ವಾಷಿಂಗ್ಟನ್‌ನಲ್ಲಿ ಪ್ರತಿಭಟನೆ: ವರದಿಗಾರರೊಂದಿಗೆ ಅಧ್ಯಕ್ಷರ ಭೋಜನಕೂಟ; ಟ್ರಂಪ್​-ಎಪ್ಸ್ಟೀನ್ ಜೊತೆಗಿರುವ ವಿಡಿಯೋ ಪ್ರದರ್ಶನ! Donald Trump

​ ಭೋಜನಕೂಟಕ್ಕೂ ಮುನ್ನ ಹೊಟೇಲ್​ ಬಿಲ್ಡಿಂಗ್​ ಮೇಲೆ ಟ್ರಂಪ್​-ಜೆಫ್ರಿ ಎಪ್ಸ್ಟೀನ್ ವಿಡಿಯೋ ಪ್ರದರ್ಶನ
​ ಭೋಜನಕೂಟಕ್ಕೂ ಮುನ್ನ ಹೊಟೇಲ್​ ಬಿಲ್ಡಿಂಗ್​ ಮೇಲೆ ಟ್ರಂಪ್​-ಜೆಫ್ರಿ ಎಪ್ಸ್ಟೀನ್ ವಿಡಿಯೋ ಪ್ರದರ್ಶನ
Published on

ಪ್ರಮುಖ ಮುಖ್ಯಾಂಶಗಳು

  • ವರದಿಗಾರರೊಂದಿಗೆ ಡೊನಾಲ್ಡ್​ ಟ್ರಂಪ್​ ಭೋಜನಕೂಟ
  • ​ ಭೋಜನಕೂಟಕ್ಕೂ ಮುನ್ನ ಹೊಟೇಲ್​ ಬಿಲ್ಡಿಂಗ್​ ಮೇಲೆ ಟ್ರಂಪ್​-ಜೆಫ್ರಿ ಎಪ್ಸ್ಟೀನ್ ವಿಡಿಯೋ ಪ್ರದರ್ಶನ
  • ಜಗತ್ತಿನಾದ್ಯಂತ ಹೊಸ ಸಂಚಲನಕ್ಕೆ ಕಾರಣವಾದ ಘಟನೆ
ವಾಷಿಂಗ್ಟನ್: ಅಮೆರಿಕದ ರಾಜಕೀಯದ ಶಕ್ತಿ ಕೇಂದ್ರ ವಾಷಿಂಗ್ಟನ್ ಡಿಸಿಯಲ್ಲಿ ಶುಕ್ರವಾರ (ಏ. 24)  ರಾತ್ರಿ ನಡೆದ ಒಂದು ಘಟನೆ ಇಡೀ ಜಗತ್ತಿನ ಗಮನ ಸೆಳೆದಿದೆ. ಪ್ರತಿಷ್ಠಿತ ಶ್ವೇತಭವನದ ವರದಿಗಾರರ ಭೋಜನಕೂಟಕ್ಕೆ ಒಂದು ದಿನ ಬಾಕಿ ಇರುವಾಗ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ನಿದ್ದೆಗೆಡಿಸುವಂತಹ ಪ್ರತಿಭಟನೆಯೊಂದು ನಗರದ ಹೃದಯಭಾಗದಲ್ಲಿ ನಡೆದಿದೆ.
ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನ ಬೃಹತ್ ಕಟ್ಟಡದ ಗೋಡೆಯ ಮೇಲೆ ಪ್ರತಿಭಟನಾಕಾರರು ಪ್ರೊಜೆಕ್ಟರ್ ಮೂಲಕ ಅಧ್ಯಕ್ಷ ಟ್ರಂಪ್ ಮತ್ತು ಕುಖ್ಯಾತ ಶಿಶುಕಾಮಿ ಜೆಫ್ರಿ ಎಪ್ಸ್ಟೀನ್ ನಡುವಿನ ಸಂಬಂಧವನ್ನು ಸಾರುವ ಫೋಟೋ ಹಾಗೂ ದಾಖಲೆಗಳನ್ನು ಪ್ರದರ್ಶಿಸಿದ್ದಾರೆ. ಇದು ಕೇವಲ ದೃಶ್ಯಗಳಿಗಷ್ಟೇ ಸೀಮಿತವಾಗಿರಲಿಲ್ಲ; ಎಪ್ಸ್ಟೀನ್ ಇಮೇಲ್‌ಗಳ ಓದುವಿಕೆಯನ್ನು ಒಳಗೊಂಡ ಆಡಿಯೋ ಕೂಡ ಬೀದಿಯುದ್ದಕ್ಕೂ ಮೊಳಗುತ್ತಿತ್ತು. ಇದನ್ನು ನೋಡಲು ನೂರಾರು ಜನರು ಜಮಾಯಿಸಿದ್ದರು.

ಟ್ರಂಪ್ ಮತ್ತು ಮಾಧ್ಯಮಗಳ ನಡುವಿನ 'ಬಿಗ್ ಫೈಟ್'

ಈ ವರ್ಷದ ಭೋಜನಕೂಟಕ್ಕೆ ಹೆಚ್ಚಿನ ಮಹತ್ವ ಬರಲು ಕಾರಣವಿದೆ. ಅಧ್ಯಕ್ಷರಾದ ಮೇಲೆ ಇದೇ ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ತಮ್ಮ ಮೊದಲ ಅವಧಿಯಲ್ಲಿ ಮತ್ತು 2025ರಲ್ಲಿ ಈ ಕಾರ್ಯಕ್ರಮವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದ ಟ್ರಂಪ್, ಪತ್ರಿಕಾ ವರದಿಗಳನ್ನು ಯಾವಾಗಲೂ ನಕಲಿ ಸುದ್ದಿ ಎಂದು ಜರೆಯುತ್ತಲೇ ಇರುತ್ತಿದ್ದರು. 
ಇತ್ತೀಚೆಗಷ್ಟೇ ತಮ್ಮ ಟ್ರೂತ್ ಸೋಷಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ, ಪತ್ರಿಕಾ ಮಾಧ್ಯಮಗಳು ನನ್ನ ಪಾಲಿಗೆ ಅಸಾಧಾರಣವಾಗಿ ಕೆಟ್ಟದ್ದಾಗಿ ನಡೆದುಕೊಂಡಿವೆ ಎಂದು ಕಿಡಿಕಾರಿದ್ದರು. ಹೀಗಿದ್ದರೂ, ಅವರು ಈ ವರ್ಷ ಪತ್ರಕರ್ತರೊಂದಿಗೆ ಔತಣಕೂಟಕ್ಕೆ ಕುಳಿತುಕೊಳ್ಳುತ್ತಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.

ಪತ್ರಕರ್ತರ ಆಕ್ರೋಶ ಮತ್ತು ಬಹಿರಂಗ ಪತ್ರ

ಮಾಧ್ಯಮಗಳ ಮೇಲೆ ನಿರಂತರ ದಾಳಿ ಮಾಡುವ ಟ್ರಂಪ್ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ ಸ್ವತಃ ಪತ್ರಕರ್ತರಲ್ಲೇ ಭಿನ್ನಾಭಿಪ್ರಾಯ ಮೂಡಿದೆ. ನೂರಾರು ಪತ್ರಕರ್ತರು ಸೇರಿ ಒಂದು ಮುಕ್ತ ಪತ್ರಕ್ಕೆ ಸಹಿ ಹಾಕಿದ್ದಾರೆ. ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಿದ ಅಧ್ಯಕ್ಷರನ್ನು ಅದೇ ವೇದಿಕೆಯಲ್ಲಿ ನೇರವಾಗಿ ಎದುರಿಸಬೇಕು ಎಂದು ಈ ಪತ್ರದ ಮೂಲಕ ಹಾಜರಿದ್ದವರಿಗೆ ಒತ್ತಾಯಿಸಲಾಗಿದೆ.
ವರದಿಗಾರರ ಮೇಲೆ ನಿರ್ಬಂಧಗಳನ್ನು ಬಿಗಿಗೊಳಿಸುವುದು ಮತ್ತು ಶ್ವೇತಭವನದ ಪತ್ರಿಕಾ ಪೂಲ್‌ನಿಂದ ಕೆಲವು ಸಂಸ್ಥೆಗಳನ್ನು ನಿಷೇಧಿಸಿದ ಇತಿಹಾಸ ಟ್ರಂಪ್ ಆಡಳಿತಕ್ಕಿದೆ. ಆದರೆ, ಆಶ್ಚರ್ಯವೆಂದರೆ ಇದೇ ಟ್ರಂಪ್ ಫೋನ್ ಕರೆಗಳ ಮೂಲಕ ವರದಿಗಾರರೊಂದಿಗೆ ನೇರವಾಗಿ ಮಾತನಾಡುತ್ತಾ ಸದಾ ಸುದ್ದಿಯಲ್ಲಿರುವ ಕಲೆಯನ್ನೂ ಕರಗತ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಅಮೆರಿಕದ ಜನ,(ಏಜನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net