ಮಿಸ್ ಗ್ರ್ಯಾಂಡ್ ಥೈಲ್ಯಾಂಡ್: ಹಲ್ಲು ಹೊರಬಂದರೂ ಆತ್ಮವಿಶ್ವಾಸ ಕಳೆದುಕೊಳ್ಳದ ಸುಂದರಿ; ವಿಡಿಯೋ ವೈರಲ್​! Miss Grand Thailand

 ಕಮೋಲ್ವಾನ್ ಚಾನಾಗೊ (Kamolwan Chanago)
ಕಮೋಲ್ವಾನ್ ಚಾನಾಗೊ (Kamolwan Chanago)
Published on
ಬ್ಯಾಂಕಾಕ್: ಸೌಂದರ್ಯ ಸ್ಪರ್ಧೆ ಎಂದರೆ ಅಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿರಬೇಕು. ಕಿಂಚಿತ್ತೂ ತಪ್ಪು ನಡೆದರೂ ಅದು ದೊಡ್ಡ ಸುದ್ದಿಯಾಗುತ್ತದೆ. ಆದರೆ, ಇಲ್ಲೊಬ್ಬ ಸುಂದರಿ ವೇದಿಕೆಯ ಮೇಲೆ ನಡೆದ ಮುಜುಗರದ ಘಟನೆಯನ್ನು ತನ್ನ ಆತ್ಮವಿಶ್ವಾಸದ ಮೂಲಕವೇ ಮೆಟ್ಟಿ ನಿಂತು ಈಗ ಜಗತ್ತಿನಾದ್ಯಂತ ವೈರಲ್​ ಆಗುತ್ತಿದ್ದಾರೆ.
ಹೌದು, ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ (Miss Grand Thailand) 2026 ಸ್ಪರ್ಧೆಯ ರ‍್ಯಾಂಪ್ ವಾಕ್ ವೇಳೆ ಸ್ಪರ್ಧಿಯೊಬ್ಬಳ ಹಲ್​ಸೆಟ್​ (Dentures) ಜಾರಿಬಿದ್ದ ವಿಚಿತ್ರ ಹಾಗೂ ಅನಿರೀಕ್ಷಿತ ಘಟನೆ ನಡೆದಿದೆ.

ವೇದಿಕೆ ಮೇಲೆ ಆಗಿದ್ದೇನು?

ಬುಧವಾರ (ಮಾರ್ಚ್ 25) ರಂದು ನಡೆದ ಈ ಸ್ಪರ್ಧೆಯ ಆರಂಭಿಕ ಸುತ್ತಿನಲ್ಲಿ ಸ್ಪರ್ಧಿ ಕಮೋಲ್ವಾನ್ ಚಾನಾಗೊ (Kamolwan Chanago) ವೇದಿಕೆಯ ಮೇಲೆ ಬಂದು ತಮ್ಮನ್ನು ತಾವು ಪರಿಚಯಿಸಿಕೊಳ್ಳುತ್ತಿದ್ದರು. ಅವರು ಮಾತನಾಡಲು ಶುರು ಮಾಡಿದ ಕೆಲವೇ ಸೆಕೆಂಡುಗಳಲ್ಲಿ ಅವರ ಬಾಯಲ್ಲಿದ್ದ ಕೃತಕ ಹಲ್ಲುಗಳು (False teeth) ಅನಿರೀಕ್ಷಿತವಾಗಿ ಹೊರಬಂದವು. ಲೈವ್ ಶೋ ಹಾಗೂ ನೂರಾರು ಪ್ರೇಕ್ಷಕರ ಎದುರು ನಡೆದ ಈ ಘಟನೆ ಕ್ಷಣಕಾಲ ಎಲ್ಲರನ್ನೂ ದಂಗಾಗಿಸಿದೆ.
ಮುಜುಗರವನ್ನು ಮೆಟ್ಟಿ ನಿಂತ ಸುಂದರಿ!
ಸಾಮಾನ್ಯವಾಗಿ ಇಂತಹ ಘಟನೆ ನಡೆದಾಗ ಯಾರೇ ಆದರೂ ಗಾಬರಿಯಾಗುವುದು ಸಹಜ. ಆದರೆ ಚಾನಾಗೊ ಮಾತ್ರ ಎದೆಗುಂದಲಿಲ್ಲ. ದಂತಗಳು ಜಾರಿದ ತಕ್ಷಣ ಅವರು ಕಿಂಚಿತ್ತೂ ಭಯಪಡದೆ, ಬಹಳ ಶಾಂತವಾಗಿ ಪ್ರೇಕ್ಷಕರಿಂದ ಸ್ವಲ್ಪ ದೂರ ಸರಿದರು. ವೇಗವಾಗಿ ತಮ್ಮ ಹಲ್ಲುಗಳನ್ನು ಸರಿಪಡಿಸಿಕೊಂಡು, ಮತ್ತೆ ವೇದಿಕೆಯ ಮುಂಭಾಗಕ್ಕೆ ಬಂದು ಅತ್ಯಂತ ಸೊಗಸಾಗಿ ತಮ್ಮ ಪರಿಚಯವನ್ನು ಪೂರ್ಣಗೊಳಿಸಿದರು. ಅವರ ಮುಖದಲ್ಲಿ ಅಸಮಾಧಾನದ ಬದಲು ವಿಶ್ವಾಸದ ನಗು ಎದ್ದು ಕಾಣುತ್ತಿತ್ತು.

ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

ಚಾನಾಗೊ ಅವರ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಕೆಲವರು ಇದನ್ನು ಹಾಸ್ಯ ಮಾಡಿದರೆ, ಇನ್ನು ಅನೇಕರು ಅವರ ಧೈರ್ಯಕ್ಕೆ ಶಹಬ್ಬಾಸ್ ಎಂದಿದ್ದಾರೆ. ಪರಿಪೂರ್ಣತೆಗಿಂತ ಆತ್ಮವಿಶ್ವಾಸ ಮುಖ್ಯ ಎಂಬುದನ್ನು ಇವರು ಸಾಬೀತುಪಡಿಸಿದ್ದಾರೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಭಾರತಕ್ಕೆ ಬರಲಿದ್ದಾರೆ ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ ವಿಜೇತೆ!

ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ 2026 ರ ಅಂತಿಮ ಸುತ್ತು ಮಾರ್ಚ್ 28 ರಂದು ನಡೆಯಲಿದೆ. ಈ ಸ್ಪರ್ಧೆಯಲ್ಲಿ ಯಾರು ವಿಜೇತರಾಗುತ್ತಾರೋ ಅವರು ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ 2026 ಸ್ಪರ್ಧೆಯಲ್ಲಿ ಥೈಲ್ಯಾಂಡ್ ಅನ್ನು ಪ್ರತಿನಿಧಿಸಲಿದ್ದಾರೆ. ಚಾನಾಗೊ ಅವರ ಈ ವೈರಲ್ ವಿಡಿಯೋ ಅವರಿಗೆ ಸ್ಪರ್ಧೆಯಲ್ಲಿ ಪ್ಲಸ್ ಪಾಯಿಂಟ್ ಆಗುತ್ತದೆಯೇ ಅಥವಾ ಸೋಲಿಗೆ ಕಾರಣವಾಗುತ್ತದೆಯೇ ಎಂದು ಕಾದು ನೋಡಬೇಕಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net