕೊಡಲು ಸಾಧ್ಯವೇ..?. ನಮ್ಮ ರಾಜ್ಯ ಯಾವತ್ತೂ ದೆಹಲಿಯ ನಿಯಂತ್ರಣಕ್ಕೆ ಸಿಗವುದಿಲ್ಲ ಎಂಬುದನ್ನು ಈ ಚುನಾವಣೆಯಲ್ಲಿ ಸಾಬೀತುಪಡಿಸಬೇಕು ಮತ್ತು ರಾಜ್ಯಕ್ಕೆ ದ್ರೋಹ ಬಗೆದಿರುವ ಬಿಜೆಪಿಯನ್ನು ಸಂಪೂರ್ಣವಾಗಿ ಬದಿಗಿಡಬೇಕು ಎಂದರು.
ಇದೇ ವೇಳೆ ಡಿಎಂಕೆ ಸರ್ಕಾರದ ಸಾಧನೆಗಳನ್ನು ಮತದಾರರ ಮುಂದಿಟ್ಟ ಡಿಸಿಎಂ ಉಧಯನಿಧಿ, ಮುಖ್ಯಮಂತ್ರಿಗಳ ಉಪಾಹಾರ ಯೋಜನೆ ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಂತಹ ಅಭಿವೃದ್ದಿ ಕಾರ್ಯಗಳನ್ನು ಶ್ಲಾಘಿಸಿದರು. ಕಾಂಚೀಪುರಂನಲ್ಲಿ ಪೂರ್ಣಗೊಂಡಿರುವ ವಿವಿಧ ಮೂಲಸೌಕರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಮುಂಬರುವ ಚುನಾವಣೆಯಲ್ಲಿ ಡಿಎಂಕೆಯ ಉದಯಿಸುತ್ತಿರುವ ಸೂರ್ಯ ಚಿಹ್ನೆಗೆ ಮತ ನೀಡಿ ಬೆಂಬಲಿಸುವಂತೆ ಮನವಿ ಮಾಡಿದರು.

ಸ್ಟಾಲಿನ್​ ಪ್ರಚಾರ

ಸಿಎಂ ಎಂ.ಕೆ. ಸ್ಟಾಲಿನ್ ಇಂದು (ಮಾ.31 ಮಂಗಳವಾರ) ದಿವಂಗತ ಎಂ. ಕರುಣಾನಿಧಿ ತವರು ಪಟ್ಟಣವಾದ ತಿರುವರೂರಿನಿಂದ ತಮ್ಮ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಇತ್ತ ಪ್ರತಿಪಕ್ಷ ನಾಯಕ ಪಳನಿಸ್ವಾಮಿ ಬಿಜೆಪಿಗೆ ಹಂಚಿಕೆಯಾಗಿರುವ ಮೈಲಾಪುರ ಕ್ಷೇತ್ರದಿಂದ ತಮ್ಮ ಪ್ರಚಾರವನ್ನು ಆರಂಭಿಸಲಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಯು ಏಪ್ರಿಲ್ 23 ರಂದು ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net