"ಖಮೇನಿ ಖತಂ, ಇರಾನ್ ಇನ್ನು ನಿಮ್ಮದು!" – ಟ್ರಂಪ್ ಗುಡುಗು; ಇಡೀ ದೇಶಕ್ಕೆ 'ರೆಬೆಲ್' ಕರೆ ನೀಡಿದ ಅಮೆರಿಕ ಅಧ್ಯಕ್ಷ! | Khamenei Death

Khamenei Death
Khamenei Death
Published on
Khamenei Death: ಅಮೆರಿಕ-ಇಸ್ರೇಲ್ ದಾಳಿಯಲ್ಲಿ, ಇರಾನ್‌ನ ಸರ್ವೋಚ್ಚ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಘೋಷಿಸಿದ್ದು, ಅವರ ಸಾವಿನ ಕುರಿತಾದ ಅನಿಶ್ಚಿತತೆಯನ್ನು ಕೊನೆಗೊಳಿಸಿದ್ದಾರೆ.
ಖಮೇನಿ ಅಷ್ಟೆ ಅಲ್ಲದೇ ಅವರ ಅಳಿಯ ಮತ್ತು ಸೊಸೆ ಸಾವನ್ನಪ್ಪಿದ್ದಾರೆ ಎಂದು ಟೆಹ್ರಾನ್ ನಗರ ಮಂಡಳಿಯ ಸದಸ್ಯರನ್ನು ಉಲ್ಲೇಖಿಸಿ ಹಲವಾರು ಮಾಧ್ಯಮ ವರದಿಗಳು ತಿಳಿಸಿವೆ. ಖಮೇನಿ ದೇಹದ ಛಾಯಾಚಿತ್ರವನ್ನು ಟ್ರಂಪ್ ಮತ್ತು ನೆತನ್ಯಾಹು ಅವರಿಗೆ ತೋರಿಸಲಾಗಿದೆ ಎಂದು ಇಸ್ರೇಲ್ ಮಾಧ್ಯಮಗಳು ಹೇಳಿಕೊಂಡಿವೆ.

ಖಮೇನಿ ಸಾವನ್ನಪ್ಪಿದ್ದಾರೆ ಎಂದ ಇರಾನ್​ ಮಾಧ್ಯಮಗಳು

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಸಂಘಟಿತ ಮಿಲಿಟರಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂದು ಇರಾನ್‌ನ ರಾಜ್ಯ ಮಾಧ್ಯಮ ಅಧಿಕೃತವಾಗಿ ದೃಢಪಡಿಸಿದೆ. ಟ್ರಂಪ್ ಹೇಳಿಕೆಗಳನ್ನು ಅನುಸರಿಸಿ ತಸ್ನಿಮ್ ನ್ಯೂಸ್ ಏಜೆನ್ಸಿ ಮತ್ತು ಫಾರ್ಸ್ ನ್ಯೂಸ್ ಏಜೆನ್ಸಿಯಂತಹ ಪ್ರಮುಖ ಇರಾನಿನ ಸುದ್ದಿ ಸಂಸ್ಥೆಗಳಿಂದ ಈ ದೃಢೀಕರಣ ಬಂದಿದೆ.

ಕ್ರೂರ ವ್ಯಕ್ತಿ ಇನ್ನಿಲ್ಲ

ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​​ ಹಂಚಿಕೊಂಡಿರುವ ಟ್ರಂಪ್​, ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಗಳಲ್ಲಿ ಒಬ್ಬರಾದ ಖಮೇನಿ ಈಗ ಬದುಕಿಲ್ಲ ಎಂದಿದ್ದು, ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ಕಾರ್ಯಾಚರಣೆಯಲ್ಲಿ ಅವರು ಹತರಾಗಿದ್ದಾರೆ ಎಂದು ಹೇಳಿದ್ದಾರೆ.
ಅಮೆರಿಕದ ಅತ್ಯಾಧುನಿಕ ಇಂಟೆಲಿಜೆನ್ಸ್ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ಖಮೇನಿಗೆ ಸಾಧ್ಯವಾಗಲಿಲ್ಲ. ಅವರ ಜೊತೆಗಿದ್ದ ಇತರ ನಾಯಕರು ಕೂಡ ಸಾವನ್ನಪ್ಪಿದ್ದಾರೆ. ಅವರ ಸಾವು ಕೇವಲ ಇರಾನ್ ಜನತೆಗೆ ಮಾತ್ರವಲ್ಲ, ಆತನಿಂದ ಹತ್ಯೆಗೀಡಾದ, ತೊಂದರೆ ಅನುಭವಿಸಿದ ವಿಶ್ವದ ಎಲ್ಲಾ ನಾಗರಿಕರಿಗೆ ಸಿಕ್ಕ ನ್ಯಾಯ ಎಂದು ಕರೆದಿದ್ದಾರೆ.
ಇದು ನಿಮ್ಮ ದೇಶವನ್ನು ನೀವು ಮರಳಿ ಪಡೆಯಲು ಸಿಕ್ಕಿರುವ ಅತ್ಯಂತ ದೊಡ್ಡ ಸುವರ್ಣಾವಕಾಶವಾಗಿದ್ದು, ದಶಕಗಳ ಕಾಲ ನೀವು ಸಹಾಯಕ್ಕಾಗಿ ಕೇಳುತ್ತಿದ್ದಿರಿ, ಈಗ ನಿಮ್ಮನ್ನು ರಕ್ಷಿಸುವ ಅಧ್ಯಕ್ಷ ನಿಮ್ಮೊಂದಿಗಿದ್ದಾರೆ ಎಂದು ಇರಾನ್ ಜನತೆಯನ್ನು ಉದ್ದೇಶಿಸಿ ಟ್ರಂಪ್​ ಈ ರೀತಿ ಬರೆದುಕೊಂಡಿದ್ದಾರೆ.
ಈ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಇರಾನ್ ಈಗ ಪ್ರತಿಜ್ಞೆ ಮಾಡಿ, ಕುವೈತ್, ಇರಾಕ್, ಬಹ್ರೇನ್ ಮತ್ತು ಕತಾರ್ ಸೇರಿದಂತೆ ಈ ಪ್ರದೇಶದಲ್ಲಿನ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ. ದುಬೈ ಮತ್ತು ಅಬುಧಾಬಿಯಲ್ಲಿ ಇರಾನಿನ ಕ್ಷಿಪಣಿ ದಾಳಿಗಳು ವರದಿಯಾಗಿದ್ದು, ಇದರಲ್ಲಿ ವ್ಯಕ್ತಿಯೊಬ್ಬ ಸಾವನಪ್ಪಿದ್ದಾನೆ ಎನ್ನಲಾಗಿದೆ.
ಈ ದಾಳಿಗಳು ಗಲ್ಫ್ ರಾಷ್ಟ್ರಗಳಿಂದ ಟೀಕೆಗೆ ಗುರಿಯಾಗಿದ್ದು, ಈ ರೀತಿಯ ದ್ವೇಶವನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಕರೆ ನೀಡಿವೆ. ಅನೇಕ ಯುರೋಪಿಯನ್ ರಾಷ್ಟ್ರಗಳು ಸಹ ಸಂವಾದದ ಮೂಲಕ ಈ ಸಂಘರ್ಷವನ್ನು ಪರಿಹರಿಸಬೇಕೆಂದು ಒತ್ತಾಯಿಸಿವೆ. ಮಧ್ಯಪ್ರಾಚ್ಯದ ಪರಿಸ್ಥಿತಿಯ ಬಗ್ಗೆ ಭಾರತ ಕೂಡ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಬೆಳವಣಿಗೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದೆ. ಭಾರತವು ಈ ಪ್ರದೇಶದ ತನ್ನ ಎಲ್ಲಾ ನಾಗರಿಕರಿಗೆ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಮತ್ತು ಈ ಪ್ರದೇಶದ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿರಲು ಸೂಚಿಸಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net