ರಣ ಭೀಕರ ಪ್ರವಾಹಕ್ಕೂ ಅಲುಗಾಡಲಿಲ್ಲ ಈ ಮನೆ! ವಿಡಿಯೋ ವೈರಲ್​ ಬೆನ್ನಲ್ಲೇ ಕಟ್ಟಿದವನಿಗೆ 'ನೇಪಾಳ ರತ್ನ' ಕೊಡಿ ಎಂದ ನೆಟ್ಟಿಗರು | Nepal Floods

ರಣ ಭೀಕರ ಪ್ರವಾಹದಲ್ಲಿ ಅಲುಗಾಡದ ಮನೆ
ರಣ ಭೀಕರ ಪ್ರವಾಹದಲ್ಲಿ ಅಲುಗಾಡದ ಮನೆ
Published on

ಪ್ರಮುಖ ಮುಖ್ಯಾಂಶಗಳು

  • ನೇಪಾಳದಲ್ಲಿ ಸಂಭವಿಸಿದ ಹಠಾತ್​ ಜಲಪ್ರಳಯಕ್ಕೆ ಕನಿಷ್ಠ 600ಕ್ಕೂ ಹೆಚ್ಚು ಮಂದಿ ದುರಂತ ಸಾವು
  • ಪ್ರವಾಹದ ಭೀಕರತೆಗೆ ಕೊಚ್ಚಿಹೋದ ಅದೆಷ್ಟೋ ಬೃಹತ್​ ಕಟ್ಟಡಗಳು, ಕಾರುಗಳು
  • ಈ ಮಧ್ಯೆ, ರಣ ಭೀಕರ ಪ್ರವಾಹದಲ್ಲಿ ಕಿಂಚಿತ್ತು ಅಲುಗಾಡಲಿಲ್ಲ ಹಸಿರು ಬಣ್ಣದ ಮನೆ
Nepal Floods: ನೇಪಾಳದಲ್ಲಿ ಸಂಭವಿಸಿದ ಹಠಾತ್​ ಜಲಪ್ರಳಯಕ್ಕೆ ಇದೀಗ 600ಕ್ಕೂ ಹೆಚ್ಚು ಮಂದಿ ದುರಂತ ಸಾವಿಗೀಡಾಗಿದ್ದು, 3 ಸಾವಿರಕ್ಕೂ ಅಧಿಕ ಜನರು ಇನ್ನೂ ಮಿಸ್ಸಿಂಗ್ ಪಟ್ಟಿಯಲ್ಲಿದ್ದಾರೆ. ಪ್ರವಾಹದ ಭೀಕರತೆಗೆ ಅದೆಷ್ಟೋ ಬೃಹತ್​ ಕಟ್ಟಡಗಳು, ಮನೆಗಳು ಧರೆಗೆ ಉರುಳಿ, ಸಾವಿರಾರು ಜನರ ಜೀವ ಮತ್ತು ಬದುಕುವ ಭರವಸೆಯನ್ನು ಕಸಿದುಕೊಂಡಿರುವುದು ನಿಜಕ್ಕೂ ಘೋರ ದುರಂತ. ಘಟನೆಗೆ ಸಂಬಂಧಿಸಿದಂತೆ ಹಲವಾರು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಒಂದು ದೃಶ್ಯ ಮಾತ್ರ ನೆಟ್ಟಿಗರನ್ನು ಭಾರಿ ಅಚ್ಚರಿಗೆ ದೂಡಿದೆ. 
ಭಟೆಕೋಶಿ ನದಿಯು ಉಕ್ಕಿ ಹರಿದಿದ್ದು, ನೇಪಾಳದ ಉತ್ತರ ಭಾಗವನ್ನು ಭಾಗಶಃ ಧ್ವಂಸಗೊಳಿಸಿದೆ. ನದಿಯ ರಭಸದ ಹರಿವಿಗೆ ಸಮೀಪದ ಹಳ್ಳಿಗಳು ನಾಶವಾಗಿವೆ. ಮತ್ತೊಂದೆಡೆ, ಹಿಮಾಲಯದಲ್ಲಿ ರೂಪುಗೊಂಡಿರುವ ಸರೋವರ ಮತ್ತೆ ಬತ್ತಬಹುದು ಎಂದು ಚೀನಾ ಎಚ್ಚರಿಕೆ ಕೊಟ್ಟಿದೆ. ಜಲಪ್ರಳಯಕ್ಕೆ ದೊಡ್ಡ ದೊಡ್ಡ ಕಟ್ಟಡಗಳೇ ಕೊಚ್ಚಿ ಹೋಗುತ್ತಿರುವಾಗ, ಇಲ್ಲೊಂದು ಹಸಿರು ಬಣ್ಣದ ಮನೆಯೊಂದು ಮಾತ್ರ ಕಿಂಚಿತ್ತು ಅಲುಗಾಡದೆ ಇದ್ದಲ್ಲೇ ಇದ್ದಿದ್ದನ್ನು ಕಂಡು ನೆಟ್ಟಿಗರು ಭಾರಿ ಅಚ್ಚರಿಗೆ ಒಳಗಾಗಿದ್ದಾರೆ.
ವಿಡಿಯೋದಲ್ಲಿ ಕಾಣಿಸುವ ಹಸಿರು ಬಣ್ಣದ ಮನೆಯ ಬಾಲ್ಕನಿಯಲ್ಲಿ ಕುಟುಂಬದವರು ಜೀವ ಭಯದಿಂದ ನಿಂತಲ್ಲೇ ನಿಂತಿರುವುದು ಕಾಣಿಸುತ್ತದೆ. ಸಾವು ತಮ್ಮನ್ನು ಯಾವಾಗ ಕರೆದುಕೊಂಡು ಹೋಗುತ್ತದೋ ಎಂಬ ಆತಂಕದಿಂದಲೇ ಉಸಿರು ಬಿಗಿಹಿಡಿದು ನಿಂತಿದ್ದವರು ಕೊನೆಗೂ ಬದುಕುಳಿದಿದ್ದು ಈಗ ಪವಾಡ ಎನ್ನುವಂತಾಗಿದೆ. ಈ ದೃಶ್ಯ ವೈರಲ್ ಬೆನ್ನಲ್ಲೇ ಮನೆ ಕಟ್ಟಿದವನ ಬಗ್ಗೆ ನೆಟ್ಟಿಗರು ಮೆಚ್ಚುಗೆ, ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಮನೆಯ ಸುತ್ತಮುತ್ತಲೂ ರಭಸದಿಂದ ಹರಿಯುತ್ತಿದ್ದ ನದಿಯು, ವಾಹನಗಳನ್ನು ತನ್ನೊಂದಿಗೆ ಕರೆದುಕೊಂಡು ಹೋದರೂ ಸಹ ಇದೊಂದನ್ನು ಬಿಟ್ಟಿದ್ದು ಹಲವರನ್ನು ಬೆರಗಾಗಿಸಿದೆ. ಬಾಲ್ಕನಿಯಲ್ಲಿದ್ದ ಕುಟುಂಬಸ್ಥರು ಸುರಕ್ಷಿತವಾಗಿ ಪಾರಾಗಿರುವ ಬಗ್ಗೆ ಮಾಹಿತಿಯೂ ಲಭಿಸಿದೆ. 
ವಿಡಿಯೋ ವೈರಲ್ ಆದ ಕೆಲವೇ ಕ್ಷಣಗಳಲ್ಲಿ, ನೆಟ್ಟಿಗರು ಈ ಮನೆಯನ್ನು ಕಟ್ಟಿಸಿದ, ಅಷ್ಟು ಭದ್ರ ಅಡಿಪಾಯ ಹಾಕಿದ ವ್ಯಕ್ತಿಗೆ ಖಂಡಿತವಾಗಿ ನೇಪಾಳ ರತ್ನ ಪ್ರಶಸ್ತಿಯನ್ನು ನೀಡಬೇಕೆಂದು ಹಾಸ್ಯಸ್ಪದವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು, ಹಿಂದಿನ ತಲೆಮಾರಿನವರ ನಿರ್ಮಾಣ ಕೌಶಲ್ಯಕ್ಕೆ ಇದೊಂದು ಅದ್ಭುತ ಹಾಗೂ ಜ್ವಲಂತ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net