ದ್ವೇಶ ಬಿಟ್ಟು ದೇಶ ಕಟ್ಟಬೇಕು.... ಒಗ್ಗಟ್ಟಿನ ಮಂತ್ರ ಜಪಿಸಿದ ರೆಹಮಾನ್ ...ಬಾಂಗ್ಲಾ ಹಿಂದೂಗಳಿಗೂ ಸಿಗಲಿದೆಯೇ ಅಭಯ..? | Tarique Rahman

Tarique Rahman
Tarique Rahman
Published on
ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಪುತ್ರ ತಾರಿಕ್ ರೆಹಮಾನ್, ಒಟ್ಟಾಗಿ ಮುಂದುವರಿಯುವ ಕರೆ ನೀಡಿದ್ದು, 17 ವರ್ಷಗಳ ಬಳಿಕ ದೇಶಕ್ಕೆ ಮರಳಿರುವ ರೆಹಮಾನ್, ಪ್ರತಿಯೊಂದು ಸಮುದಾಯವೂ ಸುರಕ್ಷಿತ ಮತ್ತು ಮೌಲ್ಯಯುತ ಎಂದು ಭಾವಿಸುವ ಬಾಂಗ್ಲಾದೇಶವನ್ನು ಬಯಸುತ್ತೇನೆ ಎಂದು ಹೇಳಿದರು.
ಶನಿವಾರ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ರೆಹಮಾನ್, ತಮಗೆ ದೊರೆತ ಆತ್ಮೀಯ ಸ್ವಾಗತಕ್ಕಾಗಿ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ತಮಗೆ ಮತ್ತು ತಮ್ಮ ಕುಟುಂಬಕ್ಕೆ ನೀಡಿದ ಗೌರವ ಮತ್ತು ಪ್ರೀತಿಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದಿರುವ ಅವರು, ತಮ್ಮೊಂದಿಗೆ ಧೃಢವಾಗಿ ನಿಂತ ಬಿಎನ್‌ಪಿ ಕಾರ್ಯಕರ್ತರನ್ನು ಶ್ಲಾಘಿಸಿದರು.
ಬಾಂಗ್ಲಾದೇಶದಾದ್ಯಂತ ಇರುವ ಪ್ರಿಯ ಸ್ನೇಹಿತರೇ, ಸಹೋದರಿಯರೇ, ಸಹೋದರರೇ, ಕಳೆದ ಗುರುವಾರ ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯುವ ದಿನ, 17 ವರ್ಷಗಳ ಬಳಿಕ ನಾನು ನನ್ನ ತಾಯ್ನಾಡಿನ ಮಣ್ಣಿಗೆ ಮರಳಿದ ದಿನ ಎಂದು ಪೋಸ್ಟ್ ಮಾಡಿದ್ದಾರೆ. ನೀವು ಕೋರಿದ ಆ ಸ್ವಾಗತ ಕ್ಷಣ, ಢಾಕಾದ ರಸ್ತೆಗಳಲ್ಲಿನ ಆ ಜನ ಸಮುದ್ರ ಮತ್ತು ಲಕ್ಷಾಂತರ ಜನರ ಪ್ರಾರ್ಥನೆಗಳನ್ನು ಎಂದಿಗೂ ಮರೆಯುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ನಾಗರಿಕ ಸಮಾಜದ ಸದಸ್ಯರು, ಯುವಕರು, ವೃತ್ತಿಪರರು, ರೈತರು, ಕಾರ್ಮಿಕರು ಮತ್ತು ಎಲ್ಲಾ ಹಂತದ ನಾಗರಿಕರಿಗೆ, ಬಾಂಗ್ಲಾದೇಶದ ನಿಜವಾದ ಶಕ್ತಿ ಯಾವಾಗಲೂ ಆ ದೇಶದ ಜನರಲ್ಲಿದೆ, ಒಗ್ಗಟ್ಟಿನಿಂದ ಇರುತ್ತದೆ ಎಂದು ನಮಗೆ ನೆನಪಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಅವರು ಹೇಳಿದರು.

ಮಾಧ್ಯಮದವರಿಗೂ ಧನ್ಯವಾದ

ಸ್ವಾಗತದ ಐತಿಹಾಸಿಕ ಕ್ಷಣಗಳನ್ನು ವರದಿ ಮಾಡಿದ್ದಕ್ಕಾಗಿ ಮಾಧ್ಯಮಗಳಿಗೆ ಧನ್ಯವಾದ ಅರ್ಪಿಸಿದ ತಾರಿಕ್ ರೆಹಮಾನ್, ಪತ್ರಕರ್ತರ ಸೇವೆ ತುಂಬಾ ಮುಖ್ಯ ಎಂದು ಹೇಳಿದರು. ಡಿಸೆಂಬರ್ 25 ರಂದು ತಮ್ಮ ಭಾಷಣದ ಕುರಿತು ಮಾತನಾಡಿದ ಅವರು, ಇದು ಕೇವಲ ಕನಸಲ್ಲ, ಬದಲಾಗಿ ಶಾಂತಿ ಮತ್ತು ಘನತೆ ವೃದ್ಧಿಯಾಗುವ ಬಾಂಗ್ಲಾದೇಶವನ್ನು ನಿರ್ಮಿಸುವ ಯೋಜನೆಯಾಗಿದೆ ಎಂದು ಹೇಳಿದರು. ಎಲ್ಲರಿಗೂ ಧನ್ಯವಾದ ಅರ್ಪಿಸುತ್ತಾ, ದೇವರು ಇಡೀ ಬಾಂಗ್ಲಾದೇಶವನ್ನು ಆಶೀರ್ವದಿಸಲಿ ಎಂದು ಪ್ರಾರ್ಥಿಸಿದರು.
ಫೆಬ್ರವರಿ 12 ರಂದು ನಡೆಯಲಿರುವ ಬಾಂಗ್ಲಾದೇಶದ ಸಂಸತ್ ಚುನಾವಣೆಗೆ ಮುಂಚಿತವಾಗಿ ರೆಹಮಾನ್ ಬಾಂಗ್ಲಾದೇಶಕ್ಕೆ ಮರಳಿದ್ದಾರೆ. 2008 ರಲ್ಲಿ ಸ್ವಯಂ ಗಡಿಪಾರು ಆರಂಭಿಸಿದ ರೆಹಮಾನ್, ಮುಂಬರುವ ಚುನಾವಣೆಯಲ್ಲಿ ತಮ್ಮ ಪೂರ್ವಜರ ಬೊಗುರಾ ಸದರ್ (ಬೊಗುರಾ-6) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net