ಎಲ್ಲಿ ಹೋಯ್ತು ಆತ್ಮನಿರ್ಭರತೆ...? ವಿದೇಶಾಂಗ ನೀತಿಯ ಸಂವಹನ ವೈಫಲ್ಯಕ್ಕೆ ಕಾಂಗ್ರೆಸ್‌ ಕಿಡಿ | India-US Trade Deal

India-US Trade Deal |
India-US Trade Deal |
Published on
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಇತ್ತೀಚಿನ ದೂರವಾಣಿ ಸಂಭಾಷಣೆ ಹಾಗೂ ಅದರ ಬೆನ್ನಲ್ಲೇ ಘೋಷಣೆಯಾದ ವ್ಯಾಪಾರ ಒಪ್ಪಂದವು ಭಾರತೀಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಈ ಬೆಳವಣಿಗೆಯನ್ನು ಕಾಂಗ್ರೆಸ್ ಪಕ್ಷವು ಸರ್ಕಾರದ ಸಂವಹನ ವೈಫಲ್ಯ ಎಂದು ಟೀಕಿಸಿದೆ.
ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಕಾಂಗ್ರೆಸ್​ ನಾಯಕ ಜೈರಾಮ್​ ರಮೇಶ್​, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಪರಸ್ಪರ ಮಾತನಾಡಿದಂತೆ ಕಂಡುಬರುತ್ತಿದೆ, ಈ ಮಾಹಿತಿಯನ್ನು ಭಾರತದ ಕಡೆಯಿಂದ ಒದಗಿಸಲಾಗಿಲ್ಲ ಎಂದಿದ್ದಾರೆ.
ಭಾರತವು ತನ್ನ ಸರ್ಕಾರದ ಕ್ರಮಗಳ ಬಗ್ಗೆ ಅಧ್ಯಕ್ಷ ಟ್ರಂಪ್ ಅಥವಾ ಅವರ ನೇಮಕಗೊಂಡವರಿಂದ ಮಾತ್ರ ತಿಳಿದುಕೊಳ್ಳುತ್ತದೆ ಎಂದಿರುವ ಕಾಂಗ್ರೆಸ್​​ ನಾಯಕ, ಪರಿಸ್ಥಿತಿಯನ್ನು ವಿವರಿಸಲು ಟ್ರಂಪ್-ನಿರ್ಭರ್ತ (ಟ್ರಂಪ್ ಮೇಲಿನ ಅವಲಂಬನೆ) ಎಂಬ ಪದಗುಚ್ಛವನ್ನು ಬಳಸಿದ್ದಾರೆ.

ಟ್ರಂಪ್​ ಪೋಸ್ಟ್​​

ಸುಂಕ ಕಡಿತ ಮತ್ತು ವ್ಯಾಪಾರ ಒಪ್ಪಂದದ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​, ಎರಡೂ ದೇಶಗಳು ವ್ಯಾಪಾರ ಒಪ್ಪಂದಕ್ಕೆ ಬಂದಿವೆ ಎಂದು ಘೋಷಿಸಿದ್ದಾರೆ.
ಇದರ ಅಡಿಯಲ್ಲಿ ಅಮೆರಿಕಕ್ಕೆ ರಫ್ತು ಮಾಡುವ ಭಾರತೀಯ ಸರಕುಗಳ ಮೇಲಿನ ಸುಂಕವನ್ನು 25% ರಿಂದ 18% ಕ್ಕೆ ಇಳಿಸಲಾಗುವುದು, ಇದು ತಕ್ಷಣದಿಂದ ಜಾರಿಗೆ ಬರಲಿದೆ ಎಂದರು. ಪ್ರಧಾನಿ ಮೋದಿಯನ್ನು ಉತ್ತಮ ಸ್ನೇಹಿತ ಎಂದು ಬಣ್ಣಿಸಿರುವ ಟ್ರಂಪ್​, ಈ ಒಪ್ಪಂದವು ಇಬ್ಬರು ನಾಯಕರ ನಡುವಿನ ನೇರ ಮಾತುಕತೆಯ ಬಳಿಕವೇ ನಡೆಯಿತು ಎಂದಿದ್ದಾರೆ.

ಪ್ರಧಾನಿ ಮೋದಿ ಪೋಸ್ಟ್​

ಇದೇ ವಿಷಯವಾಗಿ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಪ್ರಧಾನಿ ಮೋದಿ, ತಮ್ಮ ಮತ್ತು ಟ್ರಂಪ್​ ನಡುವಿನ ಸಂಭಾಷಣೆಯನ್ನು ದೃಢಪಡಿಸಿದರು ಮತ್ತು ಸುಂಕ ಕಡಿತವನ್ನು ಸ್ವಾಗತಿಸಿದರು. ಇಂದು ನನ್ನ ಆತ್ಮೀಯ ಸ್ನೇಹಿತ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಿದ್ದು ಅದ್ಭುತ ಅನುಭವ, ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು ಈಗ 18% ರಷ್ಟು ಕಡಿಮೆ ಸುಂಕವನ್ನು ಹೊಂದಿರುವುದು ಸಂತೋಷ ತಂದಿದೆ ಎಂದು ಪ್ರಧಾನಿ ಹೇಳಿದ್ದು, ಭಾರತದ 1.4 ಬಿಲಿಯನ್ ಜನರ ಪರವಾಗಿ ಟ್ರಂಪ್‌ಗೆ ಧನ್ಯವಾದ ಅರ್ಪಿಸಿದ್ದಾರೆ.
ಎರಡು ದೊಡ್ಡ ಆರ್ಥಿಕತೆಗಳು ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಗಳ ನಡುವಿನ ಸಹಕಾರವು ಪರಸ್ಪರ ಪ್ರಯೋಜನಕಾರಿ ಬೆಳವಣಿಗೆಗೆ ಅವಕಾಶಗಳನ್ನು ತೆರೆಯುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಟ್ರಂಪ್ ನಾಯಕತ್ವವನ್ನು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಅತ್ಯಗತ್ಯ ಎಂದು ನಮೋ, ಅಮೆರಿಕಾ ಅಧ್ಯಕ್ಷರ ಶಾಂತಿ ನೆಲೆಸುವ ಪ್ರಯತ್ನಗಳನ್ನು ಭಾರತ ಸಂಪೂರ್ಣವಾಗಿ ಬೆಂಬಲಿಸುತ್ತದೆ ಮತ್ತು ದ್ವಿಪಕ್ಷೀಯ ಪಾಲುದಾರಿಕೆಯನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯಲು ಎದುರು ನೋಡುತ್ತಿದೆ ಎಂದು ಹೇಳಿದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net