ಹಾರ್ಮೊಜ್ ಜಲಸಂಧಿ ಬಂದ್?: ಇರಾನ್ ಮೇಲೆ ಭೀಕರ ದಾಳಿ ನಡೆಸಿದ ಅಮೆರಿಕ ಸೇನೆ: ಓರ್ವ ಸಾವು, ನಾಲ್ವರಿಗೆ ಗಾಯ | US military attack

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಸೇನೆ ಮತ್ತು ಇರಾನಿನ ಪಡೆಗಳ ನಡುವೆ ಸಂಘರ್ಷ ಮುಂದುವರೆದಿದ್ದು, ಹಾರ್ಮೊಜ್ ಜಲಸಂಧಿ ಬಂದ್ ಮತ್ತು ವಾಣಿಜ್ಯ ಹಡಗುಗಳ ಮೇಲಿನ ದಾಳಿಗೆ ಪ್ರತೀಕಾರವಾಗಿ ಅಮೆರಿಕ ಸೇನೆ(US military attack), ಇರಾನ್ ಮೇಲೆ ಭೀಕರ ದಾಳಿ ನಡೆಸಿದೆ ಎಂದು ಸೋಮವಾರ(ಜು. 13) ವರದಿಯಾಗಿದೆ.
ಜಾಗತಿಕ ಪೂರೈಕೆಯ ಸುಮಾರು ಐದನೇ ಒಂದು ಭಾಗ ಹಾದುಹೋಗುವ ಕಿರಿದಾದ ಹೊರ್ಮುಜ್ ಜಲಸಂಧಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ವಾಣಿಜ್ಯ ಹಡಗನ್ನು ಗುರಿಯಾಗಿಸಿಕೊಂಡ ನಡೆಸಿದ ದಾಳಿಗಳಿಗೆ ಪ್ರತಿಯಾಗಿ ಈ ದಾಳಿ ನಡೆದಿದೆ ಎಂದು ಅಮೆರಿಕ ಸೇನೆ ಹೇಳಿದೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಯುಎಸ್ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್), ಹಾರ್ಮುಜ್ ಜಲಸಂಧಿಯ ಮೂಲಕ ಹಾದು ಹೋಗುವ ಅಂತರರಾಷ್ಟ್ರೀಯ ಹಡಗುಗಳ ಮೇಲೆ ದಾಳಿ ಮಾಡುವುದನ್ನು ಮುಂದುವರಿಸುವ ಇರಾನ್‌ನ ಸಾಮರ್ಥ್ಯವನ್ನು ಕುಗ್ಗಿಸಲು ನಿಖರವಾದ ಯುದ್ಧಸಾಮಗ್ರಿಗಳೊಂದಿಗೆ ಬಹು ಸ್ಥಳಗಳಲ್ಲಿ ಅಮೆರಿಕ ಪಡೆಗಳು ದಾಳಿ ನಡೆಸಿವೆ ಎಂದು ತಿಳಿಸಿದೆ. 
ಈ ದಾಳಿಯಲ್ಲಿ ಇರಾನಿನ ಮಿಲಿಟರಿ ವಾಯು ರಕ್ಷಣಾ ವ್ಯವಸ್ಥೆಗಳು, ಕರಾವಳಿ ರಾಡಾರ್ ತಾಣಗಳು, ಕ್ಷಿಪಣಿ ಮತ್ತು ಡ್ರೋನ್ ಸಾಮರ್ಥ್ಯಗಳು ಮತ್ತು ಸಣ್ಣ ದೋಣಿಗಳು ಸೇರಿವೆ. ಇದೇ ಮೊದಲ ಬಾರಿಗೆ ಅಮೆರಿಕದ ಯುದ್ಧ ವಿಮಾನಗಳು, ನೌಕಾ ಹಡಗುಗಳು, ಏಕಮುಖ ದಾಳಿ ವೈಮಾನಿಕ ಡ್ರೋನ್‌ಗಳು ಮತ್ತು ಏಕಮುಖ ದಾಳಿ ಸಮುದ್ರ ಡ್ರೋನ್‌ಗಳನ್ನು ನಿಯೋಜಿಸಿರುವುದಾಗಿ ಅದು ಹೇಳಿದೆ.
ಮಾತುಕತೆ ನಿರರ್ಥಕ 
ಇನ್ನೂ ಅಮೆರಿಕದ ದಾಳಿ ಕುರಿತು ಹೇಳಿಕೆ ನೀಡಿರುವ ಇರಾನ್, ಮಹ್‌ಶಹರ್‌ನಲ್ಲಿರುವ ಕೃಷಿ ನೀರು ಪಂಪಿಂಗ್ ಕೇಂದ್ರದ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಕನಿಷ್ಠ ಒಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಈ ದಾಳಿಗಳು ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಮಾತುಕತೆಯನ್ನು ನಿರರ್ಥಕಗೊಳಿಸಿವೆ ಎಂದು ಹೇಳಿದೆ.
ಅಮೆರಿಕದ ಪಡೆಗಳು ಹಾರ್ಮುಜ್ ಸುತ್ತಮುತ್ತಲಿನ ತನ್ನ ಮಿಲಿಟರಿ ತಾಣಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿದ್ದಂತೆ, ಇರಾನ್ ಕೊಲ್ಲಿಯಲ್ಲಿ ಅಮೆರಿಕಕ್ಕೆ ಸಂಬಂಧಿಸಿದ ತಾಣಗಳ ಮೇಲೆ ಪ್ರತಿದಾಳಿ ನಡೆಸಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net