ಉಸ್ಮಾನ್​ ಕೊಲೆಗೆ ಸರ್ಕಾರವೇ ಹೊಣೆ..ನೀವೂ ದೇಶವನ್ನು ತೊರೆಯಬೇಕಾಗುತ್ತದೆ ಎಂದು ಯೂನಸ್​ಗೆ ಎಚ್ಚರಿಕೆ ನೀಡಿದ ಹಾದಿ ಸಹೋದರ | Bangladesh

Bangladesh | ಬಾಂಗ್ಲಾದಲ್ಲಿ ಹತ್ಯೆಗೀಡಾದ ಉಸ್ಮಾನ್ ಬಿನ್ ಹಾದಿ
Bangladesh | ಬಾಂಗ್ಲಾದಲ್ಲಿ ಹತ್ಯೆಗೀಡಾದ ಉಸ್ಮಾನ್ ಬಿನ್ ಹಾದಿ
Published on
Bangladesh: ಡಿಸೆಂಬರ್ 12 ರಂದು ಬಿಜೋಯ್‌ನಗರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಗುಂಡೇಟಿಗೆ ಬಲಿಯಾದ ಯುವ ನಾಯಕ ಶರೀಫ್ ಉಸ್ಮಾನ್ ಬಿನ್ ಹಾದಿ ಹತ್ಯೆಗೆ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವೇ ನೇರ ಹೊಣೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಉಸ್ಮಾನ್​ ಸಹೋದರ ಒಮರ್ ಬಿನ್ ಹಾದಿ, ಸರ್ಕಾರವು ನನ್ನ ಸಹೋದರನನ್ನು ರಕ್ಷಿಸುವಲ್ಲಿ ವಿಫಲವಾಗಿದ್ದು, ಇದರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಈ ಮಧ್ಯಂತರ ಸರ್ಕಾರದ ಆಡಳಿತದಲ್ಲೇ ಈ ಕೊಲೆ ನಡೆದಿರುವುದರಿಂದ, ಆ ವೇಳೆ ಅಧಿಕಾರದಲ್ಲಿದ್ದವರು ಇದರ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ನೀವು ಉಸ್ಮಾನ್ ಹಾದಿಯನ್ನು ಕೊಲ್ಲುವಂತೆ ಮಾಡಿದ್ದೀರಿ, ಈಗ ಇದನ್ನೇ ಬಂಡವಾಳವಾಗಿಟ್ಟುಕೊಂಡು ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸುತ್ತಿದ್ದೀರಿ, ಸರ್ಕಾರ ಈ ಚುನಾವಣೆಯನ್ನು ವಿಧ್ವಂಸಗೊಳಿಸಲು ಪ್ರಯತ್ನಿಸುತ್ತಿದೆ ಎಂದಿರುವ ಒಮರ್, ಒಸ್ಮಾನ್ ಹಾದಿಯನ್ನು ಕೊಂದವರು ನೀವೇ, ಈಗ ನೀವು ಇದನ್ನೇ ಸಮಸ್ಯೆಯಾಗಿ ಬಳಸಿಕೊಂಡು ಚುನಾವಣೆಯನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಿದ್ದೀರಿ ಎಂದು ಕಿಡಿಕಾರಿದರು. ಚುನಾವಣಾ ವಾತಾವರಣಕ್ಕೆ ಹಾನಿಯಾಗದಂತೆ ನನ್ನ ಸಹೋದರನ ಹಂತಕರ ತ್ವರಿತ ವಿಚಾರಣೆ ನಡೆಸಿ, ಈ ವಿಷಯದಲ್ಲಿ ಸರ್ಕಾರ ಮುಂದುವರೆಯದೆ ಇದ್ದರೆ, ನೀವು ಕೂಡ ಮುಂದೊಂದು ದಿನ ಬಾಂಗ್ಲಾದೇಶದಿಂದ ಪಲಾಯನ ಮಾಡಬೇಕಾಗಬಹುದು ಎಂದು ಹೇಳಿರುವುದಾಗಿ Thedailystar.net ವರದಿ ಮಾಡಿದೆ.

ಹಾದಿ ಹತ್ಯೆ ಮತ್ತು ಪ್ರತಿಭಟನೆಗಳು

ಡಿಸೆಂಬರ್ 12 ರಂದು ಢಾಕಾದ ಬಿಜೋಯ್‌ನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಪರಿಚಿತ ಬಂದೂಕುಧಾರಿಗಳು 32 ವರ್ಷದ ಹಾದಿ ತಲೆಗೆ ಗುಂಡು ಹಾರಿಸಿದ್ದರು. ನಂತರ ಅವರನ್ನು ಸಿಂಗಾಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಕೊನೆಯುಸಿರೆಳೆದಿದ್ದಾರೆ. ಹಾದಿ ನಿಧನದ ಬಳಿಕ ಬಾಂಗ್ಲಾದೇಶದ ಹಲವಾರು ಭಾಗಗಳಲ್ಲಿ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳು ನಡೆದಿದ್ದು, ಗುರುವಾರ ಚಟ್ಟೋಗ್ರಾಮ್‌ನಲ್ಲಿ ಭಾರತೀಯ ಸಹಾಯಕ ಹೈಕಮಿಷನರ್ ನಿವಾಸದ ಮೇಲೆ ಕಲ್ಲು ಎಸೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾದಿಯನ್ನು ಶನಿವಾರ ಢಾಕಾ ವಿಶ್ವವಿದ್ಯಾಲಯದ ಮಸೀದಿಯ ಬಳಿ, ರಾಷ್ಟ್ರೀಯ ಕವಿ ಕಾಜಿ ನಜ್ರುಲ್ ಇಸ್ಲಾಂ ಸಮಾಧಿಯ ಪಕ್ಕದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net